ಕರಾವಳಿ

ಬಾಬು ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಪ್ರಮುಖ ಆರೋಪಿಯ ಜಾಮೀನು ಅರ್ಜಿ ವಜಾ

Pinterest LinkedIn Tumblr

ಕುಂದಾಪುರ: ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಕಲ್ಕಂಬದಿಂದ ದೇವಲ್ಕುಂದಕ್ಕೆ ಹೋಗುವ ರಸ್ತೆಯ ಗೇರು ಹಾಡಿಯಲ್ಲಿ ಡಿ.17 ರಂದು ನಡೆದ ಟೆಂಪೋ ಮಾಲಕ ಹಾಗೂ ಚಾಲಕ ವೃತ್ತಿ ನಡೆಸಿಕೊಂಡಿದ್ದ ಚೋರ್ಮಕ್ಕಿ ನಿವಾಸಿ ಬಾಬು ಶೆಟ್ಟಿ (55) ಎಂಬವರ ಕೊಲೆಯ ಪ್ರಮುಖ ಆರೋಪಿ ಕೊಡ್ಲಾಡಿ ಬಾನಳ್ಳಿ ಅಸಿಮನೆ ನಿವಾಸಿ ತೇಜಪ್ಪ ಶೆಟ್ಟಿ (68) ಎಂಬಾತ ವಕೀಲರ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಕುಂದಾಪುರದಲ್ಲಿನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನರಹರಿ ಪ್ರಭಾಕರ ಮರಾಠೆ ಅವರು ವಜಾಗೊಳಿಸಿ ಆದೇಶಿಸಿದ್ದಾರೆ.

(ಕೊಲೆಗಾರ ತೇಜಪ್ಪ ಶೆಟ್ಟಿ)

ತನಗೆ ವಯಸ್ಸಾಗಿದ್ದು, ಅನಾರೋಗ್ಯ ಕಾಡುತ್ತಿದೆ ಎಂಬ ಕಾರಣವನ್ನು ನೀಡಿ ನ್ಯಾಯಾಲಯದಲ್ಲಿ ವಕೀಲರ ಮೂಲಕ ಜಾಮೀನು ಅರ್ಜಿ ಸಲ್ಲಿಸಲಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿನ ವೈದ್ಯಕೀಯ ವರದಿ ಪ್ರಕಾರ ತೇಜಪ್ಪ ಶೆಟ್ಟಿ ಆರೋಗ್ಯವಂತರಾಗಿದ್ದಾರೆ ಎಂಬ ವರದಿಯನ್ನು ಪ್ರಾಸಿಕ್ಯೂಷನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ಬೇಳೂರು ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದಾರೆ.

(ಕೊಲೆಯಾದ ಬಾಬು ಶೆಟ್ಟಿ)

ಪ್ರಕರಣದ ಹಿನ್ನೆಲೆ…
ಡಿ.17 ರಂದು ಮಧ್ಯಾಹ್ನ ಕಲ್ಕಂಬ ಎಂಬಲ್ಲಿ ನಡೆದ ಈ ಕೊಲೆ ಜಿಲ್ಲೆಯನ್ನೇ ಬೆಚ್ಚಿಬೀಳಿಸಿತ್ತು. ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಅಂದಿನ ಕುಂದಾಪುರ ಸಿಪಿಐ ಮಂಜಪ್ಪ ಡಿ.ಆರ್, ಉಡುಪಿ ಡಿಸಿಐಬಿ ಇನ್ಸ್‌ಪೆಕ್ಟರ್‌ ಸಿ. ಕಿರಣ್, ಗ್ರಾಮಾಂತರ ಠಾಣೆ ಪಿಎಸ್ಐ ರಾಜ್ ಕುಮಾರ್ ಹಾಗೂ ಪೊಲೀಸರ ತಂಡ ಹತ್ತು ದಿನಗಳ ಒಳಗೆ ಕೊಲೆಗೆ ಸುಪಾರಿ ಕೊಟ್ಟ ತೇಜಪ್ಪ ಶೆಟ್ಟಿ ಸಹಿತ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದರು. ಗುಲ್ವಾಡಿ ಶೆಟ್ರಕಟ್ಟೆ ನಿವಾಸಿ ಉದಯರಾಜ್ ಶೆಟ್ಟಿ (55), ಕೆಂಚನೂರು ಮಾವಿನಕೆರೆ ನಿವಾಸಿ ರಮೇಶ್ ಪೂಜಾರಿ (25), ಆನಗಳ್ಳಿ ಬಡಾಬೈಲು ನಿವಾಸಿ ರಾಘವೇಂದ್ರ ಅಲಿಯಾಸ್ ಗುರು (24), ಆನಗಳ್ಳಿ ಕೆಂಪನತೊಪ್ಲುವಿನ ಪ್ರವೀಣ್ ಪೂಜಾರಿ (25), ಬಸ್ರೂರು ಮೂಡುಕೇರಿ ನಿವಾಸಿ ಸಚಿನ್ ಪೂಜಾರಿ (21) ಬಂಧಿತರಾಗಿದ್ದರು. ಆರೋಪಿ ತೇಜಪ್ಪ ಶೆಟ್ಟಿ ಮತ್ತು ಮತ್ತು ಕೊಲೆಯಾದ ಬಾಬು ಶೆಟ್ಟಿ ನಡುವೆಯಿದ್ದ ವೈಷಮ್ಯವೇ ಕೊಲೆಗೆ ಕಾರಣವಾಗಿತ್ತು, ಹಾಗೂ ಇದೊಂದು ಸುಪಾರಿ ಕೊಲೆ ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು.

(ವರದಿ- ಯೋಗೀಶ್ ಕುಂಭಾಸಿ)

ಇದನ್ನೂ ಓದಿರಿ-

ಮಟಮಟ ಮಧ್ಯಾಹ್ನವೇ ಬೈಕ್ ಸವಾರನನ್ನು ಅಟ್ಟಾಡಿಸಿ ಮಚ್ಚಲ್ಲಿ ಕೊಚ್ಚಿ ಕೊಂದ ಕಿರಾತಕರು!

ಕಲ್ಕಂಬ ಬಾಬು ಶೆಟ್ಟಿ ಕೊಲೆಗಾರರ ಪತ್ತೆ ಹಚ್ಚಲು ಪೊಲೀಸರಿಂದ ತನಿಖೆ ಚುರುಕು

ಜಾಗದ ವಿವಾದಕ್ಕೆ ಬಲಿಯಾದರಾ ಬಾಬು ಶೆಟ್ಟಿ?- 13 ಮಂದಿ ವಿರುದ್ಧ ಸಹೋದರನ ದೂರು!

ಹಾಡುಹಗಲಲ್ಲೇ ಚೋರ್ಮಕ್ಕಿ ಬಾಬು ಶೆಟ್ಟಿ ಬರ್ಬರ ಕೊಲೆ ಪ್ರಕರಣ- ಆರು ಮಂದಿ ಅರೆಸ್ಟ್

‘ನಿನ್ನ ಕೈಯಲ್ಲಿ ಏನಾಗುತ್ತೆ’- ಎಂದ ಬಾಬು ಶೆಟ್ಟಿ: ಸುಪಾರಿ ಕೊಟ್ಟು ಕೊಂದ ಕಿರಾತಕ ಮುದುಕ!

Comments are closed.