ಕರಾವಳಿ

‘ನಿನ್ನ ಕೈಯಲ್ಲಿ ಏನಾಗುತ್ತೆ’- ಎಂದ ಬಾಬು ಶೆಟ್ಟಿ: ಸುಪಾರಿ ಕೊಟ್ಟು ಕೊಂದ ಕಿರಾತಕ ಮುದುಕ!

Pinterest LinkedIn Tumblr

 

ಉಡುಪಿ: ಕುಂದಾಪುರ ತಾಲೂಕಿನ ಕನ್ಯಾನ ಗ್ರಾಮದ ಕಲ್ಕಂಬದಿಂದ ದೇವಲ್ಕುಂದಕ್ಕೆ ಹೋಗುವ ರಸ್ತೆಯ ಗೇರು ಹಾಡಿಯಲ್ಲಿ ಟೆಂಪೋ ಮಾಲಕ ಹಾಗೂ ಚಾಲಕ ವೃತ್ತಿ ನಡೆಸಿಕೊಂಡಿದ್ದ ಚೋರ್ಮಕ್ಕಿ ನಿವಾಸಿ ಬಾಬು ಶೆಟ್ಟಿ (55) ಎಂಬವರನ್ನು ಡಿ.17 ರಂದು ದುಷ್ಕರ್ಮಿಗಳು ಮಾರಕಾಯುಧಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದರು. ಈ ಕೊಲೆಗೆ ಪ್ರಮುಖ ಆರೋಪಿ ಮತ್ತು ಕೊಲೆಯಾದ ಬಾಬು ಶೆಟ್ಟಿ ನಡುವೆಯಿದ್ದ ವೈಷಮ್ಯ ಕಾರಣ ಎಂದು ಪೊಲೀಸರ ತನಿಖೆ ವೇಳೆ ತಿಳಿದುಬಂದಿದೆ. ಕೊಲೆಯ ಆರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

(ಕೊಲೆಗಾರ ತೇಜಪ್ಪ, ಕೊಲೆಯಾದ ಬಾಬು ಶೆಟ್ಟಿ)

ಕೊಡ್ಲಾಡಿ ಬಾನಳ್ಳಿ ಅಸಿಮನೆ ನಿವಾಸಿ ತೇಜಪ್ಪ ಶೆಟ್ಟಿ (68) ಈ ಕೊಲೆಯ ಪ್ರಮುಖ ಆರೋಪಿ, ಗುಲ್ವಾಡಿ ಶೆಟ್ರಕಟ್ಟೆ ನಿವಾಸಿ ಉದಯರಾಜ್ ಶೆಟ್ಟಿ (55), ಕೆಂಚನೂರು ಮಾವಿನಕೆರೆ ನಿವಾಸಿ ರಮೇಶ್ ಪೂಜಾರಿ (25), ಆನಗಳ್ಳಿ ಬಡಾಬೈಲು ನಿವಾಸಿ ರಾಘವೇಂದ್ರ ಅಲಿಯಾಸ್ ಗುರು (24), ಆನಗಳ್ಳಿ ಕೆಂಪನತೊಪ್ಲುವಿನ ಪ್ರವೀಣ್ ಪೂಜಾರಿ (25), ಬಸ್ರೂರು ಮೂಡುಕೇರಿ ನಿವಾಸಿ ಸಚಿನ್ ಪೂಜಾರಿ (21) ಬಂಧಿತರು.

(ಕೊಲೆಯ ಆರೋಪಿಗಳು)

ನಿನ್ನತ್ರ ಏನಾಗುತ್ತೆ?- ಅಂದಿದ್ದಕ್ಕೆ ಕೊಲೆ!
ತೇಜಪ್ಪ ಶೆಟ್ಟಿ ಮಗ ರವಿರಾಜನಿಗೆ ಈ ಹಿಂದೆ ಮೃತ ಬಾಬು ಶೆಟ್ಟಿಯ ಕಡೆಯವನಾದ ಹರೀಶ್ ಶೆಟ್ಟಿಯು ಹಲ್ಲೆ ನಡೆಸಿದ್ದು, ಹಲ್ಲೆಯ ನಂತರ ಹರೀಶ್ ಶೆಟ್ಟಿಯು ತಲೆಮರೆಸಿಕೊಂಡು ಬಳಿಕ ನ್ಯಾಯಾಲಯದ ಜಾಮೀನು ಪಡಕೊಂಡ ನಂತರ ಊರಿನಲ್ಲಿ ರಾಜಾರೋಷವಾಗಿ ತಿರುಗಾಡಿಕೊಂಡಿದ್ದ. ಇದೇ ವಿಚಾರವಾಗಿ ಬಾಬು ಶೆಟ್ಟಿಯು ತೇಜಪ್ಪ ಶೆಟ್ಟಿ ಪೇಟೆ, ಹಾಗೂ ಸಿಕ್ಕಿದ ಕಡೆಗಳಲ್ಲೆಲ್ಲಾ ಅವಮಾನವಾಗುವ ರೀತಿಯಲ್ಲಿ ಹೀಯಾಳಿಸುತ್ತಿದ್ದು, ತನ್ನ ಕಡೆಯವರನ್ನು ಏನೂ ಮಾಡಲಿಕ್ಕೆ ಆಗಲಿಲ್ಲ ಎಂದು ಹೇಳಿ ಮತ್ತಷ್ಟು ದ್ವೇಷ ಹೆಚ್ಚುವಂತೆ ಮಾಡಿದ್ದ. ಇದರಿಂದ ರೋಸಿಹೋದ ತೇಜಪ್ಪ ಶೆಟ್ಟಿ ಬಾಬು ಶೆಟ್ಟಿಯನ್ನು ಕೊಲೆ ಮಾಡಿಯೇ ಬಿಡಬೇಕು ಎಂದು ತೀರ್ಮಾನಿಸಿಯೇ ಬಿಟ್ಟ.

50 ಸಾವಿರಕ್ಕೆ ಸುಫಾರಿ!
ಹೇಗಾದರೂ ಮಾಡಿ ಬಾಬು ಶೆಟ್ಟಿಯನ್ನು ಮುಗಿಸಲೇ ಬೇಕು ಅಂದುಕೊಂಡ ತೇಜಪ್ಪ ಶೆಟ್ಟಿ ಸುಮ್ಮನೆ ಕೂರಲಿಲ್ಲ. ಗೆಳೆಯ ಉದಯರಾಜ್ ಶೆಟ್ಟಿ ಹಾಗೂ ರಮೇಶ್ ಪೂಜಾರಿಯೊಂದಿಗೆ ಕೊಲೆಗೊಂದು ಒಳಸಂಚು ನಡೆಸುತ್ತಾನೆ. 50 ಸಾವಿರ ಸುಪಾರಿ ಹಣ ಹಾಗೂ ಕೇಸಿನ ಎಲ್ಲಾ ಖರ್ಚನ್ನು ತಾನೇ ನಿಭಾಯಿಸುವುದಾಗಿ ಡೀಲ್ ಕುದುರಿಸುತ್ತಾನೆ. ಅದರಂತೆಯೇ ಗೊಬ್ಬರ ಸಾಗಾಟವಿದೆ ನೋಡಲು ಬನ್ನಿ ಎಂದು ಕರೆದು ರಮೇಶ್ ಪೂಜಾರಿ ಹಾಗೂ ಆತನ ಸ್ನೇಹಿತರ ಇತರ ಆರೋಪಿಗಳು ಹಾಡುಹಗಲೇ ಬಾಬು ಶೆಟ್ಟಿಯನ್ನು ಹೊಡೆದು ಸಾಯಿಸಿಯೇ ಬಿಡುತ್ತಾರೆ.

(ಉಡುಪಿ ಎಸ್ಪಿ ನಿಶಾ ಜೇಮ್ಸ್)

ಪೊಲೀಸರಿಗೆ ಸಿಕ್ಕಿದ್ದು ಹೇಗೆ?
ಕೊಲೆ ಕೃತ್ಯವೆಸಗಿದ ಬಳಿಕ ಆರೋಪಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆಮರೆಸಿಕೊಂಡಿದ್ದು, ನಂತರ ಊರಿಗೆ ಬಂದಾಗ ಪೊಲೀಸರು ತಮಗಾಗಿ ಹುಡುಕಾಡುವ ವಿಷಯ ತಿಳಿದು ಡಿ25ರಂದು ದೂರ ಊರಿಗೆ ಹೋಗಿ ತಲೆ ಮರೆಸಿಕೊಳ್ಳುವ ಸಲುವಾಗಿ ರೇಲ್ವೇ ನಿಲ್ದಾಣಕ್ಕೆ ಬಂದಿದ್ದರು. ಇದೇ ವೇಳೆ ಪೊಲೀಸರ ತಂಡ ಎಲ್ಲಾ ಆರೋಪಿಗಳನ್ನು ಬಂಧಿಸಿದೆ.

(ಕುಂದಾಪುರ ಎಎಸ್ಪಿ ಹರಿರಾಂ ಶಂಕರ್)

ಕೃತ್ಯಕ್ಕೆ ಬಳಸಲಾದ ಮಾರಕಾಯುಧಗಳು, ಸಿಮ್, ಬಟ್ಟೆ ಇತ್ಯಾದಿಗಳನ್ನು ವಶಪಡಿಸಿಕೊಂಡಿದ್ದು, ಮಾರುತಿ ಆಮ್ನಿ ಕಾರು ಮತ್ತು 2 ಮೋಟಾರು ಸೈಕಲ್ ಗಳನ್ನು ವಶಪಡಿಸಿಕೊಳ್ಳಲು ಬಾಕಿಯಿದೆ. ಡಿ.26 ರಂದು ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಡಿ.31ರವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ.

(ಕುಂದಾಪುರ ಗ್ರಾಮಾಂತರ ಠಾಣೆ ಪಿಎಸ್ಐ ರಾಜಕುಮಾರ್)

50 ಸಾವಿರ ನಗದು ಬಹುಮಾನ…
ಉಡುಪಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಯವರ ಆದೇಶದಂತೆ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ ಹಾಗೂ ಕುಂದಾಪುರ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ಸಿಪಿಐ ಮಂಜಪ್ಪ ಡಿ.ಆರ್, ಡಿಸಿಐಬಿ ಇನ್ಸ್‌ಪೆಕ್ಟರ್‌ ಸಿ. ಕಿರಣ್, ಕುಂದಾಪುರ ಪಿಎಸ್ಐ ಹರೀಶ್, ಗ್ರಾಮಾಂತರ ಠಾಣೆ ಪಿಎಸ್ಐ ರಾಜ್ ಕುಮಾರ್, ಶಂಕರನಾರಾಯಣ ಪಿಎಸ್ಐ ಶ್ರೀಧರ ನಾಯ್ಕ್, ಅಮಾಸೆಬೈಲು ಪಿಎಸ್ಐ ಶೇಖರ, ಪ್ರೋಬೇಶನರಿ ಪಿ.ಎಸ್.ಐ.ರವರುಗಳಾದ ಯೂನಿಸ್‌ ಇಸನೂರು, ಭೀಮಾ ಶಂಕರ್‌, ಸುದರ್ಶನ್‌, ಡಿಸಿಐಬಿ ತಂಡದ ರವಿಚಂದ್ರ, ಚಂದ್ರ ಶೆಟ್ಟಿ, ರಾಜಕುಮಾರ, ಸುರೇಶ್, ರಾಮು ಹೆಗ್ಡೆ, ಸಂತೋಷ್ ಕುಂದರ್, ದಯಾನಂದ ಪ್ರಭು, ರಾಘವೇಂದ್ರ, ಶಿವಾನಂದ, ಚಾಲಕ ರಾಘವೇಂದ್ರ ಹಾಗೂ ಸಹಾಯಕ ಪೊಲೀಸ್ ಅಧಿಕ್ಷಕರ ಅಪರಾಧ ಪತ್ತೆ ತಂಡದ ಸಿಬ್ಬಂದಿಗಳಾದ ಸಂತೋಷ ಕುಮಾರ್‌‌, ಮಂಜುನಾಥ, ಸಂತೋಷ ಕೊರವಾಡಿ, ಮೋಹನ್‌, ಸಂತೋಷ ಖಾರ್ವಿ, ವಿಜಯ, ಚಂದ್ರ ಶೇಖರ, ಕೃಷ್ಣ, ಪ್ರಿನ್ಸ್‌, ಸಿಡಿಆರ್ ವಿಭಾಗದ ಶಿವಾನಂದ ಮತ್ತು ಕುಂದಾಪುರ ಗ್ರಾಮಾಂತರ ಮತ್ತು ಅಮಾಸೆಬೈಲು ಠಾಣಾ ಸಿಬ್ಬಂದಿಯವರು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಪತ್ತೆ ತಂಡಕ್ಕೆ ಉಡುಪಿ ಎಸ್ಪಿ ನಿಶಾ ಜೇಮ್ಸ್, ಅವರು 50 ಸಾವಿರ ನಗದು ಘೋಷಿಸಿದ್ದಾರೆ.

ಪೊಲೀಸರ ಕಾರ್ಯಕ್ಕೆ ಬೈಂದೂರು ಶಾಸಕರ ಶಹಬ್ಬಾಸ್ ಗಿರಿ…
ಬೈಂದೂರು ಕ್ಷೇತ್ರದಲ್ಲಿ ಯಾವುದೇ ರೌಡಿಸಂ, ರೌಡಿ ಎಲಿಮೆಂಟ್, ಕೊಲೆಗಡುಕರಿಗೆ ನಮ್ಮ ಸಪೋರ್ಟ್ ಇಲ್ಲ ಎಂದು ಬೈಂದೂರು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ಹೇಳಿದ್ದಾರೆ.

ಹಾಡು ಹಗಲು ಇಂತಹ ಕೊಲೆ ನಡೆದರೆ ಜನ ನಿರ್ಬೀತಿಯಿಂದ ಸಂಚರಿಸುವುದು ಅಸಾಧ್ಯ. ಹೀಗಾಗಿ ರೌಡಿಸಂ, ಕೇಡಿತನ ಮಾಡುವರನ್ನು ಹಿಡಿದು ಕಾನೂನು ಕ್ರಮಕೈಗೊಳ್ಳುವಂತೆ ಪೊಲೀಸ್ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಅಮಾಯಕರಿಗೆ ತೊಂದರೆಯಾಗದಂತೆ ತಿಳಿಸಿದ್ದೇನೆ.

ಚೋರ್ಮಕ್ಕಿ ಬಾಬು ಶೆಟ್ಟಿ ಅವರ ಕೊಲೆ ಆರೋಪಿಗಳನ್ನು ಅತೀ ಶೀಘ್ರ ಬಂಧಿಸಿದ ಕುಂದಾಪುರ ಎಎಸ್ಪಿ ಹರಿರಾಂ ಶಂಕರ್ ತಂಡ ನಿಜಕ್ಕೂ ಪ್ರಶಂಸನಾರ್ಹರು ಎಂದು ಶಾಸಕರು ಮೆಚ್ಚುಗೆ ವ್ಯಕ್ತಪಡಿಸಿದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.