ಕರಾವಳಿ

ಸೀಟ್ ಬೆಲ್ಟ್ ದಂಡ ಪ್ರಕರಣದ ವಿಡಿಯೋ ವೈರಲ್- ಮಹಿಳೆ ವಿರುದ್ಧ ಪ್ರಕರಣ ದಾಖಲು!

Pinterest LinkedIn Tumblr

ಕುಂದಾಪುರ : ವಾಹನ ತಪಾಸಣೆ ಮಾಡುವಾಗ ಪೊಲೀಸರ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿ, ಮೊಬೈಲ್‌ನಲ್ಲಿ ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆನ್ನಲಾದ ಮಹಿಳೆ ವಿರುದ್ಧ ಕುಂದಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.

ಜ.21 ರಂದು ಕುಂದಾಪುರ ಎಎಸೈ ತಾರಾನಾಥ್ ಹೈವೇ ಪೆಟ್ರೋಲ್ ವಾಹನದಲ್ಲಿ ಚಾಲಕ ಅಶ್ರಫ್, ಹೋಮ್ ಗಾರ್ಡ್ ಸಿಬ್ಬಂದಿ ಸಂದೀಪ ದಾಸ್ ಜೊತೆ ಹೆಮ್ಮಾಡಿ ಸಮೀಪ ರಾಪ್ಷ್ರೀಯ ಹೆದ್ದಾರಿ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಕಾರು ಚಲಾಯಿಸಿಕೊಂಡು ಬಂದ ಶಾಂತಿ ಪಿಕಾರ್ಡೊ ಸೀಟ್ ಬೆಲ್ಟ್ ಹಾಕದೇ ವಾಹನ ಚಲಾಯಿಸಿಕೊಂಡು ಬರುತ್ತಿರುವುದನ್ನು ಕಂಡು ಕಾರನ್ನು ನಿಲ್ಲಿಸಿ ತಪಾಸಣೆ ಮಾಡಿ ಸೀಟ್ ಬೆಲ್ಟ್ ಹಾಕದೇ ಇರುವ ಅಪರಾಧಕ್ಕೆ 500 ದಂಡ ಹಾಕಲಾಗಿತ್ತು.

ದೂರಿನ ಸಾರಾಂಶವೇನು?
ತಾನು ಸೀಟ್ ಬೆಲ್ಟ್ ಹಾಕಿದ್ದೆ ಎಂದು ಪೊಲೀಸರ ಜೊತೆ ಮಾತಿಗಿಳಿದ ಮಹಿಳೆ ‘ನಾನು ಸೀಟ್ ಬೆಲ್ಟ್ ಹಾಕಿದ್ದೇನೆ ಮತ್ತೆ ನೀವು ಹಾಕುವುದಿಲ್ಲ ಎಂದು ಹೇಳುವುದು ಏನು, ನಂತರ ಡಾಕಿಮೆಂಟ್ ಕೊಟ್ರು ನೀವು 500/- ರೂಪಾಯಿ ಕೊಡು ಅಂತಾ ಕೇಳುವುದು ಏನು ಏನು, ನಿಮ್ದು ಹಣ ಕೇಳಲಿಕ್ಕೆ ಏನು, ಎಷ್ಟು ಕೊಬ್ಬು, ನೀವು ಹಣ ಮಾಡುವುದಕ್ಕೆ ರಸ್ತೆ ಮೇಲೆ ನಿಲ್ಲುವುದು. ಚೆಕ್ಕಿಂಗ್ ಅಂತಾ ನಿಲ್ಲುವುದು ಸುಮ್ನೆ ಹಣ ಕೀಳುವುದು, ಯಾವ ಸ್ಟೇಶನ್ ಬರ್ತದೆ ನಿಮ್ದು, ಪೊಲೀಸರು ಸೋಮಾರಿ ಹಾಗೆ ನಿಲ್ಲುವುದು ಎಂದು ಏರು ಧ್ವನಿಯಲ್ಲಿ ಮಾತನಾಡಿ ಕಾರಿನ ದಾಖಲಾತಿ ತಪಾಸಣೆ ಮಾಡಲು ಬಿಡದೇ ಹಾಗೂ ಇತರ ವಾಹನಗಳನ್ನು ತಪಾಸಣೆ ಮಾಡಲು ಬಿಡದೇ ಸರಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ. ಕಾರಿನ ಚಾಲಕಿ ಮಹಿಳೆಗೆ ಅವರ ತಪ್ಪಿನ ಬಗ್ಗೆ ಮೋಟಾರು ವಾಹನ ಕಾಯ್ದೆಯಡಿ ಪೊಲೀಸ್ ನೋಟೀಸು ಬರೆದು ಕೊಟ್ಟರೂ ನೋಟಿಸನ್ನು ತೆಗೆದುಕೊಳ್ಳಲು ನಿರಾಕರಿಸಿದ್ದಾರೆ. ಹಾಗೂ ಪೊಲೀಸರನ್ನು ನಿಂದಿಸಿ ವಾಗ್ವಾದ ಮಾಡುವಾಗ ಅವರ ಮೊಬೈಲ್ ನಿಂದ ವಿಡಿಯೋ ಚಿತ್ರೀಕರಣ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿ ಸರಕಾರಿ ಕರ್ತವ್ಯವನ್ನು ನಿರ್ವಹಿಸಲು ಮನಸ್ಥೈರ್ಯವನ್ನು ಕುಗ್ಗಿಸುವಂತೆ ಮಾಡಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

(ಎಎಸ್ಐ ತಾರಾನಾಥ್)

ತಾ.ಪಂ ಸಭೆಯಲ್ಲೂ ಪ್ರಸ್ತಾಪ….
ವಿಡಿಯೋ ವೈರಲ್ ಆದ ದಿನದಂದೇ ಕುಂದಾಪುರ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆದಿದ್ದು ಸಭೆಯಲ್ಲಿ ವಿಡಿಯೋ ಬಗ್ಗೆ ಪ್ರಸ್ತಾಪವಾಗಿದ್ದು, ಸಭೆಯಲ್ಲಿದ್ದ ಸಂಚಾರಿ ಪೊಲೀಸರು ಸ್ಪಷ್ಟೀಕರಣ ನೀಡಿ, ಸೀಟ್ ಬೆಲ್ಟ್ ಕೈಯಲ್ಲಿ ಹಿಡಿದುಕೊಂಡು ಪೊಲೀಸರು ತಪಾಸಣೆ ಸಮಯ ಬೆಲ್ಟ್ ಹಾಕಿರುವುದಾಗಿ ವಾದಮಾಡಿದ್ದರು ಎಂದು ಸಂಚಾರಿ ಠಾಣೆ ಪಿಎಸ್ಐ ಹೇಳಿದ್ದರು.

ಈ ಬಗ್ಗೆ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.