ಕುಂದಾಪುರ: ಅಡುಗೆ ಮನೆಯಲ್ಲಿ ನಡೆಯುತ್ತಿದೆ ಮಕ್ಕಳ ಪಾಠ.. ಗೋಡನ್ನಲ್ಲಿ ಊಟ. ಬಯಲು ಶೌಚಾಲಯ ಮುಕ್ತ ಜಿಲ್ಲೆ ಎಂಬ ಹೆಗ್ಗಳಿಕೆ ಪಾತ್ರವಾದ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗಿಲ್ಲ ಸುಸಜ್ಜಿತ ಶೌಚಾಲಯ. ಶಾಲೆ ಹಿಂಬದಿಯಲ್ಲಿ ಕಿಂಡಿ ಆಣೆಕಟ್ಟ ಹಿನ್ನೀರು.. ಕಂಪೌಂಡ್ ಗೋಡೆ ಕುಸಿದ ಕಾರಣ ಅಪಾಯಕ್ಕೆ ಆಹ್ವಾನಿಸುವ ಸ್ಥಿತಿ. ಬೈಂದೂರು ತಾಲೂಕು ಕೆರ್ಗಾಲು ಗ್ರಾಮ ಪಂಚಾಯತ್ ನಂದನವನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಅವ್ಯವಸ್ಥೆಯಿದು.
ಕಳೆದ ವರ್ಷ ಮಳೆಗಾದ ಜೋರು ಮಳೆಗೆ ನಂದನವನ ಸರ್ಕಾರಿ ಕಿರಿಯ ಪ್ರಾತಮಿಕ ಶಾಲೆ ಮೂರು ಕೊಠಡಿ ಕುಸಿದಿದ್ದು, ಅಂದಿನಿಂದ ವಿದ್ಯಾರ್ಥಿಗಳಿಗೆ ಬಿಸಿ ಊಟದ ಕೊಠಡಿಯೇ ತರಗತಿ ಶಾಲೆಯಾಗಿದೆ. ಅಡುಗೆ ಸಾಮಾನು ಇಡುತ್ತಿದ್ದ ಕೊಠಡಿ ಸದ್ಯ ಅಡುಗೆ ಮನೆಯಾಗಿದೆ. ಒಂದರಿಂದ ಐದನೇ ತರಗತಿ ವರೆಗಿನ ಮಕ್ಕಳು ಒಂದೇ ಕೊಠಡಿಯಲ್ಲಿ ಕೂತು ಪಾಠ ಪ್ರವಚನ ಕೇಳಬೇಕು. ಒಂದೊಂದು ಗೋಡೆ ಬದಿಯಲ್ಲಿ ಇಟ್ಟ ಬೆಂಚಿನಲ್ಲಿ ಮಕ್ಕಳ ಕೂರಿಸಿ, ಶಿಕ್ಷಕರು ಪಾಠ ಮಾಡಬೇಕು. ಶಿಕ್ಷಣಕ್ಕೆ ಬೇಕಾದ ಮೂಲ ವ್ಯವಸ್ಥೆಯೇ ಇಲ್ಲಿ ಇಲ್ಲದಂತಾಗಿದೆ.

ಗೋಡನ್ನಲ್ಲಿ ಅಡುಗೆ ಕೆಲಸ ಎಲ್ಲಾ ಮುಗಿಸಿ, ಸ್ಟವ್ ಆರಿಸಿದ ನಂತರ ಒಂದಿಷ್ಟು ಮಕ್ಕಳು ಅಲ್ಲಿ ಕೂತು ಓದುವುದು ಬರೆಯುವುದು ಮಾಡುತ್ತಾರೆ. ಅಡುಗೆ ಮಾಡುವ ಸಮಯದಲ್ಲಿ ಮಾತ್ರ ಮಕ್ಕಳು ಹೋಗದಂತೆ ನೋಡಿಕೊಳ್ಳಲಾಗುತ್ತದೆ. ಅಂಗೈಅಗಲದ ಜಾಗದಲ್ಲಿ ಪಾಠ, ಶಾಲೆ ಪಕ್ಕದ ತೆಂಗಿನತೋಟವೇ ಆಟದ ಮೈದಾನ, ಬಯಲೇ ಶೌಚಾಲಯ. ಶಾಲೆಯಲ್ಲಿ 10 ಹೆಣ್ಣುಕ್ಕಳಿದ್ದು, ಮೂವರು ಶಿಕ್ಷಕರಿಯರಿದ್ದಾರೆ. ಶಾಲೆಯ ಒಟ್ಟು ಮಕ್ಕಳ ಸಂಖ್ಯೆ 25.
ಶಾಲೆ ಬಿದ್ದ ನಂತರ ಶಾಲೆಗೆ ಜನಪ್ರತಿನಿಧಿಗಳು, ಅಧಿಕಾರಿಗಳು ಎಲ್ಲರೂ ಭೇಟಿ ಕೊಟ್ಟಿದ್ದರೂ ಶಾಲೆ ಮೂಲಭೂತ ವ್ಯವಸ್ಥೆ ಸುಧಾರಿಸಿಲ್ಲ. ಮಲೆನಾಡು ಅಭಿವೃದ್ಧಿ ಯೋಜನೆಯಲ್ಲಿ 10 ಲಕ್ಷ ರೂ.ವೆಚ್ಚದಲ್ಲಿ ಒಂದು ಕೊಠಡಿ ಮಂಜೂರಾಗಿದ್ದು, ನಿರ್ಮಿತಿ ಕೇಂದ್ರದ ಮೂಲಕ ನಿರ್ಮಾಣ ಆಗುತ್ತದೆ ಅನ್ನೋದು ಭರವಸೆ ಮಾತ್ರವೇ ಆಗಿದೆ. ಕುಸಿದ ಮೂರು ಕೊಠಡ ಪುನರ್ ನಿರ್ಮಾಣ ಮಾಡಿ ಶಾಲಾ ಉಳಿಸಿಲು ಸಹಕಾರ ನೀಡಬೇಕು ಎನ್ನೋದು ಸ್ಥಳೀಯರ ಒತ್ತಾಯ.. ಇಲ್ಲದಿದ್ದರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಹಾಜರಾತಿ ತಪ್ಪಿ ಶಾಲೆಯೇ ಮುಚ್ಚಿಹೋಗುವ ಅಪಾಯವಿದೆ.
ಶತಮಾನ ಕಂಡ ಮಾದರಿ ಶಾಲೆ..
1914ರಲ್ಲಿ ಊರವರು ತಮ್ಮೂರಿನ ಯಾರೂ ಅಕ್ಷರ ಜ್ಞಾನವಿಲ್ಲದೆ ಉಳಿಯಬಾರದು ಎನ್ನುವ ಸದುದ್ದೇಶದಿಂದ ದಾನಪತ್ರದ ಮೂಲಕ ಶಾಲೆಗೆ 25 ಸೆನ್ಸ್ ಜಾಗ ಬಿಟ್ಟುಕೊಟ್ಟು ಶಾಲೆ ಆರಂಭಿಸಿದರು. ಕೆರ್ಗಾಲ್ ಗ್ರಾಮ ನಂದನವನ, ಕರ್ಕಿಕಳಿ, ಮಡಿಕಲ್ ಪರಿಸರದ ಮಕ್ಕಳಿಗೆ ಅಕ್ಷರ ಜ್ಞಾನ ನೀಡುವ ಮೂಲಕ ಶಾಲೆ ನಮ್ಮೂರ ಸರ್ಕಾರಿ ಶಾಲೆ ಎನ್ನುವ ಅಭಿಮಾನದ ಸಂಕೇತವಾಯಿತು. ಆರಂಭದಲ್ಲಿ ೪೦೦ಕ್ಕೂ ಮಿಕ್ಕ ಮಕ್ಕಳಿದ್ದು, ಉಪ್ಪುಂದ, ಮಡಿಕಲ್, ನಂದನವ ಪರಿಸರದ ಮಕ್ಕಳಿಗೂ ನಂದನವನ ಶಾಲೆ ಆಧಾರವಾಗಿತ್ತು. ಇಲ್ಲಿ ಕಲಿತ ವಿದ್ಯಾರ್ಥಿಗಳು ಡಾಕ್ಟರ್, ಇಂಜಿನಿಯರ್ ಆಗಿದ್ದಷ್ಟೇ ಅಲ್ಲದೆ ವಿದೇಶದಲ್ಲಿ ಉನ್ನತ ಹುದ್ದೆ ಅಲಂಕರಿಸಿದವರೂ ಇದ್ದಾರೆ. ನಮ್ಮೂರ ಶಾಲೆ ಎನ್ನುವ ಅಭಿಮಾನದಿಂದ ಹಳೇ ವಿದ್ಯಾರ್ಥಿಗಳು ಊರವರ ಸಹಕಾರದಲ್ಲಿ ಅದ್ದೂರಿ ವಾರ್ಷಿಕೋತ್ಸವ ಆಚರಿಸಿಕೊಂಡು ಬರುತ್ತಿದ್ದು, ಶತಮಾನ ಸಂಭ್ರಮ ಕೂಡಾ ಕಂಡಿದೆ.
ಸಚಿವರ ಸ್ಪಂದನೆ ಬೇಕಿದೆ..
ನಮ್ಮೂರಿನ ಸರ್ಕಾರಿ ಶಾಲೆ ಎನ್ನುವ ಹೆಮ್ಮೆ ಒಂದುಕಡೆಯದಾರೆ ತಮ್ಮೆದುರೇ ಮಕ್ಕಳ ಅಂಗೈಅಗಲದ ಜಾಗದಲ್ಲಿ ಪಾಠ ಕೇಳುವುದು ನೋಡಲು ಪರಿಸರದ ಜನರಿಗೆ ಆಗುತ್ತಿಲ್ಲ. ರಾಜ್ಯದ ಮುಖ್ಯಮಂತ್ರಿಯಿಂದ ಹಿಡಿದು, ಜಿಲ್ಲಾ ಉಸ್ತುವಾರಿ ಸಚಿವ, ಶಿಕ್ಷಣ ಸಚಿವ, ಶಾಸಕರ ತನಕ ಶಾಲೆ ಕಟ್ಟಡ ನಿರ್ಮಾಣ ಕುರಿತು ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಉಪ್ಪುಂದ ಶಿಕ್ಷಕಿ ಮೇಲಿನ ಹಲ್ಲೆ, ವಿದ್ಯಾರ್ಥಿಯ ಪಕ್ಕೆಲುಬು ವೀಡಿಯೋ ವೈರಲ್ ತನಕ ತಕ್ಷಣ ಸ್ಪಂದಿಸಿದ ಶಿಕ್ಷಣ ಸಚಿವರು ನಂದನವನ ಶಾಲೆ ದುಸ್ತಿತಿಗೆ ಸ್ಪಂದಿಸಿ, ಮೂರು ಕೊಠಡಿ ನಿರ್ಮಿಸಿ ಕೊಡುವ ಮೂಲಕ ಗ್ರಾಮೀಣ ಭಾಗದ ವಿದ್ಯಾದೇಗುಲವನ್ನು ಜೀರ್ಣೋದ್ದಾರ ಮಾಡುತ್ತಾರೆ ಎನ್ನುವ ನಿರೀಕ್ಷೆಯಲ್ಲಿ ವಿದ್ಯಾಭಿಮಾನಿಗಳಿದ್ದಾರೆ.
ನಂದನವನ ಶಾಲೆ ಗ್ರಾಮೀಣ ಭಾಗದ ವಿದ್ಯಾದೇಗುಲವಾಗಿದ್ದು, ಶಾಲೆ ಕಟ್ಟಡವಿಲ್ಲದೆ ಒಂದರಿಂದ ೫ನೇ ತರಗತಿ ಮಕ್ಕಳು ಅಂಗೈಅಗಲದ ಕಟ್ಟಡದಲ್ಲಿ ಕೂತು ಪಾಠ ಕೇಳಬೇಕಾಗಿದೆ. ಪ್ರತೀವರ್ಷ ಶಾಲೆಯಲ್ಲಿ ಹಾಜರಾತಿ ಹೆಚ್ಚುತ್ತಿದ್ದು, ಪ್ರಸಕ್ತ ವರ್ಷದಲ್ಲಿ 7ಮಕ್ಕಳು ಶಾಲೆಗೆ ಸೇರಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದೊಳಗೆ ಶಾಲಾ ಕಟ್ಟಡ ಕಟ್ಟದಿದ್ದರೆ, ಮಕ್ಕಳ ಶಾಲೆಗೆ ಸೇರಿಸಲು ಪೋಷಕರು ಹಿಂದೇಟು ಹಾಕಿ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ತಗ್ಗುವ ಅಪಾಯವಿದೆ. ಶಿಕ್ಷಣ ಇಲಾಖೆ ಎಚ್ಚೆತ್ತು ಬಿದ್ದುಹೋದ ಮೂರು ಕೊಠಡಿ ಪುನರ್ ನಿಮಾಣ ಮಾಡಿದರೆ ಶತಮಾನ ಕಂಡ ಶಾಲೆ ಉಳಿಯುತ್ತದೆ. ಗ್ರಾಮ ಪಂಚಾಯಿತಿ ಮೋಟರ್ ಅಳವಡಿಸಿ, ಟ್ಯಾಂಕ್ ಮೂಲಕ ಮಕ್ಕಳಿಗೆ ನೀರು ಪೂರೈಕೆ ಮಾಡಬೇಕು.
ವೆಂಕಟೇಶ ಪೂಜಾರಿ, ಸಂಘಟನಾ ಕಾರ್ಯದರ್ಶಿ, ಹಳೇ ವಿದ್ಯಾರ್ಥಿ ಸಂಘ ನಂದನವನ ಶಾಲೆ
ಬೈಂದೂರು ಶಾಸಕರ ತಮ್ಮ ನಿಧಿಯಿಂದ ಒಂದು ಕೊಠಡಿ ಮಂಜೂರು ಮಾಡಿದ್ದು, ಮಲೆನಾಡು ಅಭಿವೃದ್ಧಿ ಅನುದಾನದಲ್ಲಿ ಕೊಠಡಿ ನಿರ್ಮಿಸಲಾಗುತ್ತದೆ. ಆದರೆ ಶಾಲೆಗೆ ಒಂದು ಕೊಠಡಿ ಸಾಲದು, ಮಳೆಗಾಲದಲ್ಲಿ ಮೂರು ಕೊಠಡಿ ನೆಲ ಸಮವಾಗಿದ್ದು, ಮೂರು ಕೊಠಡಿ ನಿರ್ಮಿಸಿಕೊಡಬೇಕು. ಶಾಲೆ ಶೌಚಾಲಯ ನಿರುಪಯುಕ್ತವಾಗಿದ್ದು, ಪುನರ್ ನಿರ್ಮಾಣ ಮಾಡಿಕೊಡಬೇಕು. ಹಳೇ ವಿದ್ಯಾರ್ಥಿ ಸಂಘ ಶಾಲೆ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಆಂಗ್ಲಾ ಭಾಷಾ ಶಿಕ್ಷಕಿ ನಿಯುಕ್ತಿಮಾಡಿ ಅವರ ಸಂಬಳ ಕೂಡಾ ಭರಿಸುತ್ತಿದೆ. ಮಳೆಗಾಲ ಬರುವುದರೊಳಗೆ ಶಾಲಾ ಕಟ್ಟಡ ನಿರ್ಮಿಸಿಕೊಟ್ಟರೆ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳ ಹಾಜರಾತಿ ಮತ್ತಷ್ಟು ಹೆಚ್ಚಲಿದೆ.
ಲಕ್ಷ್ಮಣ ಮೊಗವೀರ, ಪ್ರಧಾನ ಕಾರ್ಯದರ್ಶಿ, ಹಳೇ ವಿದ್ಯಾರ್ಥಿ ಸಂಘ, ನಂದನವನ ಸಕಿಪ್ರಾ ಶಾಲೆ
ನಮ್ಮ ಶಾಲೆ 2019 ಅ.10, ರಂದು ಸುರಿದ ಭಾರಿ ಮಳೆಗೆ ಮೂರು ಕೊಠಡಿ, ಪೀಠೋಪಕರಣ ಸೇರಿದಂತೆ ಎಲ್ಲವೂ ಸಂಪೂರ್ಣ ನೆಲಸಮವಾಗಿದೆ. ರಾತ್ರಿ ಕಟ್ಟಡ ಕುಸಿದಿದ್ದರಿಂದ ಮಕ್ಕಳಿಗೆ ಅಪಾಯ ತಪ್ಪಿದೆ. ಉಳಿದ ಮಳೆಗಾಲ ಅಡುಗೆ ಕೋಣೆ, ಸ್ಟಾಕ್ ರೋಮಲ್ಲಿ ಮಕ್ಕಳ ಕೂರಿಸಿ ಪಾಠ ಮಾಡಿ ಕಳೆದೆವು. ಎಲ್ಲಾ ಮಕ್ಕಳು ಒಟ್ಟಿಗೆ ಕುಳಿತು ಅಡುಗೆ ಮನೆಯಲ್ಲಿ ಪಾಠ ಕೇಳುವ ಸ್ಥಿತಿ ಇದೆ. ಅಂದು ಎಲ್ಲಾ ಅಧಿಕಾರಿಗಳು ಜನಪ್ರತಿನಿಧಿಗಳು ಬಂದು ಹೋದರು. ಶಾಲೆಯ ಪುನರ್ನಿರ್ಮಾಣ ಬಗ್ಗೆ ಚಿಂತಿಸಿಲ್ಲಾ. ಮುಂದಿನ ಮಳೆಗಾಲ ಹತ್ತಿರವಾಗುತ್ತಿದ್ದು, ಎನಿಸಿಕೊಂಡರೆ ಭಯವಾಗುತ್ತದೆ.ಕನಿಷ್ಠ ೨ ತರಗತಿ ಕೋಣೆ 1 ಆಫೀಸ್ ರೂಂ 1 ಶೌಚಾಲಯ ಮತ್ತು ಮುತ್ರಾಲಯ, ಪೀಠೋಪಕರಣಗಳ ತುರ್ತು ಅಗತ್ಯವಿದೆ.
ಶಾರದಾ ಪೂಜಾರಿ, ಎಸ್ಡಿಎಂಸಿ ಅಧ್ಯಕ್ಷೆ, ಸ.ಕಿ.ಪ್ರಾ.ಶಾ.ನಂದನವನ
(ವರದಿ- ಯೋಗೀಶ್ ಕುಂಭಾಸಿ)
Comments are closed.