ಕರಾವಳಿ

ತಾಯಿ ಇಲ್ಲದ ಮಕ್ಕಳನ್ನು ಬಿಟ್ಟು ಮಲತಂದೆ ಪರಾರಿ- ಮಕ್ಕಳ ರಕ್ಷಣೆ

Pinterest LinkedIn Tumblr

ಉಡುಪಿ: ಬಿಜಾಪುರ ಮೂಲದ ರಾಜು ಎಂಬಾತ ಅದೇ ಮೂಲದ ಮಹಿಳೆಯೊಬ್ಬಳನ್ನು ಮದುವೆಯಾಗಿದ್ದು, ಆಕೆಯು ಅನಾರೋಗ್ಯದಿಂದ 6 ತಿಂಗಳ ಹಿಂದೆ ಸಾವನ್ನಪ್ಪಿರುತ್ತಾಳೆ. ಆಕೆಯ ಮೊದಲನೇ ಗಂಡನ 2 ಮಕ್ಕಳೊಂದಿಗೆ (1 ಬಾಲಕ ಮತ್ತು 1 ಬಾಲಕಿ) ಹೆಜಮಾಡಿಯ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದು, ಪ್ರಸ್ತುತ 9ನೇ ತರಗತಿಯಲ್ಲಿ ವಿದ್ಯಾಭ್ಯಾಸವನ್ನು ಮಾಡಿಕೊಂಡಿರುವ ಈ 2 ಮಕ್ಕಳನ್ನು 10 ದಿನಗಳ ಹಿಂದೆ ಮಲತಂದೆ ಬಾಡಿಗೆ ಮನೆಯಲ್ಲಿಯೇ ಬಿಟ್ಟು ಪರಾರಿಯಾಗಿದ್ದಾನೆ.

ಇದನ್ನು ಅರಿತ ಹೆಜಮಾಡಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಧಾಕರ್ ಕರ್ಕೆರ, ಮಾನವೀಯತೆ ನೆಲೆಯಲ್ಲಿ ತಮ್ಮ ಮನೆಯಲ್ಲಿಯೇ ತಾತ್ಕಾಲಿಕವಾಗಿ ಊಟ ಮತ್ತು ವಸತಿ ನೀಡಿದ್ದು 18 ವರ್ಷದೊಳಗಿನ ಮಕ್ಕಳಾಗಿರುವುದರಿಂದ ಉಪಾಧ್ಯಕ್ಷರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಉಡುಪಿ ಇವರಿಗೆ ಮಾಹಿತಿ ನೀಡಿದರು.
ಈ ಮಾಹಿತಿಯನ್ನು ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ್ ಆಚಾರ್ ಹಾಗೂ ಸಮಾಜ ಕಾರ್ಯಕರ್ತೆ ಗ್ಲೀಶಾ ಮೊಂತೇರೊ ಪಂಚಾಯತ್ ಉಪಾಧ್ಯಕ್ಷರ ಮನೆಗೆ ಭೇಟಿ ನೀಡಿ ಮಾಹಿತಿಯನ್ನು ಪಡೆದು, ಮಕ್ಕಳ ಪಾಲನೆ ಮತ್ತು ಪೋಷಣೆ ಹಾಗೂ ಪುನರ್ವವಸತಿ ಅಗತ್ಯತೆ ಮನಗಂಡು ಮಕ್ಕಳ ಕಲ್ಯಾಣ ಸಮಿತಿಗೆ ಮಾಹಿತಿ ನೀಡಿದರು.

ಅವರ ಆದೇಶದಂತೆ ಬಾಲಕನನ್ನು ಸಿ.ಎಸ್.ಐ ಬಾಯ್ಸ್ ಹೋಮ್ ಉಡುಪಿ ಹಾಗೂ ಬಾಲಕಿಯನ್ನು ಸರ್ಕಾರಿ ಬಾಲಕಿಯರ ಬಾಲಮಂದಿರ ನಿಟ್ಟೂರಿನಲ್ಲಿ ತಾತ್ಕಾಲಿಕ ಪುನರ್ವಸತಿ ಕಲ್ಪಿಸಲಾಯಿತು.

Comments are closed.