ಕರಾವಳಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರ ಬಿಡುಗಡೆ

Pinterest LinkedIn Tumblr

ಮಂಗಳೂರು, ಜನವರಿ. 20 :ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿರುವ ಬಾಂಬ್ ಅನ್ನು ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಪೊಲೀಸ್ ಕಮಿಷನರ್ ಡಾ. ಹರ್ಷ ಬಿಡುಗಡೆ ಮಾಡಿದ್ದಾರೆ.

ಬಜಪೆ ಸಮೀಪದ ಮಂಗಳೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ‘ಸ್ಪೋಟಕ’ ವಸ್ತು ಕಂಡು ಬಂದಿದೆ. ಆಟೊರಿಕ್ಷಾ ಮೂಲಕ ಬಂದು ಬಾಂಬ್‌ ಇರುವ ಬ್ಯಾಗ್‌ ಇಟ್ಟಿರುವ ಶಂಕಿತ ವ್ಯಕ್ತಿಯ ಚಿತ್ರವನ್ನು ಇದೀಗ ಪೊಲೀಸರು ಬಿಡುಗಡೆ ಮಾಡಿದ್ದಾರೆ.

ಅನುಮಾನಾಸ್ಪದ ವ್ಯಕ್ತಿಯು ಆಟೊರಿಕ್ಷಾದ ಮೂಲಕ ಬಂದು ವಿಮಾನ ನಿಲ್ದಾಣದಲ್ಲಿ ಬ್ಯಾಗ್‌ ಇಟ್ಟು ಹೋಗಿರುವುದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ.ಪಿ.ಎಸ್‌. ಹರ್ಷ ಅಧಿಕೃತವಾಗಿ ಆಟೊರಿಕ್ಷಾ ಮತ್ತು ಶಂಕಿತ ವ್ಯಕತಿಯ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

‘ಸ್ಪೋಟಕ’ ವಸ್ತುವನ್ನು ವಿಮಾನ ನಿಲ್ದಾಣದ ಪಕ್ಕದ ಕೆಂಜಾರ್‌ನ ನಿರ್ಜನ ಪ್ರದೇಶದಲ್ಲಿ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಹಿರಿಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಇಂದು ಸಂಜೆ ಸ್ಪೋಟಿಸಿದ್ದಾರೆ..ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸುಧಾರಿತ ಬಾಂಬ್ ಪತ್ತೆಯಾಗಿತ್ತು. ಸಜೀವ ಬಾಂಬ್ ಇದ್ದ ಬ್ಯಾಗ್ ನ್ನು ಕ್ರೇನ್ ಮೂಲಕ ಕೆಂಜಾರು ಮೈದಾನಕ್ಕೆ ನಿಧಾನವಾಗಿ ಹಾಗೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಮೈದಾನಕ್ಕೆ ಹೋಗುವ ಮಾರ್ಗ ಮಧ್ಯೆ ಇಳಿಜಾರು ಇದ್ದ ಕಾರಣ ವಾಹನ ಸ್ಥಳಾಂತರಕ್ಕೆ ಅಡ್ಡಿಯುಂಟಾಯಿತು. ಹೀಗಾಗಿ ರಿಮೋಟ್ ಚಾಲಿತ ಬಾಂಬ್ ಪ್ರತಿರೋಧಕ ಯಂತ್ರದ ಮೂಲಕ ಅತ್ಯಂತ ಜಾಗರೂಕತೆಯಿಂದ ಎಚ್ಚರಿಕೆಯಿಂದ ಬ್ಯಾಗ್ ನ್ನು ಸ್ಥಳಾಂತರ ಮಾಡಲಾಯಿತು.

ಮಾಸ್ಕ್ ಧರಿಸಿದ್ದ ಸಿಬ್ಬಂದಿ ಬಾಂಬ್ ಇರಿಸಿದ್ದ ಬ್ಯಾಗ್ ನ್ನು ನಿರ್ಜನ ಪ್ರದೇಶದಲ್ಲಿ ಮರಳು ಮೂಟೆಗಳನ್ನು ಇರಿಸಿದ್ದ ಸ್ಥಳಕ್ಕೆ ತೆಗೆದು ಕೊಂಡು ಹೋಗಿ ಅದರ ಮಧ್ಯೆ ಭಾಗದಲ್ಲಿ ಇರಿಸಿದರು. ಎಲ್ಲ ಪ್ರಕ್ರಿಯೆ ಮುಗಿಸಿದ ನಂತರ ಮುಂಜಾಗ್ರತೆಯಾಗಿ ಸ್ಥಳದಲ್ಲಿದ್ದ ಜನರನ್ನು ಪೊಲೀಸರು ದೂರಕ್ಕೆ ಕಳುಹಿಸಿದರು. ಅನಂತರ ಯಾವ ಹಾನಿಯೂ ಸಂಭವಿಸದಂತೆ ಅತ್ಯಂತ ಜಾಗರೂಕತೆಯಿಂದ ಬಾಂಬ್ ಅನ್ನು ಸ್ಪೋಟಿಸಲಾಯಿತು.

Comments are closed.