ಕರಾವಳಿ

ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ನಿರ್ಜನ ಪ್ರದೇಶದಲ್ಲಿ ಸ್ಫೋಟ: ದುಷ್ಕರ್ಮಿಗಳ ಬಾಂಬ್ ಸ್ಪೋಟದ ಸಂಚು ವಿಫಲ

Pinterest LinkedIn Tumblr

Click Here For Video : ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ನಿರ್ಜನ ಪ್ರದೇಶದಲ್ಲಿ ಸ್ಫೋಟ

ಮಂಗಳೂರು, ಜನವರಿ.20 ; ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಪತ್ತೆಯಾದ ಸಜೀವ ಬಾಂಬ್ ಅನ್ನು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ಬಜಪೆ ಸಮೀಪ ವಿಮಾನ ನಿಲ್ದಾಣದ ಕೆಳಭಾಗದಲ್ಲಿರುವ ಕೆಂಜಾರು ಮೈದಾನದ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಯಶಸ್ವಿಯಾಗಿ ನಿಷ್ಕ್ರಿಯ ಗೊಳಿಸಲಾಯಿತು.

ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸುಧಾರಿತ ಬಾಂಬ್ ಪತ್ತೆಯಾಗಿತ್ತು. ಸಜೀವ ಬಾಂಬ್ ಇದ್ದ ಬ್ಯಾಗ್ ನ್ನು ಕ್ರೇನ್ ಮೂಲಕ ಕೆಂಜಾರು ಮೈದಾನಕ್ಕೆ ನಿಧಾನವಾಗಿ ಹಾಗೂ ಸುರಕ್ಷಿತವಾಗಿ ಸ್ಥಳಾಂತರಿಸಲಾಯಿತು. ಮೈದಾನಕ್ಕೆ ಹೋಗುವ ಮಾರ್ಗ ಮಧ್ಯೆ ಇಳಿಜಾರು ಇದ್ದ ಕಾರಣ ವಾಹನ ಸ್ಥಳಾಂತರಕ್ಕೆ ಅಡ್ಡಿಯುಂಟಾಯಿತು. ಹೀಗಾಗಿ ರಿಮೋಟ್ ಚಾಲಿತ ಬಾಂಬ್ ಪ್ರತಿರೋಧಕ ಯಂತ್ರದ ಮೂಲಕ ಅತ್ಯಂತ ಜಾಗರೂಕತೆಯಿಂದ ಎಚ್ಚರಿಕೆಯಿಂದ ಬ್ಯಾಗ್ ನ್ನು ಸ್ಥಳಾಂತರ ಮಾಡಲಾಯಿತು

ಮಾಸ್ಕ್ ಧರಿಸಿದ್ದ ಸಿಬ್ಬಂದಿ ಬಾಂಬ್ ಇರಿಸಿದ್ದ ಬ್ಯಾಗ್ ನ್ನು ನಿರ್ಜನ ಪ್ರದೇಶದಲ್ಲಿ ಮರಳು ಮೂಟೆಗಳನ್ನು ಇರಿಸಿದ್ದ ಸ್ಥಳಕ್ಕೆ ತೆಗೆದುಕೊಂಡು ಹೋಗಿ ಅದರ ಮಧ್ಯೆ ಭಾಗದಲ್ಲಿ ಇರಿಸಿದರು. ಎಲ್ಲ ಪ್ರಕ್ರಿಯೆ ಮುಗಿಸಿದ ನಂತರ ಮುಂಜಾಗ್ರತೆಯಾಗಿ ಸ್ಥಳದಲ್ಲಿದ್ದ ಜನರನ್ನು ಪೊಲೀಸರು ದೂರಕ್ಕೆ ಕಳುಹಿಸಿದರು. ಅನಂತರ ಯಾವ ಹಾನಿಯೂ ಸಂಭವಿಸದಂತೆ ಅತ್ಯಂತ ಜಾಗರೂಕತೆಯಿಂದ ಬಾಂಬ್ ಅನ್ನು ಸ್ಪೋಟಿಸಲಾಯಿತು.

ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ನಿರಂತರ ಕಾರ್ಯಾಚರಣೆಯಲ್ಲಿ ಬಾಂಬ್ ಅನ್ನು ಸ್ಪೋಟಿಸುವ ಮೂಲಕ ದುಷ್ಕರ್ಮಿಗಳ ಸಂಚನ್ನು ವಿಫಲಗೊಳಿಸಿದ್ದಾರೆ. ಇದರಿಂದಾಗಿ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ಈ ಮೂಲಕ ಆತಂಕ ದೂರವಾದಂತಾಗಿದೆ.

ಮಂಗಳೂರಿನ ಏರ್ ಪೋರ್ಟ್ ನಲ್ಲಿ ಇಂದು ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಓರ್ವ ಆಟೋ ಚಾಲಕ ಒಂದು ಸಜೀವ ಬಾಂಬ್ ಇದ್ದ ಲ್ಯಾಪ್ಟಾಪ್ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ. ಆದರೆ, ಈ ಬ್ಯಾಗ್ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿತ್ತು. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

ನಗರ ಪೊಲೀಸ್ ಆಯುಕ್ತ ಡಾ.ಹರ್ಷ ಸ್ಥಳಕ್ಕೆ ಆಗಮಿಸಿ ಈ ಕುರಿತು ಪರಿಶೀಲನೆ ನಡೆಸಿದ್ದರು.. ಇನ್ನು ವಿಮಾನ ನಿಲ್ದಾಣದ ಬಹುತೇಕ ಸಿಸಿಟಿವಿ ಕ್ಯಾಮೆರಾಗಳು ಕೆಟ್ಟುಹೋಗಿವೆ. ಹೀಗಾಗಿ ಪೊಲೀಸರು ತನಿಖೆಗೆ ಅಡ್ಡಿಯಾಗಿದೆ. ಭದ್ರತಾ ವೈಫಲ್ಯವನ್ನೇ ಬಳಸಿಕೊಂಡಿರುವ ದುಷ್ಕರ್ಮಿಗಳು ದುಷ್ಕೃತ್ಯಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

Comments are closed.