ಕರಾವಳಿ

ಗಂಗೊಳ್ಳಿ ಗ್ರಾಮಪಂಚಾಯತಿಯ 13 ಮಂದಿ ಬಿಜೆಪಿ ಬೆಂಬಲಿತ ಸದಸ್ಯರು ರಾಜಿನಾಮೆ!

Pinterest LinkedIn Tumblr

ಕುಂದಾಪುರ: ಗ್ರಾಮ ಪಂಚಾಯತ್‌ನಲ್ಲಿ ಸದಸ್ಯರಿಗೆ ಯಾವುದೇ ಗೌರವ ಸಿಗುತ್ತಿಲ್ಲ. ಗ್ರಾಮ ಪಂಚಾಯತ್ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ. ಸದಸ್ಯರ ಮಾತಿಗೆ ಕಿಂಚಿತ್ ಬೆಲೆ ನೀಡುತ್ತಿಲ್ಲ. ಅಧ್ಯಕ್ಷರು ಸರ್ವಾಧಿಕಾರ ಧೋರಣೆ ತೋರಿಸುತ್ತಿದ್ದಾರೆ ಎಂದು ಆರೋಪಿಸಿ ಗಂಗೊಳ್ಳಿ ಗ್ರಾಮ ಪಂಚಾಯತ್‌ನ ಬಿಜೆಪಿ ಬೆಂಬಲಿತ 13 ಮಂದಿ ಗ್ರಾ.ಪಂ ಸದಸ್ಯರು ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಗಂಗೊಳ್ಳಿ ಗ್ರಾಮ ಪಂಚಾಯತ್ ಸದಸ್ಯರಾದ ನಾಗರಾಜ ಖಾರ್ವಿ ಗುಡ್ಡೆಕೇರಿ, ಮಂತಿ ಶ್ರೀನಿವಾಸ ಖಾರ್ವಿ, ಬೈರು ಬಸವ ಖಾರ್ವಿ ಮತ್ತು ನಾಗರಾಜ ಖಾರ್ವಿ ದಾಕುಹಿತ್ಲು, ಲಲಿತಾ ಖಾರ್ವಿ, ಸುಮಿತ್ರಾ ಶೇರುಗಾರ್, ಸಾವಿತ್ರಿ ಖಾರ್ವಿ, ರಾಜ್‌ಕಿರಣ್, ಪ್ರಶಾಂತ ಖಾರ್ವಿ, ಅರುಣ್ ಪೂಜಾರಿ, ಅಂಬಿಕಾ ಖಾರ್ವಿ, ರೇಖಾ ಖಾರ್ವಿ, ನಿರ್ಮಲಾ ಪೂಜಾರಿ ಗುರುವಾರ ಬೆಳಿಗ್ಗೆ ಗ್ರಾಮ ಪಂಚಾಯತ್ ಕಛೇರಿಗೆ ಆಗಮಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀನಿವಾಸ ಖಾರ್ವಿ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.

ಒಟ್ಟು 33 ಸದಸ್ಯ ಬಲದ ಗಂಗೊಳ್ಳಿ ಗ್ರಾಮ ಪಂಚಾಯತ್‌ನಲ್ಲಿ  23 ಮಂದಿ ಬಿಜೆಪಿ ಬೆಂಬಲಿತರು, 6 ಮಂದಿ ಕಾಂಗ್ರೆಸ್ ಮತ್ತು ನಾಲ್ವರು ಎಸ್‌ಡಿಪಿ‌ಐ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರಿದ್ದಾರೆ. 2019ರ ಜನವರಿ ತಿಂಗಳಿನಲ್ಲಿ ಗ್ರಾಮ ಪಂಚಾಯತ್‌ಗೆ ಚುನಾವಣೆ ನಡೆದಿತ್ತು. ಆಯ್ಕೆಯಾದ ಒಂದೇ ವರ್ಷದಲ್ಲಿ ಗ್ರಾಮ ಪಂಚಾಯತ್‌ನ ೧೩ ಮಂದಿ ಸದಸ್ಯರು ರಾಜೀನಾಮೆ ಸಲ್ಲಿಸಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಜೀನಾಮೆ ಸಲ್ಲಿಸಿದ್ದಾರೆ ಎನ್ನಲಾದ ಗ್ರಾಮ ಪಂಚಾಯತ್ ಸದಸ್ಯರೊಂದಿಗೆ ಚರ್ಚೆ ನಡೆಸಿ ಅವರ ರಾಜೀನಾಮೆಗೆ ಕಾರಣಗಳನ್ನು ತಿಳಿದು ಸಮಸ್ಯೆ ಬಗೆಹರಿಸುವ ವಿಶ್ವಾಸವನ್ನು ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ವ್ಯಕ್ತಪಡಿಸಿದ್ದು, ರಾಜೀನಾಮೆ ನೀಡಿದ ಸದಸ್ಯರ ಮುಂದಿನ ನಡೆ ತೀವ್ರ ಕುತೂಹಲ ಕೆರಳಿಸಿದೆ.

Comments are closed.