ಕರಾವಳಿ

ಅಪಘಾತ ಪಡಿಸಿ ಬೈಕ್ ಹಿಂಬದಿ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಶಿಕ್ಷೆ

Pinterest LinkedIn Tumblr

ಉಡುಪಿ: ಲಾರಿಯನ್ನು ಅತೀವೇಗದಿಂದ ಚಲಾಯಿಸಿ ಬೈಕ್ ಹಿಂಬದಿ ಸವಾರನ ಸಾವಿಗೆ ಕಾರಣನಾದ ಲಾರಿ ಚಾಲಕನಿಗೆ ಶಿಕ್ಷೆ ಹಾಗೂ ದಂಡ ವಿಧಿಸಿ ಉಡುಪಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಜನವರಿ 3, 2014 ರಂದು ಬೆಳಗ್ಗೆ ಲಾರಿ ನಂ- ಟಿ.ಎನ್ 37/ಎಟಿ/6305 ಇದರ ಚಾಲಕ ತಮಿಳುನಾಡಿನ ಕೊಯಮತ್ತೂರು ಮೂಲದ ಸುರೇಶ ಎಂಬಾತ ಅತೀವೇಗ ಹಾಗೂ ನಿರ್ಲಕ್ಷತನದಿಂದ ಉಡುಪಿಯ ಅಂಬಲಪಾಡಿ ಜಂಕ್ಷನ್ ಕಡೆಯಿಂದ ಕಿನ್ನಿಮೂಲ್ಕಿ ಕಡೆಗೆ ತನ್ನ ಲಾರಿಯನ್ನು ಚಲಾಯಿಸಿಕೊಂಡು ಬೇರೆ ವಾಹನವನ್ನು ಹಿಂದಿಕ್ಕುವ ಭರದಲ್ಲಿ ತೀರ ಬಲಬದಿಗೆ ಚಲಾಯಿಸಿ ಕೆಂಮ್ತುರು ನಿವಾಸಿ ದಿನೇಶ ಪೂಜಾರಿ ಹಗೂ ಸದಾಶಿವ ಪೂಜಾರಿ ಎನ್ನುವರ ಜೊತೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟರ್ ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ರಸ್ತೆಗೆ ಬಿದ್ದಿದ್ದು, ಹಿಂಬದಿ ಸವಾರ ಸದಾಶಿವ ಪೂಜಾರಿ ಸ್ಥಳದಲ್ಲಿ ಮೃತಪಟ್ಟಿದ್ದರು.

ಈ ಬಗ್ಗೆ ಉಡುಪಿ ನಗರ ಠಾಣೆಯ ಆಗಿನ ವೃತ್ತ ನಿರೀಕ್ಷಕ ಮಾರುತಿ ಜಿ. ನಾಯ್ಕ ತನಿಖೆ ನಡೆಸಿ ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

ಈ ಪ್ರಕರಣವು ಉಡುಪಿ ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಪ್ರಕರಣದಲ್ಲಿ ಸಾಕ್ಷ್ಯ ಹಾಗೂ ಪೂರಕ ಸಾಕ್ಷ್ಯವನ್ನು ಹಾಗೂ ವಾದ ವಿವಾದವನ್ನು ಆಲಿಸಿ ಆರೋಪಿ ವಿರುದ್ಧ ಮೇಲಿನ ಪ್ರಕರಣವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ್ಯಾಯಾಧೀಶ ಮಂಜುನಾಥ್ ಎಂ.ಎಸ್ ರವರು ಆರೋಪಿಗಳಿಗೆ ಭಾ.ದಂ.ಸಂ ಕಲಂ 279, 338, 304(ಎ) ರಡಿ 1 ವರ್ಷ 5 ತಿಂಗಳು ಶಿಕ್ಷೆ ಮತ್ತು ಒಟ್ಟು 3,000 ರೂ. ಗಳ ದಂಡ ವಿಧಿಸಿ ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಕಾನೂನು ಅಧಿಕಾರಿ (ಕಿರಿಯ) ಮಮ್ತಾಜ್ ವಿಚಾರಣೆ ನಡೆಸಿ ವಾದ ಮಂಡಿಸಿದ್ದರು.

Comments are closed.