ಕರಾವಳಿ

ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶಗಳು ಸ್ಪೂರ್ತಿಯಾಗಬೇಕು : ಡಿ. ವೇದವ್ಯಾಸ ಕಾಮತ್

Pinterest LinkedIn Tumblr

ಮಂಗಳೂರು  : ಸ್ವಾಮಿ ವಿವೇಕಾನಂದರ ಚಿಂತನೆ, ಆದರ್ಶಗಳು ಯುವಜನತೆಗೆ ಸ್ಪೂರ್ತಿಯಾಗಿ ಅದರಿಂದ ಪ್ರೇರಣೆಗೊಳ್ಳಬೇಕು ಎಂದು ಶಾಸಕ ಡಿ. ವೇದವ್ಯಾಸ ಕಾಮತ್ ಹೇಳಿದರು.

ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಮಂಗಳೂರು ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ವಿಶ್ವವಿದ್ಯಾನಿಲಯ, ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಸಂಸ್ಥೆ, ಜಿಲ್ಲಾ ಯುವ ಜನ ಒಕ್ಕೂಟ ಇದರ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿದ ದಿವ್ಯ ಚೇತನ ಸ್ವಾಮಿ ವಿವೇಕಾನಂದರ 157ನೇ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಯುವ ಸಮಾವೇಶ, ಜಿಲ್ಲಾ ಯುವ ಮಂಡಲ ಪ್ರಶಸ್ತಿ ಪ್ರದಾನ ಹಾಗೂ ಕ್ರೀಡಾ ಸಾಮಾಗ್ರಿಗಳ ವಿತರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ದೇಶ ಕಂಡ ಮಹಾನ್ ಸಂತ ಸ್ವಾಮಿ ವಿವೇಕಾನಂದ. ಇವರು ಬೇರೆ ಬೇರೆ ದೇಶಕ್ಕೆ ತೆರಳಿ ಭಾರತದ ಗರಿಮೆಯನ್ನು ವಿಶ್ವಕ್ಕೆ ಸಾರಿದ್ದಾರೆ. ಈ ದೇಶದ ಸಂಸ್ಕøತಿ, ಆಚಾರ ವಿಚಾರ, ಈ ಮಣ್ಣಿನ ಗುಣವನ್ನು ವಿಶ್ವಕ್ಕೆ ಪಸರಿಸುವ ಮೂಲಕ ಭಾರತದ ಕೀರ್ತಿಯನ್ನು ದೇಶದ ಉದ್ದಗಲ್ಲಕ್ಕೂ ಪರಿಚಯಿಸಿದ್ದಾರೆ. ಹಾಗಾಗಿ ಅವರ ಆದರ್ಶಗಳನ್ನು, ಸ್ಫೂರ್ತಿಯ ಮಾತುಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ಸು ಕಾಣಬೇಕು. ಯುವಜನಾಂಗವು ದೇಶದ ಬಹುದೊಡ್ಡ ಶಕ್ತಿಯಾಗಿದ್ದು, ಅವರ ಆದರ್ಶಗಳನ್ನು ಪಾಲಿಸಿ ಮುನ್ನಡೆಯಬೇಕು. ರಾಷ್ಟ್ರ ನಿರ್ಮಾಣಕ್ಕೆ ಪಣತೊಡಬೇಕು ಎಂದು ಕಿವಿಮಾತು ಹೇಳಿದರು.

ಪ್ರಧಾನ ಭಾಷಣಕಾರರಾಗಿ ಆದರ್ಶ ಗೋಖಲೆ ಮಾತನಾಡಿ, ಸ್ವಾಮಿ ವಿವೇಕಾನಂದರ ಆದರ್ಶದಲ್ಲಿ ಮುನ್ನಡೆಯಬೇಕು. ಸಾಧನೆ ಮಾಡುವ ಹುಚ್ಚು ಕೆಚ್ಚು ನಮ್ಮೆದೆಯೊಳಗೆ ಬಂದಾಗ ಮಾತ್ರ ಸಾಧನೆ ಸಾಧ್ಯ. ನಮ್ಮಿಂದಾಗದು ಎಂಬ ಕೀಳರಮೆಯನ್ನು ತೊರೆದು ನಮ್ಮಿಂದ ಸಾಧ್ಯ, ನಾನು ಮಾಡಬಲ್ಲೆ ಅನ್ನೋ ಮನೋಭಾವದಲ್ಲಿ ಸಾಗಿ ಸಾಧಿಸಬೇಕು. ಜಗತ್ತಿನಲ್ಲಿ ನಮ್ಮನ್ನು ಸೋಲಿಸಬಲ್ಲ ಶಕ್ತಿ ಇರುವುದು ನಮಗೆ ಮಾತ್ರ, ಹಾಗಾಗಿ ನಮ್ಮಲ್ಲಿ ಅಡಕವಾಗಿರುವ ಅಮೂಲ್ಯ ಶಕ್ತಿಯನ್ನು ಸದುಪಯೋಗಪಡಿಸಿಕೊಳ್ಳಬೇಕು ದೇಶ ಕಟ್ಟುವೆಡೆಗೆ ಪಣತೊಡಬೇಕು ಎಂದರು. ಇಂದಿನ ಯುವಜನಾಂಗವು ಸ್ವಾಮಿ ವಿವೇಕಾನಂದರ ಚಿಂತನೆಗಳನ್ನು, ಆಧ್ಯಾತ್ಮಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕನಕಮಜಲು ಸುಳ್ಯ ಯುವಕ ಮಂಡಲಕ್ಕೆ ಜಿಲ್ಲಾ ಅತ್ಯುತ್ತಮ ಯುವ ಮಂಡಲ ಪ್ರಶಸ್ತಿ ಪ್ರದಾನ ಮಾಡಲಾಯಿತು. ಷಣ್ಮುಕ ಯುವಕ ಮಂಡಲ, ಶ್ರೀ ಸುಬ್ರಮಣ್ಯ ಮಹಾಗಣಪತಿ ಕ್ರಿಕೆಟ್ ಕ್ಲಬ್ ತೋಕೂರು, ಶ್ರೀ ವಿದ್ಯವಿನಾಯಕ ಯುವಕ ಮಂಡಲ ಹಳೆಯಂಗಡಿ ಈ ತಂಡಗಳಿಗೆ ಸ್ವಚ್ಛ ಭಾರತ್ ಇನ್ಮೈನ್ ಶಿಪ್ ಪ್ರಶಸ್ತಿ ಪ್ರದಾನ ಮಾಡಲಾಯಿತು.

ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ಸಂಯೋಜನಾಧಿಕಾರಿ ಪ್ರೋ. ವಿನಿತಾ ರೈ ಮತ್ತು ದೆಹಲಿ ಗಣರಾಜ್ಯೋತ್ಸವದಲ್ಲಿ ಭಾಗವಹಿಸಿದ ಆದಿತ್ಯ ರಾಜ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಯಿತು. ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ಕು.ಶಿವಾನಿ , ಜಾಯ್ಲಿಲಿನ್ ಲೆವಿಟಾ, ದಿಗ್ವಿಜಯ್ ಭಾರತ್‍ರಾಜ್ ಇವರಿಗೆ ಪ್ರಶಸ್ತಿ ನೀಡಲಾಯಿತು.

ಜಿಲ್ಲಾ ಯುವಜನ ಒಕ್ಕೂಟದ ಅಧ್ಯಕ್ಷ ಸುರೇಶ್ ರೈ ಸೂಡಿಮುಳ್ಳು, ರಾಷ್ಟ್ರೀಯ ಸೇವಾ ಯೋಜನೆ ಸಂಯೋಜನಾಧಿಕಾರಿ ಡಾ. ನಾಗರತ್ನ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ವಿವೇಕ್ ಆಳ್ವಾ, ಭಾರತ್ ಸ್ಕೌಟ್ & ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತ ಡಾ ಎನ್. ಜಿ. ಮೋಹನ್, ತಹಶೀಲ್ದಾರ್ ಅನಂತ ಶಂಕರ್, ಮುಖ್ಯ ಅರಣ್ಯಧಿಕಾರಿ ಪ್ರಕಾಶ್ ಎಸ್ ನೆಟಾಲ್ಕರ್, ಆಯುಷ್ ಅಧಿಕಾರಿ ಇಕ್ಬಾಲ್ ಮತ್ತಿತರು ಉಪಸ್ಥಿತರಿದ್ದರು, ನೆಹರು ಯುವ ಕೇಂದ್ರ ಮಂಗಳೂರು ಹಾಗೂ ಜಿಲ್ಲಾ ಯುವ ಸಮನ್ವಯಧಿಕಾರಿ ರಘುವೀರ್ ಸೂಟರ್‍ಪೇಟೆ ಪ್ರಸ್ತಾವಿಕ ನುಡಿಗಳನ್ನಾಡಿದರು.

Comments are closed.