ಕರಾವಳಿ

ಕಟೀಲು ಬ್ರಹ್ಮಕಲಶೋತ್ಸವ ಹಿನ್ನೆಲೆ : ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಲು ಸಚಿವರ ಸೂಚನೆ

Pinterest LinkedIn Tumblr

ಮಂಗಳೂರು :ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪ್ರಯುಕ್ತ ದೇವಸ್ಥಾನಕ್ಕೆ ಸಂಬಂಧಪಟ್ಟ ಸಿದ್ಧತಾ ಕಾರ್ಯ ಹಾಗೂ ಬಾಕಿ ಉಳಿದಿರುವ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ತಕ್ಷಣ ನಡೆಸಬೇಕು ಎಂದು ಮೀನುಗಾರಿಕೆ, ಮುಜರಾಯಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಟೀಲು ದೇವಳದ ಪದವಿಪೂರ್ವ ಕಾಲೇಜಿನಲ್ಲಿ, ಕ್ಷೇತ್ರದಲ್ಲಿ ನಡೆಯುವ ಬ್ರಹ್ಮಕಲಶೋತ್ಸವದ ಸಮಗ್ರ ವಿಷಯಗಳ ಬಗ್ಗೆ ಪರಿಶೀಲನಾ ಸಭೆಯಲ್ಲಿ ಮಾತಾನಾಡಿದ ಅವರು, ಎಲ್ಲರೂ ತಮ್ಮ ಜವಾಬ್ದಾರಿಗಳಿಗೆ ಮಾತ್ರ ಸೀಮಿತವಾಗಿರದೆ, ಬಾಕಿ ಉಳಿದಿರುವ ಕೆಲಸಗಳನ್ನು ತಮ್ಮ ಕೆಲಸವೆಂದು ಎಲ್ಲರೂ ಒಟ್ಟಾಗಿ ನಿರ್ವಹಿಸಬೇಕು. ಇದಕ್ಕೆ ರಾಜ್ಯ ಸರಕಾರ, ಜಿಲ್ಲಾಡಳಿತ ಹಾಗೂ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಇದೆ ಎಂದು ಹೇಳಿದರು.

ಕಟೀಲಿನ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ ಮಾತನಾಡಿ, ಕ್ಷೇತ್ರದ ಮುಭಾಂಗದಲ್ಲಿ ಕೆಲವು ಅಂಗಡಿಗಳು ರಸ್ತೆ ಅತಿಕ್ರಮಣ ಮಾಡಿದ್ದಾರೆ. ಬೀದಿ ಬದಿ ವ್ಯಾಪಾರ ಅಧಿಕವಾಗಿದೆ. ಇದರಿಂದ ಸುಗಮ ಸಂಚಾರಕ್ಕೆ ಧಕ್ಕೆಯಾಗುತ್ತಿದೆ. ಹೋಟೆಲ್‍ಗಳ ಕೊಳಚೆ ನೀರು ನಂದಿನಿ ನದಿಗೆ ಸೇರಿ ನೀರು ಕಲುಷಿತಗೊಂಡಿದೆ. ಸಣ್ಣ ಅಂಗಡಿಗಳಿಂದ ಬ್ಲಾಕ್ ಆಗುವ ಪರಿಸ್ಥಿತಿ ಇದ್ದು, ವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಅಂಗಡಿಗಳನ್ನು ತೆರವು ಮಾಡಬೇಕು. ಇದೆಲ್ಲದರ ವಿರುದ್ದ ಸೂಕ್ತ ಕ್ರಮಗಳು ತುರ್ತಾಗಿ ನಡೆಯಬೇಕು ಎಂದು ಸಚಿವರಲ್ಲಿ ಕೇಳಿಕೊಂಡರು.

ಕ್ಷೇತ್ರದ ವ್ಯಾಪ್ತಿಯಲ್ಲಿ ರಸ್ತೆ ಅಭಿವೃದ್ಧಿ, ಕ್ಷೇತ್ರದ ಮುಂಭಾಗದಲ್ಲಿ ಅನಧಿಕೃತವಾಗಿರುವ ಅಂಗಡಿಗಳ ತೆರವು ಸೇರಿದಂತೆ ವಿವಿಧ ಕೆಲಸಗಳನ್ನು ತುರ್ತಾಗಿ ನಡೆಸುವಂತೆ ಹಾಗೂ ಈ ಮೊದಲೇ ಹೇಳಿದರೂ ನಿಯಮಗಳನ್ನು ಪಾಲಿಸದೆ ಇರುವ ಅಂಗಡಿಯವರಿಗೆ ಎರಡು ದಿನದ ಸಮಯ ನೀಡಿ, ನಂತರವೂ ಪಾಲಿಸದೇ ಇದ್ದಲ್ಲಿ ಅಂತಹ ಅಂಗಡಿಯವರ ಮೇಲೆ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ತಿಳಿಸಿದರು.

ಕ್ಷೇತ್ರದ ವ್ಯಾಪ್ತಿಯಲ್ಲಿ 100 ಮೀಟರ್ ಅಂತರದಲ್ಲಿ ಧೂಮಪಾನ, ಪಾನ್, ಗುಟ್ಕಾ ಇಂತಹ ಮಾದಕ ವ್ಯಸನಗಳು ಇರುವುದು ಕಂಡುಬಂದಲ್ಲಿ ಯಾವುದೇ ರೀತಿಯ ದಂಡ ವಿಧಿಸದೇ ನೇರವಾಗಿ ವಶಪಡಿಸಿಕೊಳ್ಳಿ ಹಾಗೂ ದೇವಸ್ಥಾನದ ಆವರಣದೊಳಗೆ ಸಾರ್ವಜನಿಕರು ಧೂಮಪಾನ ಮಾಡದಂತೆ ನೋಡಿಕೊಳ್ಳಿ ಎಂದು ಸಂಬಂಧಪಟ್ಟ ಇಲಾಖೆಗೆ ಕೋಟ ಶ್ರೀನಿವಾಸ ಪೂಜಾರಿ ಆದೇಶಿಸಿದರು.

ಕಟೀಲು ವ್ಯಾಪ್ತಿಯಲ್ಲಿ ದಾರಿದೀಪದ ಅಳವಡಿಕೆ ಕಾಮಗಾರಿ ನಡೆಸಬೇಕು ಹಾಗೂ ನೈರ್ಮಲ್ಯದ ಬಗ್ಗೆ ಅಂಗಡಿಗಳಿಗೆ 2 ದಿವಸದೊಳಗೆ ನೋಟೀಸ್ ನೀಡಿ ಎಂದು ಸಂಬಂಧಪಟ್ಟ ಇಲಾಖೆಗಳಿಗೆ ಸೂಚಿಸಿದರು ಜಿಲ್ಲಾ ಉಸ್ತುವಾರಿ ಸಚಿವ ಸೂಚಿಸಿದರು.

ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಮಾತನಾಡಿ, ಕಟೀಲು ಬ್ರಹ್ಮಕಲಶೋತ್ಸವದ ಹಿನ್ನಲೆಯಲ್ಲಿ ಇಲಾಖೆಗಳಿಂದ ಬಾಕಿ ಉಳಿದಿರುವ ಎಲ್ಲ ಕಾಮಗಾರಿಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಬೇಕು ಎಂದು ಹೇಳಿದರು. ಬ್ರಹ್ಮಕಲಶೋತ್ಸವದ ಸಂಧರ್ಭದಲ್ಲಿ ಆರೋಗ್ಯ ಇಲಾಖೆ ವೈದ್ಯರನ್ನೊಳಗೊಂಡ ತಂಡಗಳನ್ನು ರಚನೆ ಮಾಡಬೇಕು. ರಸ್ತೆಗಳ ಅಗಲೀಕರಣ, ದೇವಸ್ಥಾನದ ಎದುರಿನ ಗೋಪುರದ ಕೆಲಸ, ಪರಿಸರದ ಆವರಣದಲ್ಲಿ ದೀಪಗಳ ಡಿಸೈನ್ ಅಳವಡಿಕೆ, ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಹಾಗೂ ಬಿಎಸ್‍ಎನ್‍ಎಲ್ ಮೊಬೈಲ್ ಟವರ್ ಅಳವಡಿಕೆ ಕೆಲಸ, ಪಾರ್ಕಿಂಗ್, ಬಂದೋಬಸ್ತ್, ಸಿಸಿಟಿವಿ ಅಳವಡಿಕೆ, ಒಂದು ವಾರದೊಳಗೆ ನಡೆಯಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್, ದ.ಕ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ, ಸ್ಥಳೀಯ ಜನಪ್ರತಿನಿಧಿಗಳು, ಇಲಾಖಾ ಅಧಿಕಾರಿಗಳು ಹಾಗೂ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

Comments are closed.