ಕರಾವಳಿ

1 ಟನ್ ಪ್ಲಾಸ್ಟಿಕ್ ನಿಂದ 1 ಕಿ.ಮೀ ಟಾರ್ ರಸ್ತೆ ನಿರ್ಮಾಣ ಸಾಧ್ಯ-ಅಚ್ಚರಿಯಾದರೂ ಇದು ಸತ್ಯ!

Pinterest LinkedIn Tumblr

ಉಡುಪಿ: ದಿನನಿತ್ಯದ ಜೀವನದಲ್ಲಿ ಹಾಸುಹೊಕ್ಕಿರುವ ಪ್ಲಾಸ್ಟಿಕ್ ನಮ್ಮ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಪ್ಲಾಸ್ಟಿಕ್ ಇಲ್ಲದ ಬದುಕನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ, ಅಂತೆಯೇ ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳನ್ನು ತಡೆಗಟ್ಟುವ ಸಮಸ್ಯೆಯೂ ನಮ್ಮ ಮುಂದಿದೆ. ಪ್ಲಾಸ್ಟಿಕ್ ಅನ್ನು ಒಂದು ತ್ಯಾಜ್ಯವೆಂದು ಪರಿಗಣಿಸುವ ಬದಲಿಗೆ ಅದನ್ನು ಯಾವ ರೀತಿಯಲ್ಲಿ ಮರು ಬಳಕೆ ಮಾಡಬಹುದು ಎಂಬುದನ್ನು ತಿಳಿಸಿದರೆ, ಅದು ಒಂದು ಸಂಪನ್ಮೂಲವಾಗುತ್ತದೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕ್ರತ ಡಾ. ಆರ್. ವಾಸುದೇವನ್ ಹೇಳಿದರು.  ಮಂಗಳವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಪ್ಲಾಸ್ಟಿಕ್ ಇರುವುದು ನಿಷೇಧಿಸಲು ಅಲ್ಲ, ಬದಲಿಗೆ ಯೋಜನೆ ರೂಪಿಸಲು ಎನ್ನುವ ಧ್ಯೇಯದೊಂದಿಗೆ, ಪ್ಲಾಸ್ಟಿಕ್ ವಸ್ತುಗಳನ್ನು ಮರುಬಳಕೆ ಮಾಡುವಲ್ಲಿ ಯಶಸ್ಸನ್ನು ಕಂಡುಕೊಂಡಿದ್ದೇವೆ. ನಾವು ಬಳಸಿ ಎಸೆಯುವ ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳಿಂದ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ನಿರ್ಮಾಣ ಮಾಡಬಹುದು. ಹತ್ತು ವರ್ಷಗಳವರೆಗೆ ನಿರ್ವಹಣೆ ಬೇಡದ ಈ ರಸ್ತೆಗಳಿಗೆ ತಗಲುವ ವೆಚ್ಚವೂ ಕಡಿಮೆ. ದೇಶದಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ನಿರ್ಮಿಸಲು 100 ಲಕ್ಷ ಟನ್ ಪ್ಲಾಸ್ಟಿಕ್ ಬೇಕಾಗುತ್ತದೆ, ಆದರೆ ನಮ್ಮಲ್ಲಿ ಕೇವಲ 10 ಲಕ್ಷ ಟನ್ಗಳಷ್ಟು ಪ್ಲಾಸ್ಟಿಕ್ ಮಾತ್ರವೇ ಇದೆ. 1 ಟನ್ ಪ್ಲಾಸ್ಟಿಕ್ ನಿಂದ 1 ಕಿ.ಮೀ ರಸ್ತೆ ನಿರ್ಮಾಣ ಮಾಡಬಹುದು. ಇದುವರೆಗೂ 11 ರಾಜ್ಯಗಳಲ್ಲಿ 1 ಲಕ್ಷ ಕಿ.ಮೀ ಉದ್ದದ ಪ್ಲಾಸ್ಟಿಕ್ ಟಾರ್ ರಸ್ತೆ ನಿರ್ಮಾಣ ಮಾಡಲಾಗಿದೆ. ಪ್ಲಾಸ್ಟಿಕ್ನಿಂದ ನಿರ್ಮಿಸುವ ರಸ್ತೆಗಳಲ್ಲಿ ಪಾಟ್ ಹೋಲ್ ಸಮಸ್ಯೆ ಇರುವುದಿಲ್ಲ, ಮುಂಬೈನಲ್ಲಿ ನಿರ್ಮಿಸಿರುವ ರಸ್ತೆಯು ಮುಂಬೈನಲ್ಲಿ ಸಂಭವಿಸಿದ ಮಹಾ ಮಳೆಯ ಸಂದರ್ಭದಲ್ಲೂ ಹಾನಿಯಾಗಿಲ್ಲ, ದಿನಬಳಕೆಯ ಎಲ್ಲಾ ಪ್ಲಾಸ್ಟಿಕ್ಗಳೂ ಉಪಯೋಗಿಯಾಗಿವೆ. ಕಟ್ಟಡಗಳನ್ನು ಒಡೆದಾಗ ದೊರೆಯುವ ಕಾಂಕ್ರೀಟ್ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಪ್ಲಾಸ್ಟೋನ್ ಅನ್ನು ತಯಾರಿಸಿ ಕಡಿಮೆ ಬೆಲೆಯ, ಧೀರ್ಘ ಕಾಲ ಬಾಳಿಕೆ ಬರುವ ಕಟ್ಟಡಗಳನ್ನು ಕಟ್ಟಬಹುದು. ರಸ್ತೆ ಗುಂಡಿಗಳನ್ನು ಮುಚ್ಚುವ ಶೀಘ್ರ ಪರಿಹಾರವಾಗಿ ಥರ್ಮೋಕಾಲ್ ಅನ್ನು ಉಪಯೋಗಿಸಬಹುದು. ಪ್ಲಾಸ್ಟಿಕ್ ಮರುಬಳಕೆಯಿಂದ ಪರಿಸರಕ್ಕೆ ಯಾವುದೇ ಹಾನಿಯಿಲ್ಲ ಎನ್ನುವುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಅವರು ಹೇಳಿದರು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ಎಲ್ಲದರಲ್ಲೂ ನಂ.1 ಎನಿಸಿರುವ ಉಡುಪಿ ಜಿಲ್ಲೆಯು ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡುವಲ್ಲಿ ಹಿಂದೆ ಬಿದ್ದಿದೆ. ಪ್ಲಾಸ್ಟಿಕ್ನಿಂದಾಗುವ ದುಷ್ಪರಿಣಾಮಗಳಿಗೆ ಮುಕ್ತಿ ಹಾಡಲು ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡುವ ಕಲ್ಪನೆ ಮೂಡಿತು. ರಸ್ತೆ ನಿರ್ಮಾಣ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಮತ್ತು ಇಂಜಿನಿಯರ್ಗಳು ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡು ಒಳ್ಳೆಯ ಯೋಜನೆ ರೂಪಿಸಬೇಕು. ಎಲ್ಲರ ಸಹಕಾರದಿಂದ ಈ ಯೋಜನೆ ಯಶಸ್ವಿಯಾಗಲಿ ಎಂದು ಅವರು ಹಾರೈಸಿದರು.

ಜಿಲ್ಲಾಧಿಕಾರಿ ಜಿ. ಜಗದೀಶ್ ಮಾತನಾಡಿ, ಹಲವು ರಾಜ್ಯಗಳಲ್ಲಿ ಪ್ಲಾಸ್ಟಿಕ್ ಟಾರ್ ರಸ್ತೆಗಳನ್ನು ಈಗಾಗಲೇ ಪ್ರಾಯೋಗಿಕವಾಗಿ ನಿರ್ಮಾಣ ಮಾಡಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಿ ಪರಿಸರ ಹಾನಿಯನ್ನು ತಪ್ಪಿಸಬಹುದು. ಅಧಿಕಾರಿಗಳು ಕಾರ್ಯಗಾರದಿಂದ ಪಡೆದುಕೊಂಡ ಮಾಹಿತಿಯನ್ನು ಅಳವಡಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸಬೇಕು. ತಾನು ಮೈಸೂರು ಮಹಾನಗರ ಪಾಲಿಕೆ ಕಮೀಷನರ್ ಆಗಿದ್ದಾಗ 10 ರಸ್ತೆಗಳನ್ನು ಪ್ಲಾಸ್ಟಿಕ್ ಬಳಸಿ ನಿರ್ಮಿಸಲಾಗಿದೆ, ಒಂದೋ ಎರಡೋ ರಸ್ತೆಗಳನ್ನು ನಿರ್ಮಾಣ ಮಾಡಿ ಯೋಜನೆಯನ್ನು ಕೈಬಿಡುವುದಲ್ಲ, ಬದಲಿಗೆ ಇದು ಒಂದು ನಿರಂತರ ಪ್ರಕ್ರಿಯೆ ಆಗಬೇಕು. ಇಂಜಿನಿಯರ್ಗಳು ಎಸ್.ಆರ್. ದರಗಳ ಪಟ್ಟಿಯಲ್ಲಿ ಪ್ಲಾಸ್ಟಿಕ್ಗೆ ದರ ಇಲ್ಲವೆಂಬ ಕಾರಣಕ್ಕೆ ಈ ಯೋಜನೆ ಕೈಗೊಳ್ಳುವಲ್ಲಿ ವಿಮುಖರಾಗದೇ ಈ ಬಗ್ಗೆ ಅಗತ್ಯ ಪರ್ಯಾಯ ಕ್ರಮ ಕೈಗೊಳ್ಳಬೇಕು, ಸಾರ್ವಜನಿಕರು ಕೂಡಾ ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟು ಕಡಿಮೆ ಮಾಡಿ ಪರಿಸರವನ್ನು ರಕ್ಷಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಬೇಕು ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ .ಕೆ. ಶೆಟ್ಟಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹಲೋತ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರತಾಪ್ ಹೆಗ್ಡೆ ಮಾರಾಳಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಪಡ್ನೇಕರ್, ಮಧುರೈ ತ್ಯಾಗರಾಜ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ರಾಮಲಿಂಗಂ ಚಂದ್ರಶೇಖರ್ ಉಪಸ್ಥಿತರಿದ್ದರು.  ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಸ್ವಾಗತಿಸಿದರು, ಪಿಡಿಓ ಮಹೇಶ್ ನಿರೂಪಿಸಿ ವಂದಿಸಿದರು.

Comments are closed.