ಕರಾವಳಿ

ರಾಸಾಯನಿಕ ಮಿಶ್ರಿತ ಕುಂಕುಮ ನಿಷೇಧದ ಬಗ್ಗೆ ಸರಕಾರದ ಗಮನ ಸೆಳೆದಿದ್ದ ನಟ!

Pinterest LinkedIn Tumblr

ಮಂಗಳೂರು, ನವೆಂಬರ್.10: ರಾಜ್ಯದ ಎಲ್ಲಾ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಡುವ ದೇವಸ್ಥಾನಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ, ಗಂಧಪ್ರಸಾದದ ಬಳಕೆಯನ್ನು ರಾಜ್ಯ ಸರಕಾರ ನಿಷೇಧಿಸಿ ಆದೇಶ ಹೊರಡಿಸಿದೆ. ಆದರೆ ಸರಕಾರದ ಈ ನಿರ್ಧಾರದ ಹಿಂದೆ ಕರಾವಳಿಯ ನಟರೊಬ್ಬರ ಇಚ್ಛಾಶಕ್ತಿ ಮತ್ತು ಆಶಯವೊಂದು ಕೆಲಸ ಮಾಡಿತ್ತು ಅಂದರೆ ನೀವು ನಂಬಲೇಬೇಕು.

ಹೌದು ಜಿಲ್ಲೆಯವರೇ ಆಗಿರುವ ಮಾಣಿ ಸಮೀಪದ ಶಂಭುಗ ನಿವಾಸಿ ತಮ್ಮಣ್ಣ ಶೆಟ್ಟಿ ಎಂಬ ನಟ ಕರಾವಳಿಯ ದೈವಸ್ಥಾನ ಮತ್ತು ದೇವಸ್ಥಾನಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ ಮತ್ತು ಗಂಧಪ್ರಸಾದದ ಬಳಕೆ ನಿಲ್ಲಬೇಕು ಎಂದು ಸಭೆ, ಸಮಾರಂಭಗಳಲ್ಲಿ ಸರಕಾರವನ್ನು ಒತ್ತಾಯ ಮಾಡುತ್ತಿದ್ದರು. ಅವರ ಬಹುದಿನಗಳ ಬೇಡಿಕೆಗೆ ಸಿಕ್ಕ ಗೆಲುವು ಎಂಬಂತೆ ಇತ್ತೀಚೆಗೆ ಸರಕಾರ ಈ ಕುರಿತು ಆದೇಶ ಹೊರಡಿಸಿದೆ.

ತುಳುನಾಡಿನ ದೇವತಾಕಾರ್ಯಗಳು, ದೈವಾರಾಧನೆ ಬಗ್ಗೆ ಅಗಾಧವಾದ ಒಲವು ಮತ್ತು ಮಾಹಿತಿಯನ್ನು ಹೊಂದಿರುವ ತಮ್ಮಣ್ಣ ಶೆಟ್ಟರು ಬಹಳ ವರ್ಷಗಳಿಂದ ತುಳುನಾಡಿನ ಹೆಸರಾಂತ ಕಾರಣಿಕ ಕ್ಷೇತ್ರಗಳಲ್ಲಿ ರಾಸಾಯನಿಕ ಮಿಶ್ರಿತ ಕುಂಕುಮ, ಗಂಧಪ್ರಸಾದದ ಬಳಕೆಯಾಗುತ್ತಿರುವ ಬಗ್ಗೆ ಬೇಸರಗೊಂಡಿದ್ದರು. ತಾವು ಭಾಗವಹಿಸುತ್ತಿದ್ದ ಸಭೆಗಳಲ್ಲಿ ಈ ಕುರಿತು ಜನರಲ್ಲಿ ಅರಿವನ್ನು ಮೂಡಿಸುವ ಮೂಲಕ ಜನಜಾಗೃತಿ ಮಾಡುತ್ತಿದ್ದರು.

ಕೆಲಸಮಯದ ಹಿಂದಷ್ಟೇ ಮಾಣಿ ಸಮೀಪದ ದೈವಸ್ಥಾನವೊಂದಕ್ಕೆ ಕಾರ್ಯಕ್ರಮ ನಿಮಿತ್ತ ಹೋಗಿದ್ದ ತಮ್ಮಣ್ಣ ಶೆಟ್ಟಿಯವರು ಅಲ್ಲಿ ನೀಡಲಾದ ರಾಸಾಯನಿಕ ಮಿಶ್ರಿತ ಪ್ರಸಾದವನ್ನು ಸ್ವೀಕರಿಸಲು ನಯವಾಗಿ ನಿರಾಕರಿಸುವ ಅಚ್ಚರಿ ಮೂಡಿಸಿದ್ದರು. ಇದೇ ವೇಳೆ ಅಲ್ಲಿದ್ದ ಗ್ರಾಮಸ್ಥರಲ್ಲಿ ತಮ್ಮಣ್ಣ ಶೆಟ್ಟಿಯವರು ರಾಸಾಯನಿಕ ಮಿಶ್ರಿತ ಪ್ರಸಾದದ ಬಳಕೆಯಿಂದ ಆಗುವ ಹಾನಿಯ ಕುರಿತು ವಿವರಿಸುತ್ತಾರೆ.

ಇದಾಗಿ ಕೆಲವೇ ದಿನಗಳಲ್ಲಿ ಮುಜರಾಯಿ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ರಾಸಾಯನಿಕ ಮಿಶ್ರಿತ ಕುಂಕುಮ, ಗಂಧಪ್ರಸಾದ ನಿಷೇಧಿಸಿ ಆದೇಶ ಹೊರಡಿಸಿರುವುದು ಸಂತಸ ತಂದಿದೆ ಎನ್ನುತ್ತಾರೆ ನಟ, ನಿರ್ಮಾಪಕ ತಮ್ಮಣ್ಣ ಶೆಟ್ಟಿಯವರು.

ಖಳನಾಯಕ ಪಾತ್ರಗಳಲ್ಲಿ ಮಿಂಚುತ್ತಿರುವ ತಮ್ಮಣ್ಣ ಶೆಟ್ಟಿಯವರು ಕನ್ನಡ, ತುಳುಚಿತ್ರಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಬಣ್ಣದ ಬದುಕಿನ ಜೊತೆಗೆ ಸಾಮಾಜಿಕ ಕಾಳಜಿ ಹೊಂದಿರುವ ನಟರ ಬಗ್ಗೆ ಕರಾವಳಿಯ ಜನತೆ ಶಹಬ್ಬಾಸ್ ಅನ್ನುತ್ತಿದ್ದಾರೆ.

Comments are closed.