ಕರಾವಳಿ

ವರ್ಣರಂಜಿತ ಬೃಹತ್‌ ಮಂಗಳೂರು ದಸರಾ ಮೆರವಣಿ ಆರಂಭ : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ನವರಾತ್ರಿ ಮಹೋತ್ಸವಕ್ಕೆ ತೆರೆ

Pinterest LinkedIn Tumblr

ಮಂಗಳೂರು, ಅಕ್ಟೋಬರ್ 08: ಕುದ್ರೋಳಿ ಶ್ರೀಗೋಕರ್ಣನಾಥ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವದ ಹಿನ್ನೆಲೆಯಲ್ಲಿ ಮಂಗಳೂರು ದಸರಾ ಪ್ರಯುಕ್ತ ಸೆಪ್ಟಂಬರ್,29 ರಿಂದ ಅಕ್ಟೋಬರ್ 8ವರೆಗೆ ಪೂಜಿಸಲ್ಪಟ್ಟ ಶ್ರೀ ಗಣಪತಿ, ಶ್ರೀ ಶಾರದೆ ಮಾತೆ ಸಹಿತ ನವದುರ್ಗೆಯರ ವಿಗ್ರಹಗಳ ಭವ್ಯ ಶೋಭಾಯಾತ್ರೆಯು ಮಂಗಳವಾರ ಸಂಜೆ ಶ್ರೀ ಕ್ಷೇತ್ರದ ನವೀಕರಣ ಮತ್ತು ಮಂಗಳೂರು ದಸರಾ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಬಹಳ ವೈಭವದಿಂದ ಜರಗಿತು.

ಶೋಭಾಯಾತ್ರೆಗೂ ಮೊದಲು ಬೆಳಗಿನಿಂದ ಮಧ್ಯಾಹ್ನದವರೆಗೂ ಶ್ರೀ ಕ್ಷೇತ್ರದಲ್ಲಿ ಇದ್ದ ಬಿ.ಜನಾರ್ದನ ಪೂಜಾರಿಯವರು ತಮ್ಮ ಸಂದೇಶ ವಾಚನದೊಂದಿಗೆ ಶ್ರೀಶಾರದಾ ಮಾತೆಯ ವಿಗ್ರಹದ ಪೂಜೆ ನಡೆಸಿ ನವದುರ್ಗೆಯರ ಮೆರವಣಿಗೆಗೆ ಚಾಲನೆ ನೀಡಿದ್ದರು. ಬಳಿಕ ಶೋಭಾಯಾತ್ರೆ ಸಂದರ್ಭದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಪೂಜಾರಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿಲ್ಲ.

ಇದೇ ಸಂದರ್ಭದಲ್ಲಿ ಶ್ರೀ ದೇವರ ಸೇವೆ ಮಾಡಿವರಿಗೆ ಹಾಗೂ ಇತರ ಸಾಧಕರಿಗೆ ಕ್ಷೇತ್ರದ ವತಿಯಿಂದ ಶ್ರೀ ಶಾರದೆ ಮಾತೆಯ ಸಮುಖದಲ್ಲಿ ಗೌರವ -ಸಮ್ಮಾನ ನಡೆಯಿತು. ಗೌರವ -ಸಮ್ಮಾನದ ಬಳಿಕ ಶ್ರೀ ಶಾರದೆ ಮಾತೆಯ ವಿಸರ್ಜನಾ ಮೆರವಣಿಗೆ ಆರಂಭಗೊಂಡಿತು.

ಮಂಗಳೂರಿಗೆ ಮಂಗಳೂರೇ ವರ್ಣಮಯವಾಗಿ ಕಂಗೊಳಿಸಿ-ವಿಜೃಂಭಿಸಿದ ಕುದ್ರೋಳಿ ಕ್ಷೇತ್ರದ ‘ಮಂಗಳೂರು ದಸರಾ’ ಶೋಭಾಯಾತ್ರೆ ಭಾರೀ ಸಂಖ್ಯೆಯ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ ಮಂಗಳವಾರ ಸಂಜೆ ಸಂಭ್ರಮ ಸಡಗರದೊಂದಿಗೆ ಕ್ಷೇತ್ರದಿಂದ ಆರಂಭವಾಗೊಂಡಿತ್ತು.

ಕುದ್ರೋಳಿ ದೇವಸ್ಥಾನದ ದರ್ಬಾರ್ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ, ಆದಿಶಕ್ತಿ, ಶೈಲಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸ್ಕಂದ ಮಾತಾ, ಕಾತ್ಯಾಯಿನಿ, ಮಹಾಕಾಳಿ, ಮಹಾಗೌರಿ, ಸಿದ್ಧಿದಾತ್ರಿ, ಶಾರದ ಮಾತೆಯನ್ನುಯನ್ನು ಸಂಜೆ ದೇವಸ್ಥಾನದ ದರ್ಬಾರ್ ಮಂಟಪದಿಂದ ಭಕ್ತ ಜನಸಾಗರದ ಜಯಘೋಷಗಳೊಂದಿಗೆ ಅಲಂಕೃತ ವಾಹನಗಳಿಗೆ ಏರಿಸಲಾಯಿತು.

ಸಾಲು ಸಾಲು ಬಣ್ಣದ ಕೊಡೆಗಳು, ಕಿವಿಗಡಚಿಕ್ಕುವ ಚೆಂಡೆ ವಾದನ, ನಾಸಿಕ್ ಬ್ಯಾಂಡ್ ಅಬ್ಬರ, ಭಜನಾ ತಂಡಗಳ ಶಿಸ್ತುಬದ್ಧ ಕುಣಿತ, ಕೋಲಾಟ, ವೀರಗಾಸೆ, ಕಂಸಾಳೆ , ಡೋಲು, ಜಾಗಟೆ, ಕೊಂಬು, ಕಹಳೆಯ ನಿನಾದ, ಮುಗಿಲು ಮುಟ್ಟಿದ ಭಕ್ತರ ಜಯಘೋಷ, ವೈವಿಧ್ಯಮಯ ನೃತ್ಯ, ಅಲ್ಲಲ್ಲಿ ಸಂಗೀತದ ರಸದೌತಣದ ಮೂಲಕ ಶ್ರೀ ಮಹಾಗಣಪತಿ, ಶಾರದೆ, ಆದಿಶಕ್ತಿ, ಶ್ರೀ ಕ್ಷೇತ್ರದ ವಿಶಿಷ್ಟ ಪರಂಪರೆಯಾದ ನವದುರ್ಗೆಯರ ಶೋಭಾಯಾತ್ರೆಯು ಕುದ್ರೋಳಿ ಶ್ರೀ ಗೋಕರ್ಣಣಾಥೇಶ್ವರ ದೇವಳದಿಂದ ಪ್ರಾರಂಭವಾಗೊಂಡಿತ್ತು.

ಕರಾವಳಿಯ ವಿವಿಧ ಪುಣ್ಯಕ್ಷೇತ್ರಗಳಿಂದ ಪ್ರವರ್ತಿತ ಧಾರ್ಮಿಕ- ಸಾಂಸ್ಕೃತಿಕ ಸ್ತಬ್ಧಚಿತ್ರ, ಹುಲಿವೇಷ, ನೃತ್ಯರೂಪಕಗಳು, ದೇಶದ ಪರಂಪರೆಯ ಟ್ಯಾಬ್ಲೋಗಳು, ತ್ರಿಶೂರಿನ ಬಣ್ಣದ ಕೊಡೆ, ಕೇರಳದ ಚೆಂಡೆವಾದ್ಯ, ಕಲ್ಲಡ್ಕ ಶಿಲ್ಪಾಗೊಂಬೆಗಳು, ಬೆಂಗಳೂರಿನ ವಾದ್ಯತಂಡ, ಮಹಾರಾಷ್ಟ್ರದ ಡೋಲುನೃತ್ಯ, ಕರ್ನಾಟಕದ ಜಾನಪದ ವೈವಿಧ್ಯ… ಹೀಗೆ ಶೋಭಾಯಾತ್ರೆಗೆ ಮತ್ತಷ್ಟು ಮೆರುಗು ತುಂಬಿತು. ಶೋಭಾಯಾತ್ರೆಯುದ್ದಕ್ಕೂ ಸೇರಿದ ಅಪಾರ ಜನಸ್ತೋಮ ಸಂಭ್ರಮಿಸಿತು.

ಕಡಲತಡಿಗೆಹರಿದು ಬಂದ ಜನ ಸಾಗರ:

ಸಾಗರದಂತೆ ಹರಿದು ಬಂದ ಲಕ್ಷಾಂತರ ಭಕ್ತರು ವರ್ಣಮಯ ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ನಗರವು ಪೂರ್ತಿ ವರ್ಣಮಯ ವಿದ್ಯುದ್ದೀಪಾಲಂಕಾರದಿಂದ ಕಂಗೊಳಿಸಿತು. ಶೋಭಾಯಾತ್ರೆ ಸಾಗಿದ ರಸ್ತೆಯುದ್ದಕ್ಕೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದ್ದು, ಸ್ವಾಗತ ಕೋರುವ ದೇವಿಯ ಚಿತ್ರದ ಫ್ಲೆಕ್ಸ್‌ಗಳು ರಾರಾಜಿಸುತ್ತಿದ್ದವು. ಅಲ್ಲಲ್ಲಿ ಭಕ್ತಾಧಿಗಳು ಆರತಿ ಪೂಜೆ ಸಲ್ಲಿಸಿದರು. ಮೆರವಣಿಗೆ ವೀಕ್ಷಿಸಲು ಮಕ್ಕಳು, ಮಹಿಳೆಯರು ಸೇರಿದಂತೆ ಲಕ್ಷಾಂತರ ಮಂದಿ ಸಂಜೆಯಿಂದಲೇ ರಸ್ತೆ ಪಕ್ಕದಲ್ಲಿ ಗುಂಪುಗುಂಪಾಗಿ ನೆರೆದಿದ್ದರು.

ಬಿಗಿ ಪೊಲೀಸ್ ಬಂದೋಬಸ್ತ್:

ದಸರಾ ಮೆರವಣಿಗೆ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ಬದಲಾವಣೆ ಮಾಡಲಾಗಿತ್ತು. ಮೆರವಣಿಗೆ ಸಾಗುವ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ವಾಹನ ಸಂಚಾರ ನಿಷೇಧ:

ಮೆರವಣಿಗೆಯ ಹಿನ್ನಲೆಯಲ್ಲಿ ಮಂಗಳವಾರ 3 ಗಂಟೆಯಿಂದ ಮೆರವಣಿಗೆ ಸಾಗುವ ದಾರಿಗಳಲ್ಲಿ ಹಾಗೂ ರಸ್ತೆ ಅಕ್ಕಪಕ್ಕಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೆರವಣಿಗೆ ಆರಂಭವಾದ ಕೂಡಲೇ ನ್ಯೂ ಚಿತ್ರದಿಂದ ಕುದ್ರೋಳಿ ಕಡೆಗೆ, ಅಳಕೆ ಜಂಕ್ಷನ್ ನಿಂದ ಕುದ್ರೋಳಿ ದೇವಸ್ಥಾನದ ಕಡೆಗೆ ವಾಹನ ಸಂಚಾರ ನಿಷೇಧ ಮಾಡಲಾಗಿತ್ತು. ಕುದ್ರೋಳಿ ದೇವಸ್ಥಾನದ ದಕ್ಷಿಣ ಗೇಟ್ ಮತ್ತು ಉತ್ತರ ಗೇಟ್ ರಸ್ಥೆಗಳಲ್ಲಿ ನಿಷೇಧ ಹೇರಲಾಗಿತ್ತು.

ಬುಧವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನ: 

ಶೋಭಾಯಾತ್ರೆಯು ಮಣ್ಣಗುಡ್ಡೆ, ಲೇಡಿಹಿಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ವೃತ್ತ, ಎಂಜಿ ರಸ್ತೆ, ಕೆ‌.ಎಸ್‌.ರಾವ್ ರಸ್ತೆ, ಹಂಪನಕಟ್ಟೆ, ಜಿ‌ಎಚ್‌ಎಸ್ ರಸ್ತೆ ,ಮೋಹಿನಿ ವಿಲಾಸ, ಓಂಮಹಲ್ ಜಂಕ್ಷನ್, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗದಿಂದ ಲೋವರ್ ಕಾರ್‌ಸ್ಟ್ರೀಟ್, ನ್ಯೂಚಿತ್ರಾ ಟಾಕೀಸ್, ಅಳಕೆ ಮೂಲಕ ಸಾಗಿ ಮತ್ತೆ ಕುದ್ರೋಳಿ ಶ್ರೀ ಕ್ಷೇತ್ರಕ್ಕೆ ಆಗಮಿಸಿ ಮಂಗಳೂರು ದಸರಾ ಬುಧವಾರ ಮುಂಜಾನೆ ಶ್ರೀ ಕ್ಷೇತ್ರದ ಪುಷ್ಕರಣಿಯಲ್ಲಿ ಸಂಪನ್ನಗೊಳ್ಳಲ್ಲಿದೆ.

ಈ ಸಂದರ್ಭದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ, ಅಭಯ ಚಂದ್ರ ಜೈನ್, ಶಾಸಕ ಯು.ಟಿ. ಖಾದರ್, ಮಾಜಿ ಶಾಸಕ ಜೆ.ಆರ್. ಲೋಬೊ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷ ಮುಹಮ್ಮದ್ ಮೋನು, ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕೋಶಾಧಿಕಾರಿ ಪದ್ಮರಾಜ್. ಆರ್, ಅಡ್ವಕೇಟ್, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಪದಾಧಿಕಾರಿಗಳಾದ ತಾರಾನಾಥ, ರವಿ ಶಂಕರ ಮಿಜಾರ್, ಕೆ.ಮಹೇಶ್ ಚಂದ್ರ, ಅಭಿವೃದ್ಧಿ ಸಮಿತಿಯ ಪದಾಧಿಕಾರಿಗಳಾದ ಡಾ.ಬಿ.ಜಿ. ಸುವರ್ಣ, ದೇವೇಂದ್ರ ಪೂಜಾರಿ, ಮುಂತಾದವರು ಉಪಸ್ಥಿತರಿದ್ದರು

_ Sathish Kapikad

Comments are closed.