ರಾಷ್ಟ್ರೀಯ

ಕಣಿವೆ ರಾಜ್ಯದ ಮೇಲೆ ಹೇರಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲು ಪ್ರಧಾನಿ ಮೋದಿಗೆ ಪತ್ರ

Pinterest LinkedIn Tumblr

ಹೊಸದಿಲ್ಲಿ,ಅ.8: ಜಮ್ಮು ಮತ್ತು ಕಾಶ್ಮೀರದ ಮೇಲೆ ಸದ್ಯ ಹೇರಲಾಗಿರುವ ನಿರ್ಬಂಧ ಸ್ವೀಕಾರಾರ್ಹವಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿ 250ಕ್ಕೂ ಅಧಿಕ ಶಿಕ್ಷಣತಜ್ಞರು, ಪತ್ರಕರ್ತರು ಮತ್ತು ರಾಜಕೀಯ ನಾಯಕರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಆಗಸ್ಟ್ 5ರಿಂದ ಕಣಿವೆ ರಾಜ್ಯದ ಮೇಲೆ ಹೇರಲಾಗಿರುವ ನಿರ್ಬಂಧವನ್ನು ತೆರವುಗೊಳಿಸಬೇಕು ಮತ್ತು ಅಲ್ಲಿ ವಿಧಾನ ಸಭೆ ಚುನಾವಣೆ ನಡೆಸಬೇಕು ಎಂದು ಗಣ್ಯರು ಮನವಿ ಮಾಡಿದ್ದಾರೆ. 370ನೇ ವಿಧಿ ಮತ್ತು ರಾಜ್ಯ ಸ್ಥಾನಮಾನದ ಬಗ್ಗೆ ಅಲ್ಲಿನ ಜನರೇ ನಿರ್ಧರಿಸಲಿ ಎಂದು ಅವರು ಅಭಿಪ್ರಾಯಿಸಿದ್ದಾರೆ.

ರಾಜ್ಯಕ್ಕೆ ನೀಡಲಾದ ವಿಶೇಷ ಸ್ಥಾನಮಾನದ ರದ್ದತಿ ಮತ್ತು ಅದನ್ನು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ನಿರ್ಧಾರವನ್ನು ಅನುಷ್ಠಾನಗೊಳಿಸಿದ ರೀತಿಯನ್ನು ಗಣ್ಯರು ಟೀಕಿಸಿದ್ದಾರೆ. ರಾಜ್ಯದ ಜನರು ಅಥವಾ ಚುನಾಯಿತ ನಾಯಕರ ಸಲಹೆಯನ್ನು ಕೇಳದೆ ಕೇಂದ್ರ ಸರಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಸಹಿದಾರರು ಅಸಮಾಧಾನ ತೋಡಿಕೊಂಡಿದ್ದಾರೆ. ರಾಜ್ಯದಲ್ಲಿ ಕಡಿತಗೊಳಿಸಲಾಗಿರುವ ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕವನ್ನು ಮರುಸ್ಥಾಪಿಸುವಂತೆಯೂ ಗಣ್ಯರು ಆಗ್ರಹಿಸಿದ್ದಾರೆ.

ಗಣ್ಯರು ಬರೆದ ಪತ್ರದ ಸಾರಾಂಶ: ‘ಮಾನ್ಯ ಪ್ರಧಾನ ಮಂತ್ರಿ ಮೋದಿ, ಕಾಶ್ಮೀರ ಕಣಿವೆ ಮತ್ತು ಜಮ್ಮುವಿನ ಕೆಲವು ಭಾಗದ ಜನರು ಆಗಸ್ಟ್ 5, 2019ರಿಂದ ಭದ್ರತೆ, ರಾಜಕೀಯ ಮತ್ತು ಸಂವಹನ ನಿರ್ಬಂಧಕ್ಕೆ ಒಳಗಾಗಿದ್ದಾರೆ. ಅಲ್ಲಿನ ಜನರ ಮನೆಗಳ, ಶಾಲೆಗಳ ಮತ್ತು ವಿಶ್ವವಿದ್ಯಾಲಯಗಳ ಪ್ರವೇಶ ಮತ್ತು ನಿರ್ಗಮನ ದ್ವಾರಗಳಲ್ಲಿ ಸಾವಿರಾರು ಸೈನಿಕರು ನಿಗಾಯಿರಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳು ಮತ್ತು ಶಾಸಕರು ಸೇರಿದಂತೆ ನೂರಾರು ರಾಜಕೀಯ ನಾಯಕರು ನಿಯಂತ್ರಣಾತ್ಮಕ ಬಂಧನಲ್ಲಿದ್ದಾರೆ. ಮೊಬೈಲ್ ಫೋನ್‌ಗಳ ಸಂಪರ್ಕ ಸ್ಥಗಿತಗೊಳಿಸಲಾಗಿದೆ ಮತ್ತು ಅಂತರ್ಜಾಲ ಕಡಿತಗೊಳಿಸಲಾಗಿದೆ. ಉದ್ದಿಮೆಗಳ ಕೋಟ್ಯಂತರ ರೂ. ನಷ್ಟ ಅನುಭವಿಸಿವೆ. ಇದೇ ವೇಳೆ, ಭಾರತೀಯ ಸಂವಿಧಾನದ 370ನೇ ವಿಧಿಯಡಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾದ ವಿಶೇಷ ಸ್ಥಾನಮಾನವನ್ನು ನಮ್ಮ ಸರಕಾರ ರದ್ದುಗೊಳಿಸಿದೆ ಮತ್ತು ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿದೆ. ಈ ಎರಡೂ ಕ್ರಮಗಳನ್ನು ರಾಜ್ಯದ ಜನತೆ ಅಥವಾ ಚುನಾಯಿತ ನಾಯಕರ ಸಲಹೆ ಪಡೆಯದೆ ತೆಗೆದುಕೊಳ್ಳಲಾಗಿದೆ. ನಿರ್ಬಂಧ ಹೇರಲಾಗಿ ಈಗಾಗಲೇ 62 ದಿನಗಳು ಕಳೆದಿದ್ದು ರಾಜ್ಯದ ಜನತೆ ಏನು ಭಾವಿಸುತ್ತಾರೆ ಎಂಬ ಬಗ್ಗೆ ನಮಗೆ ಇನ್ನೂ ತಿಳಿದಿಲ್ಲ. ಕಣಿವೆ ರಾಜ್ಯದ ನಮ್ಮ ಗೆಳೆಯರು ಮತ್ತು ಸಂಬಂಧಿಕರ ಜೊತೆ ಮಾತನಾಡಲೂ ನಮಗೆ ಸಾಧ್ಯವಾಗುತ್ತಿಲ್ಲ. ಮಾನವೀಯ ನೆಲೆಯಲ್ಲಿ ಈ ಪರಿಸ್ಥಿತಿ ಸ್ವೀಕಾರಾರ್ಹವಲ್ಲ ಎಂದು ನಾವು ನಾವು ಭಾವಿಸುತ್ತೇವೆ. ತಮಿಳುನಾಡು ಉಚ್ಚ ನ್ಯಾಯಾಲಯ ಇತ್ತೀಚೆಗೆ ತನ್ನ ತೀರ್ಪಿನಲ್ಲಿ ಮೂಲಭೂತ ಹಕ್ಕು ಎಂದು ಘೋಷಿಸಿರುವ ಮೊಬೈಲ್ ಮತ್ತು ಅಂತರ್ಜಾಲ ಸಂಪರ್ಕವನ್ನು ಸರಕಾರ ಕೂಡಲೇ ಮರುಸ್ಥಾಪಿಸಬೇಕು. ಪ್ರಜಾಸತಾತ್ಮಕ ನೆಲೆಯಲ್ಲೂ ಇದು ಸ್ವೀಕಾರಾರ್ಹವಲ್ಲ ಎಂದು ನಾವು ಭಾವಿಸುತ್ತೇವೆ. ಜಮ್ಮು ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ತಮ್ಮ ಜೀವನದ ಮೇಲೆ ಪರಿಣಾಮ ಬೀರುವ ಕಾನೂನುಗಳ ಬಗ್ಗೆ ಚರ್ಚೆ ನಡೆಸುವ ಹಕ್ಕನ್ನು ಸರಕಾರ ಕಿತ್ತುಕೊಳ್ಳಬಹುದಾದರೆ ಅದನ್ನು ದೇಶಾದ್ಯಂತ ಮಾಡಲು ಸರಕಾರವನ್ನು ತಡೆದಿರುವುದಾದರೂ ಏನು?, ನಿರ್ಬಂಧವನ್ನು ಹಿಂಪಡೆಯಲು, ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಸಲು ಮತ್ತು 370ನೇ ವಿಧಿ ಮತ್ತು ರಾಜ್ಯ ಸ್ಥಾನಮಾನದ ಬಗ್ಗೆ ಜನರೇ ನಿರ್ಧರಿಸಲು ಬಿಡಲು ಈಗಲೂ ಸಮಯವಿದೆ. ಹಾಗೆ ಮಾಡುವಂತೆ ನಾವು ಸರಕಾರಕ್ಕೆ ಮನವಿ ಮಾಡುತ್ತೇವೆ’.

Comments are closed.