ಕರಾವಳಿ

ಶ್ರೀಕೃಷ್ಣ ಜನ್ಮಾಷ್ಟಮಿ ಹಿನ್ನೆಲೆ : ಕರಾವಳಿಯಲ್ಲಿ ಮೊಸರುಕುಡಿಕೆ ಉತ್ಸವ ಸಂಭ್ರಮ :

Pinterest LinkedIn Tumblr

ಮಂಗಳೂರು, ಆಗಸ್ಟ್,25: ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶನಿವಾರ ಸಂಜೆ ಮಂಗಳೂರಿನ ವಿವಿಧೆಡೆಗಳಲ್ಲಿ ಮೊಸರುಕುಡಿಕೆ ಉತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.

ಕದ್ರಿ, ಅತ್ತಾವರ, ಕಾವೂರು, ಉರ್ವಾಸ್ಟೋರ್, ಉರ್ವಾ, ಸಂಘನೀಕೇತನ ಹೀಗೆ ಮಂಗಳೂರಿನ ಹಲವೆಡೆಗಳಲ್ಲಿ ಮೊಸರುಕುಡಿಕೆ ಉತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ವರ್ಣರಂಜಿತ ಟ್ಯಾಬ್ಲೋಗಳು, ಹುಲಿವೇಷ ಸೇರಿದಂತೆ ವಿವಿಧ ಶೈಲಿಯ ವೇಷಗಳು ಮೆರವಣಿಗೆಗೆ ಮೆರುಗು ನೀಡಿದವು.

ಮೊಸರು ಕುಡಿಕೆ ಅಂಗವಾಗಿ ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಮೆರವಣಿಗೆ ಸಾಗುವ ಹಾದಿಯಲ್ಲಿ ತೂಗುಹಾಕಲಾಗಿದ್ದ ಮೊಸರು ಕುಡಿಕೆಗಳನ್ನು ಯುವಕರ ತಂಡಗಳು ಪಿರಮಿಡ್‌ ರಚಿಸಿ ಒಡೆದು ಸಂಭ್ರಮಿಸಿದರು.

ಕದ್ರಿ, ಅತ್ತಾವರ, ಉರ್ವಾಸ್ಟೋರ್ ಮುಂತೆಡೆಗಳಲ್ಲಿ ರಸಮಂಜರಿ, ಸಾಂಸ್ಕೃತಿಕ ನೃತ್ಯ ಪ್ರದರ್ಶನ ಸೇರಿದಂತೆ ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಕದ್ರಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಸಮಿತಿಯ ಆಶ್ರಯದಲ್ಲಿ ಜರಗಿದ ಮೊಸರು ಕುಡಿಕೆ ಉತ್ಸವದಲ್ಲಿ ಶ್ರೀ ಗೋಪಾಲ ಕೃಷ್ಣ ದೇವಾಲಯದಿಂದ ಶ್ರೀಕೃಷ್ಣ ದೇವರ ಮೂರ್ತಿಯ ಶೋಭಾಯಾತ್ರೆ ಭಕ್ತಿ, ಸಂಭ್ರಮ, ಸಡಗರದೊಂದಿಗೆ ಸಂಜೆ ನಡೆಯಿತು.

ಅತ್ತಾವರದಲ್ಲಿ ಸಾರ್ವಜನಿಕ ಶ್ರೀಕೃಷ್ಣ ಜಯಂತ್ಯುತ್ಸವ ಸಮಿತಿ ಆಶ್ರಯದಲ್ಲಿ 110ನೇ ವರ್ಷದ ಮೊಸರುಕುಡಿಕೆ ಉತ್ಸವ ಜರಗಿತು. ವಿವಿಧ ಸಾಂಸ್ಕೃತಿಕ, ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಸಂಜೆ 6ರಿಂದ ಶ್ರೀಕೃಷ್ಣ ದೇವರ ಭವ್ಯ ಶೋಭಾಯಾತ್ರೆ ನೆರವೇರಿತು.

Comments are closed.