
ಮಂಗಳೂರು : ನಗರದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರು ನಗರ ದಕ್ಷಿಣದಲ್ಲಿರುವ ಪ್ರತಿ ವಾರ್ಡ್ ನಲ್ಲಿ 50 ಜನರ ತಂಡಗಳನ್ನು ರಚಿಸಿದ್ದು, ತಂಡಗಳು ಇದೇ ಭಾನುವಾರದಿಂದ ಪ್ರಾರಂಭಿಸಿ ತಮ್ಮ ವಾರ್ಡ್ ಗಳ ಪ್ರತಿ ಮನೆಗಳಿಗೆ ತೆರಳಿ ಅಲ್ಲಿ ಡೆಂಗ್ಯೂ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಿದ್ದಾರೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರಿನಲ್ಲಿ ನಾಗರಿಕರು ತಮ್ಮ ಆರೋಗ್ಯದ ರಕ್ಷಣೆಗಾಗಿ ಪ್ರಮುಖವಾಗಿ ಮನೆಯ ಒಳಗೆ ಎಲ್ಲಿಯೂ ನೀರು ಸಂಗ್ರಹವಾಗದಂತೆ ಎಚ್ಚರಿಕೆ ವಹಿಸಬೇಕು.
ಮನೆಯ ಬಚ್ಚಲು ಕೋಣೆ, ಅಡುಗೆ ಕೋಣೆ ಸಹಿತ ಟೇರಿಸಿನಲ್ಲಿ ಹಾಗೂ ಮಳೆಯ ನೀರು ಹರಿದು ಹೋಗುವ ಮನೆಯ ಸುತ್ತಮುತ್ತಲಿನ ಎಲ್ಲಾ ಜಾಗಗಳಲ್ಲಿ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನಿಂತ ನೀರಿನಲ್ಲಿ ಲಾರ್ವಾ ಎನ್ನುವ ಅಪಾಯಕಾರಿ ಕ್ರಿಮಿ ಉತ್ಪಾದನೆಯಾಗಿ ಅದು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಅದು ಕ್ರಮೇಣ ಸೊಳ್ಳೆಯಾಗಿ ನಮ್ಮ ದೇಹವನ್ನು ಕಚ್ಚಿ ಡೆಂಗ್ಯೂ ಹರಡುವಲ್ಲಿ ಕಾರಣವಾಗುತ್ತದೆ. ಆದ್ದರಿಂದ ಎಲ್ಲಿಯೂ ನೀರು ನಿಲ್ಲದಂತೆ ಎಚ್ಚರಿಕೆ ವಹಿಸುವ ಕೆಲಸ ನಡೆಯಬೇಕು.
ಮನೆಯ ಹೊರಗೆ ಇಟ್ಟ ಟಯರ್, ಕುಡಿದು ಬಿಸಾಡಿದ ಬೊಂಡದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅನೇಕ ಸಂದರ್ಭಗಳಲ್ಲಿ ಸಂಗ್ರಹಿಸಿಟ್ಟ ನೀರನ್ನು ಹಾಗೆ ಬಿಡುವುದರಿಂದ ಅದು ಲಾರ್ವಾ ಉತ್ಪತ್ತಿಯಾಗಿ ಕಾರಣವಾಗುತ್ತದೆ ಎಂದು ಶಾಸಕ ಕಾಮತ್ ತಿಳಿಸಿದರು.
ನಮ್ಮ ಪಕ್ಷದ ಕಾರ್ಯಕರ್ತರು ಜಾಗೃತಿ ಮೂಡಿಸುವ ಕೆಲಸದ ಅಂಗವಾಗಿ ನಿಮ್ಮ ಮನೆಗಳಿಗೆ ಬರುವಾಗ ಅವರಿಂದ ಸೂಕ್ತ ಮಾಹಿತಿಯನ್ನು ಪಡೆದುಕೊಂಡು ಅದನ್ನು ಪಾಲಿಸಬೇಕು. ಶಾಸಕನ ನೆಲೆಯಲ್ಲಿ ಡೆಂಗ್ಯೂ ನಿಯಂತ್ರಣಕ್ಕೆ ಯೋಗ್ಯ ಕ್ರಮಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳನ್ನು ನಡೆಸಿದ್ದು ಜಿಲ್ಲಾಧಿಕಾರಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದೇನೆ ಎಂದು ಶಾಸಕ ಕಾಮತ್ ತಿಳಿಸಿದರು.
ಫಾಗಿಂಗ್ ಹೆಚ್ಚೆಚ್ಚು ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಸೂಚಿಸಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೆ ತಮ್ಮ ಪೇಸ್ ಬುಕ್ ಪೇಜ್ ನಲ್ಲಿ ಮಾಹಿತಿ ನೀಡಬಹುದು, ತಮ್ಮ ಕಚೇರಿಗೆ ಬಂದು ಮಾಹಿತಿ ನೀಡಬಹುದು, ಫೋನ್ ಮಾಡಿ ತಿಳಿಸಬಹುದು.
ಅದೇ ರೀತಿಯಲ್ಲಿ ಮನಪಾದ ಸಹಾಯವಾಣಿ ಸಂಖ್ಯೆ 2220306 ಕರೆ ಮಾಡಿ ತಳಿಸಬಹುದು ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.
ಇನ್ನು ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರು, ಸಾಮಾಜಿಕ ಕಾರ್ಯಕರ್ತರು ನಮ್ಮೊಂದಿಗೆ ಕೈ ಜೋಡಿಸಿ ಡೆಂಗ್ಯೂ ವಿರುದ್ಧ ನಮ್ಮ ಜಾಗೃತಿ ಹೋರಾಟದಲ್ಲಿ ಸಹಕರಿಸಲಿದ್ದಾರೆ ಎಂದು ಕೂಡ ಶಾಸಕ ಕಾಮತ್ ಹೇಳಿದ್ದಾರೆ.
Comments are closed.