ಕರಾವಳಿ

ಒಳ್ಳೇ ಕಾರ್ಯಕ್ಕೆ ಸಹಕರಿಸಿ, ನಮ್ಮ ನಿಂದಿಸಬೇಡಿ: ಜಡ್ಕಲ್ ಗ್ರಾ.ಪಂ ಅಧ್ಯಕ್ಷರ ವಿರುದ್ಧ ದಲಿತರು ಗರಂ

Pinterest LinkedIn Tumblr

ಕುಂದಾಪುರ: ಮೂಲ ನಿವಾಸಿಗಳ ಹೆಸರಲ್ಲಿ ಪತ್ರಿಕಾ ಪ್ರಚಾರ ಪಡೆದು ಬಿಳಿ ಅಂಗಿ ಧರಿಸಿ ಶೋಕಿ ಮಾಡುತ್ತಾರೆ ಎಂದು ದಲಿತ ಮುಖಂಡ ವಾಸುದೇವ ಮುದೂರು ಅವರ ಜಡ್ಕಲ್ ಗ್ರಾಪಂ ಅಧ್ಯಕ್ಷ ಅನಂತಮೂರ್ತಿ ಅವರು ನಿಂದಿಸಿದ್ದಾರೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಜಡ್ಕಲ್ ಗ್ರಾಮ ಪಂಚಾಯತಿ ಎದುರು ಪ್ರತಿಭಟನೆ ವೇದಿಕೆ ಸಿದ್ದಮಾಡಿಕೊಂಡಿದ್ದರು. ಪ್ರತಿಭಟನೆ ನಡೆಸಲು ಮುಂದಾದ ದಲಿತ ನಾಯಕರನ್ನು ಮನವೊಲಿಸಿಸಲು ಖುದ್ದು ಕುಂದಾಪುರ ಡಿವೈ‌ಎಸ್ಪಿ ಬಿ.ಪಿ, ದಿನೇಶ್ ಕುಮಾರ್ ಗ್ರಾಪಂ.ಗೆ ದೌಡಾಯಿಸಿ ದಲಿತ ಮುಖಂಡರ ಬಳಿ ಮಾತುಕತೆ ನಡೆಸಿದ್ದು ಬಳಿಕ ಗ್ರಾ.ಪಂ ಸಭಾಂಗಣದಲ್ಲಿ ಡಿವೈ‌ಎಸ್ಪಿ ನೇತ್ರತ್ವದಲ್ಲಿ ದಲಿತರ ಸಭೆ ನಡೆಸಿದರು.

ಮೂಲನಿವಾಸಿಗಳ ಜೀವನ ಮಟ್ಟ ಸುಧಾರಣೆ ಮೂಲಬೂತ ಸೌಲಭ್ಯ ಆರೋಗ್ಯ ಸಮಸ್ಯೆ ಬಗ್ಗೆ ದಲಿತ ಸಂಘರ್ಷ ಸಮಿತಿ ಅಭಿಯಾನ ಆರಂಭಿಸಿದೆ. ಅದರ ಭಾಗವಾಗಿ ಜಡ್ಕಲ್ ಗ್ರಾಮ ಕೊರಗ ಕುಟುಂಬ ಸಂಕಷ್ಟ ಬಗ್ಗೆ ದಲಿತ ಸಂಘರ್ಷ ಸಮಿತಿ ಜಾಗೃತಿ ಮೂಡಿಸಿದರೆ, ಉತ್ತಮ ಕೆಲಸಕ್ಕೆ ಪ್ರೋತ್ಸಾಹ ನೀಡಬೇಕು. ಅದ ಬಿಟ್ಟು ಸಂಘಟನೆ ಜೊತೆ ಕೈ ಜೋಡಿಸದೆ ಉತ್ಸಾಹಕ್ಕೆ ತಣ್ಣೀರೆರಚುವ ಕೆಲಸ ಮಾಡಬಾರದು ಎಂದು ಸಭೆಯಲ್ಲಿ ದಲಿತ ಮುಖಂಡರು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ನ್ಯಾಯವಾದಿ ಟಿ. ಮಂಜುನಾಥ ಗಿಳಿಯಾರು ಮಾತನಾಡಿ, ಕೆಲವೆಡೆಗಳಲ್ಲಿ ಮೂಲಸೌಕರ್ಯ ವಂಚಿತರಾದ ಕೊರಗ ಸಮುದಾಯದವರ ಅನುಕೂಲಕ್ಕಾಗಿ ಅವರಿಗೆ ಸಹಕಾರ ಮಾಡಲು ಬರುವ ದಲಿತ ಮುಖಂಡರಿಗೆ ಅಧಿಕಾರದಲ್ಲಿದ್ದವರು ಮತ್ತು ಜನಪ್ರತಿನಿಧಿಯಾದವರು ಸಹಕಾರ ನೀಡಲು ತೆರಳುವ ಸಮುದಾಯದ ಪ್ರತಿನಿಧಿಗಳನ್ನು ಪ್ರೋತ್ಸಾಹ ನೀಡಿ ಬಡವರಿಗೆ ಬದುಕು ಕಲ್ಪಿಸಬೇಕು ಹೊರತು ಅವಮಾನ ಮಾಡಿ ಅವರನ್ನು ಕುಗ್ಗಿಸುವ ಕೆಲಸ ಮಾಡುವುದು ಸರಿಯಲ್ಲ. ನಮ್ಮ ಕೈಯಲ್ಲಾದ ಪರೋಪಕಾರಿ ಕೆಲಸಗಳನ್ನು ನಾವು ಮಾಡುತ್ತಿದ್ದು ಇದಕ್ಕೆ ಸ್ಥಳಿಯ ಗ್ರಾ,ಪಂ ಪ್ರತಿನಿಧಿಗಳು ಅಡ್ಡಗಾಲು ಹಾಕುವುದು ತರವಲ್ಲ ಎಂದರು.

ದಲಿತ ಸಂಘರ್ಷ ಸಮಿತಿ ತಾಲೂಕು ಅಧ್ಯಕ್ಷ ರಾಜು ಬೆಟ್ಟಿನಮನೆ ಮಾತನಾಡಿ, ಸಮಾಜದಲ್ಲಿ ಅಶಕ್ತರಾದವರ ಸಹಕಾರಕ್ಕೆ ಬಂದವರನ್ನು ಅವಮಾನಿಸಿದಲ್ಲಿ ಮುಂದಿನ ದಿನಗಳಲ್ಲಿ ದ.ಸಂ.ಸ. ಉಘ್ರ ಹೋರಾಟ ಮಾಡಲಿದೆ ಎಂದು ಎಚ್ಚರಿಸಿದರು. ಜಡ್ಕಲ್ ಗ್ರಾಮ ಪಂಚಾಯಿತಿ ಸದಸ್ಯರಾದ ದಾಸಪ್ಪ, ನಾರಾಯಣ ಶೆಟ್ಟಿ, ಸೂಲ್ಯ ಬೋವಿ, ಕುಂದಾಪುರ ಪುರಸಭೆ ಸದಸ್ಯ ಪ್ರಭಾಕರ್, ದಮಿತಿ ಸಂಘರ್ಷ ಸಮಿತಿ ಮುಖಂಡರಾದ ಮಂಜುನಾಥ ನಾಗೂರು, ರಾಜಶೇಖರ್ ಗುಲ್ವಾಡಿ, ಗೀತಾ ಸುರೇಶ್ ಮೊದಲಾದವರಿದ್ದರು.

ಸಂಘಟನೆ ವಿಚಾರದಲ್ಲಿ ಯಾವುದೇ ನಿಂದನೆ ಮಾಡಿಲ್ಲ. ವೈಯಕ್ತಿಕ ನಿಂದನೆಯನ್ನೂ ಮಾಡಿಲ್ಲ, ನನ್ನ ವಾದ ವಿವಾದಗಳಿಂದ ಸಂಘಟನೆಗೆ ಬೇಸರವಾಗಿದ್ದರೆ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಗ್ರಾಪಂಗೆ ಬರುವ ಎಲ್ಲಾ ವರ್ಗದ ಜನರಿಗೂ ಸಾಮಾಜಿಕ ನ್ಯಾಯ ಕೊಡಿಸುವ ಕಾರ್ಯ ಮಾಡುತ್ತಿದ್ದೇನೆ.
– ಅನಂತಮೂರ್ತಿ, ಅಧ್ಯಕ್ಷ ಗ್ರಾಪಂ ಜಡ್ಕಲ್.

ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ವಾಸುದೇವ ಮುದೂರು ಮಾತನಾಡಿ, ಜಡ್ಕಲ್ ವಾಟೆಗುಂಡಿ ಕೊರಗ ಕಾಲನಿ ಸಮಸ್ಯೆ ವಿಚಾರ ಮಾಧ್ಯಮದಲ್ಲಿ ಬಂದ ಬಳಿಕ ಜಡ್ಕಲ್ ಗ್ರಾ.ಪಂ.ಗೆ ಕೊರಗ ಸಮುದಾಯದ ಸಮೀಕ್ಷಾ ವರದಿ ಕೇಳಲು ಬಂದಾಗ ಅಧ್ಯಕ್ಷರು ವೈಯಕ್ತಿಕವಾಗಿ ಮತ್ತು ಸಂಘಟನೆಯನ್ನು ಸಾರ್ವಜನಿಕವಾಗಿ ನಿಂಧಿಸಿ ಮಾತನಾಡಿದ್ದಾರೆ. ದೇಶದ ಪ್ರಧಾನಿಗಳೇ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಮುಖ್ಯವಾಹಿನಿಗೆ ಬರಬೇಕು ಎನ್ನುವಾಗ ಗ್ರಾ.ಪಂ ಅಧ್ಯಕ್ಷರೊಬ್ಬರು ದಲಿತರು ಹಾಕುವ ಅಂಗಿಯ ಬಗ್ಗೆಯೂ ಮಾತನಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು ಸ್ಥಳಿಯಾಡಳಿತ ಮಾಡಬೇಕಾದ ಕೆಲಸಗಳನ್ನು ಮಾಡದಿದ್ದಾಗ ಅವರನ್ನು ಕೇಳುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದರು.

ದಲಿತ ಸಂಘರ್ಷ ಸಮಿತಿಯವರು ಸಮಾಜದಲ್ಲಿ ತುಳಿತಕ್ಕೊಳಗಾದ, ಅನ್ಯಾಯಕ್ಕೊಳಗಾದವರ ಪರವಾಗಿ ಧ್ವನಿಯಾಗುತ್ತಿದ್ದಾರೆ. ಸರಕಾರಿ ಅಧಿಕಾರಿಗಳು ಹಾಗೂ ವ್ಯವಸ್ಥೆಯಲ್ಲಿರುವವರ ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಸ್ಥಳಿಯ ವಾಟೆಗುಂಡಿ ಸಮಸ್ಯೆ ಬಗ್ಗೆ ಮಾಧ್ಯಮಗಳು ಸಮಾಜಮುಖಿಯಾಗಿ ಬೆಳಕು ಚೆಲ್ಲಿದ್ದು ಅದನ್ನು ಗ್ರಾ.ಪಂ ವ್ಯವಸ್ಥೆಗೆ ತಳುಕು ಹಾಕಿಸಿಕೊಂಡು ತಪ್ಪು ಅರ್ಥೈಸಿ ವೈಯಕ್ತಿಕ ನಿಂದನೆ ಮಾಡಿದ್ದರೆ ಅದು ಸರಿಯಲ್ಲ. ತಪ್ಪು ಕಲ್ಪನೆಯ ಈ ವಿಚಾರವನ್ನು ಇಲ್ಲಿಯೇ ಬಿಟ್ಟು ಸಮಾಜಮುಖಿ ಚಿಂತನೆಯನ್ನು ಮುಂದುವರಿಸೋಣ ಎಂದು ಡಿವೈ‌ಎಸ್ಪಿ ಬಿ.ಪಿ. ದಿನೇಶ್ ಕುಮಾರ್ ಹೇಳಿದರು.

ಕೊರಗ ನಿವಾಸಕ್ಕೆ ಡಿವೈ‌ಎಸ್ಪಿ ಭೇಟಿ..
ಜಡ್ಕಲ್ ಗ್ರಾಮ ವಾಟೆಗುಂಡಿ ಮೂಲನಿವಾಸಿ ಕುಟುಂಬದಲ್ಲಿ ಮೂತ್ರಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಬಾಲಕಿಗೆ ಉತ್ತಮ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮಧ್ಯದಲ್ಲಿ ಆಸ್ಪತ್ರೆಯಿಂದ ಮನೆಗೆ ಮರಳಿದ ಬಾಲಕಿ ತಂದೆ ತಾಯಿ ಮನ ಒಲಿಸುವ ಹಿನ್ನೆಲೆಯಲ್ಲಿ ಡಿವೈ‌ಎಸ್ಪಿ ಬಿ.ಪಿ.ದಿನೇಶ್ ಕುಮಾರ್ ಭೇಟಿ ನೀಡಿ ಮಾತುಕತೆ ನಡೆಸಿದರು.

ಆಸ್ಪತ್ರೆಯಿಂದ ಮನೆಗೆ ಮರಳಿದ ಬಾಲಕಿ ಪೋಷಕರ ಮನ ಒಲಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್ ಸೂಚನೆಯಂತೆ ಡಿವೈ‌ಎಸ್ಪಿ ಭೇಟಿ ನೀಡಿ, ಮನ ಒಲಿಸುವ ಪ್ರಯತ್ನ ಮಾಡಿದ್ದು, ಪೋಷಕರು ಸೃಜನಾತ್ಮಕ ಸ್ಪಂದನ ಸಿಕ್ಕಿಲ್ಲ. ಮತ್ತೊಮ್ಮೆ ಕುಟುಂಬಿಕರ ಭೇಟಿ ಮಾಡಿ ಮನ ಒಲಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಡಿವೈ‌ಎಸ್ಪಿ ತಿಳಿಸಿದ್ದಾರೆ.

ಗ್ರಾಮ ಪಂಚಾಯಿತಿ ಅಧ್ಯಕ್ಷ ಅನಂತಮೂರ್ತಿ ಕೂಡಾ ಬಾಲಕಿ ಪೋಷಕರ ಮನ ಒಲಿಸುವ ಪ್ರಯತ್ನ ಮಾಡಿದರೂ ಫಲ ಕೊಟ್ಟಿಲ್ಲ. ಬಾಲಕಿಗೆ ಮೂತ್ರಪಿಂಡ ಆಪಾಯದಲ್ಲಿದ್ದು, ಚಿಕಿತ್ಸೆ ಕೊಡಿಸದಿದ್ದರೆ ಮುಂದೆ ಮೂತ್ರ ಪಿಂಡದ ವಿಫಲತೆ ಆಗುವ ಸಂಭವಿದೆ ಎಂದು ವೈದ್ಯಾಧಿಕಾರಿಗಳ ತಿಳಿಸಿದ್ದು, ಹೇಗಾದರೂ ಬಾಲಕಿಗೆ ಚಿಕಿತ್ಸೆ ನೀಡುವ ಕೆಲಸ ಆಗಬೇಕು ಎನ್ನುವ ನಿಟ್ಟಿನಲ್ಲಿ ಡಿವೈ‌ಎಸ್ಪಿ ಜೊತೆ ಭೇಟಿ ನೀಡಿದ್ದು, ಪೋಷಕರು ಮನಸ್ಸು ಬದಲಿಸಲು ಆಗಿಲ್ಲ. ಮತ್ತೊಮ್ಮೆ ಅವರ ಮನಸ್ಸು ಪರಿವರ್ತನೆ ಮಾಡಿ ಚಿಕಿತ್ಸೆ ಕೊಡಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Comments are closed.