ಕರಾವಳಿ

ತಾನು ಮದುವೆಯಾಗಿದ್ದ ಯುವತಿಯನ್ನು ಮದುವೆ ನಿರಾಕರಿಸಿದ್ದಕ್ಕೆ ಹತ್ಯೆ ಮಾಡಿದೆ ಎಂದ ಅಂಜನಾ ಕೊಲೆ ಆರೋಪಿ

Pinterest LinkedIn Tumblr

ಆರೋಪಿ ಸಂದೀಪ್‌ ರಾಠೋಡ್‌                             –                         ಹತ್ಯೆಗೀಡಾದ ಅಂಜನಾ ವಸಿಷ್ಠ

ಮಂಗಳೂರು, ಜೂನ್.10: ನಗರದ ಅತ್ತಾವರದ ಬಾಡಿಗೆ ಕೋಣೆಯೊಂದರಲ್ಲಿ ಜೂನ್ 7ರಂದು ನಡೆದ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿ ಹತ್ಯೆಗೆ ಆಕೆ ಮದುವೆ ನಿರಾಕರಿಸಿದ್ದೇ ಕಾರಣ ಎಂದು ಆರೋಪಿ ತಿಳಿಸಿದ್ದಾನೆ. ಮಾತ್ರವಲ್ಲದೇ ತಾನು ಅಕೆಯನ್ನು ಈ ಮೊದಲೇ ಮದುವೆಯಾಗಿರುವುದಾಗಿಯೂ ಆರೋಪಿ ಪೊಲೀಸರ ವಿಚಾರಣೆ ಸಂದರ್ಭ ತಿಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ದಿನಾಂಕ:07-06-2019 ರಂದು ಮಂಗಳೂರು ನಗರದ ಅತ್ತಾವರದ 6 ನೇ ಅಡ್ಡರಸ್ತೆಯಲ್ಲಿರುವ ಶ್ರೀಮತಿ ಫ್ಲೋಸಿ ಪಾಯಿಸ್‌ ಎಂಬವರ ಪಾಯಿಸ್‌ ಕಾಟೇಜ್‌ ಎಂಬ ಮನೆಯ 1 ನೇಮಹಡಿಯಲ್ಲಿರುವ ರೂಮ್‌ ನಂಬ್ರ 1ನೇದರಲ್ಲಿ ವಿಜಯಪೂರದ ಸಿಂದಗಿ ತಾಲೂಕಿನ ಬೆನಕೊಟ್ಗಿ ತಾಂಡಾದ ಸಂದೀಪ್‌ ರಾಠೋಡ್‌ @ ಸಂದೀಪ್‌ ಬಾಳಪ್ಪ ರಾಠೋಡ್‌  (24) ಎಂಬಾತನು ಚಿಕ್ಕಮಗಳೂರು ಜಿಲ್ಲೆ ತರಿಕೇರೆಯ ದಾಸರ ಬೀದಿ, ಅಂಜನಾ ವಸಿಷ್ಠ ಎಂಬ ಯುವತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಮಂಗಳೂರು ಪಾಂಡೇಶ್ವರ ಠಾಣೆಯ ಪೊಲೀಸರು ಈ ಕೊಲೆ ಕೃತ್ಯವನ್ನು ನಡೆಸಿದ ಆರೋಪಿ ಸಂದೀಪ್‌ ರಾಠೋಡ್‌ @ ಸಂದೀಪ್‌ ಬಾಳಪ್ಪ ರಾಠೋಡ್‌ ಎಂಬಾತನನ್ನು ದಿನಾಂಕ 08-06-2019 ರಂದು ವಿಜಯಪುರ ಜಿಲ್ಲೆಯ ಸಿಂದಗಿ ಎಂಬಲ್ಲಿರುವ ಸಂಗಮ್‌ ಡಿಲೇಕ್ಸ್‌ ವಸತಿ ಗೃಹದಲ್ಲಿ ಸಂಜೆ ದಸ್ತಗಿರಿ ಮಾಡಿ ಬಂಧಿಸಿ, ಈ ದಿನ ದಿನಾಂಕ 09-06-2019 ರಂದು ಬೆಳಿಗ್ಗೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆಗೆ ಕರೆ ತಂದು ವಿಚಾರಣೆ ನಡೆಸಿರುತ್ತಾರೆ. ಈ ವೇಳೆ ಆರೋಪಿ ತಾನು ಅಂಜನಾ ವಸಿಷ್ಠಳ ಕುತ್ತಿಗೆಗೆ ಕೇಬಲ್ ವಯರ್ ನಿಂದ ಬಿಗಿದು ಕೊಲೆಗೈದಿರುವುದಾಗಿ ತಿಳಿಸಿದ್ದಾನೆ.

ಆರೋಪಿ ಸಂದೀಪ್‌ ರಾಠೋಡ್‌ ಮತ್ತು ಅಂಜನಾ ವಸಿಷ್ಠ ಎಂಬ ಯುವತಿ ಸುಮಾರು ಒಂದು ವರ್ಷದಿಂದ ಫೇಸ್‌ ಬುಕ್‌ ಮುಖಾಂತರ ಪರಿಚಿತರಾಗಿದ್ದು, ಆಗಾಗ ಬೇರೆ ಬೇರೆ ಕಡೆಗಳಲ್ಲಿ ಭೇಟಿ ಮಾಡಿ ಒಂದು ದಿನ ಕದ್ರಿ ದೇವಸ್ಥಾನದಲ್ಲಿ ಮದುವೆಯಾಗಿ ಅಂಜನಾಳಿಗೆ ತಾಳಿ ಕಟ್ಟಿದ್ದು, ಈ ಬಗ್ಗೆ ಯಾರಿಗೂ ತಿಳಿಯದೇ ಇದ್ದು, ನಂತರ ಇಬ್ಬರು ಲಾಡ್ಜ್‌ ಗಳಲ್ಲಿ ರೂಮ್‌ ಮಾಡಿ ಉಳಕೊಂಡು ದೈಹಿಕ ಸಂಪರ್ಕ ಹೊಂದಿದ್ದು, ನಂತರ ಅಂಜನಾಳ ಮನೆಯಲ್ಲಿ ಅವರ ಮನೆಯವರು ಅಂಜನಾಳಿಗೆ ಮದುವೆ ಮಾಡಲು ಹುಡುಗನನ್ನು ನಿಶ್ಚಯಿಸಿದ್ದು, ಅದಕ್ಕೆ ಅಂಜನಾಳು ಕೂಡಾ ಒಪ್ಪಿಕೊಂಡಿರುತ್ತಾಳೆ. ಈ ವಿಚಾರವನ್ನು ಅಂಜನಾಳು ಸಂದೀಪ್‌ ರಾಠೋಡ್‌ ನಿಗೆ ಹೇಳಿದಾಗ, ಸಂದೀಪ್‌ ರಾಠೋಡ್‌ ನು ಅಂಜನಾಳಿಗೆ ಮಂಗಳೂರಿನ ರೂಮಿಗೆ ಬರುವಂತೆ ತಿಳಿಸಿರುತ್ತಾನೆ.

ದಿನಾಂಕ 07-06-2019 ರಂದು ಅಂಜನಾಳು ಬೆಳಿಗ್ಗೆ ರೂಮಿಗೆ ಬಂದಿದ್ದು, ಆ ಸಮಯ ಸಂದೀಪ್‌ ರಾಠೋಡ್‌ ಹಾಗೂ ಅಂಜನಾಳ ಮಧ್ಯೆ ಜಗಳವಾಗಿ ಅಂಜನಾಳು ಸಂದೀಪ್‌ ರಾಠೋಡ್‌ ನನ್ನು ನಿರಾಕರಿಸಿದ್ದು, ಅದೇ ಧ್ವೇಷದಿಂದ ಆರೋಪಿ ಸಂದೀಪ್‌ ರಾಠೋಡ್‌ ನು ಬಾಡಿಗೆ ರೂಮಿನೊಳಗಡೆ ಗೆ ಅಂಜನಾಳನ್ನು ಎಳೆದು ರೂಮಿನಲ್ಲಿದ್ದ ಮಂಚದ ಮೇಲೆ ದೂಡಿ ಹಾಕಿ ಅಂಜನಾಳ ಕುತ್ತಿಗೆಯನ್ನು ಮಂಚದ ತಲೆಯ ಭಾಗದ ಕಬ್ಬಿಣದ ಸರಳಿನ ಎಡೆಗೆ ಸಿಲುಕಿಸಿ, ಅಲ್ಲಿಯೇ ಪಕ್ಕದಲ್ಲಿ ಗೋಡೆಗೆ ಅಳವಡಿಸಿದ್ದ ಟಿ.ವಿ ಕೇಬಲ್‌ ನ್ನು ಅಂಜನಾಳ ಕುತ್ತಿಗೆಗೆ ಸುತ್ತಿ ಗಟ್ಟಿಯಾಗಿ ಬಿಗಿದು ಕೊಲೆ ಮಾಡಿರುವುದಾಗಿ ಒಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ರಾಥೋಡ್ ತನ್ನ ಗೆಳತಿ ಅಂಜನಾಳನ್ನು ಶುಕ್ರವಾರ ಕೊಲೆ ಮಾಡಿದ ಬಳಿಕ ಆಕೆಯ ಮೊಬೈಲ್, ರೂಮ್ ಕೀ ಜತೆಗೆ ನಾಪತ್ತೆಯಾಗಿದ್ದ. ಪೊಲೀಸರು ಈ ಆಧಾರದಲ್ಲಿ ಶೋಧ ನಡೆಸಿದಾಗ ಶಿರಸಿ ಕಡೆಯವರೆಗಿನ ಮೊಬೈಲ್ ನೆಟ್‌ವರ್ಕ್ ತೋರಿಸಿತ್ತು. ಹಾಗಾಗಿ ಆರೋಪಿ ಸಿಂಧಗಿ ಕಡೆಗೆ ಹೋಗಿರುವುದು ಖಚಿತವಾಗಿತ್ತು. ತಕ್ಷಣ ಸಿಂಧಗಿ ಪೊಲೀಸರ ಸಹಾಯದೊಂದಿಗೆ ಆರೋಪಿಯನ್ನು ಬಂಧಿಸಲಾಗಿದೆ. ಘಟನೆ ನಡೆದ 24 ಗಂಟೆಯೊಳಗೆ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿದ್ದ ಸಂದೀಪ್ ರಾಥೋಡ್ ಇದೀಗ ಯುವತಿಯ ಕೊಲೆ ಆರೋಪ ಎದುರಿಸಿ ಜೈಲು ಪಾಲಾಗಿದ್ದಾನೆ.

ಅಂಜನಾ ಬಾಳಿಗೆ ಪ್ರೀತಿಯೇ ಮುಳ್ಳಾಯಿತು:

ಅಂಜನಾ ಉಜಿರೆಯಲ್ಲಿ ಎಂಎಸ್ಸಿ ಮಾಡುತ್ತಿದ್ದಾಗ ಬಿಜಾಪುರದ ಸಂದೀಪ್ ರಾಥೋಡ್ ಜತೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ಈ ಪರಿಚಯ ಬಾಂಧವ್ಯಕ್ಕೆ ತಿರುಗಿ ಒಬ್ಬರಿಗೊಬ್ಬರು ಪ್ರೀತಿಸತೊಡಗಿದರು ಎನ್ನಲಾಗಿದೆ. ಈ ಪ್ರೀತಿಯೇ ಅಂಜನಾ ಬಾಳಿಗೆ ಮುಳ್ಳಾಯಿತು.

ಉಜಿರೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಮೇ 31ಕ್ಕೆ ಎಂಎಸ್ಸಿ ಪರೀಕ್ಷೆ ಮುಗಿಸಿದ್ದ ಅಂಜನಾಳಿಗೆ ಖಾಸಗಿ ಸಂಸ್ಥೆಯಲ್ಲಿ ಕೆಲಸ ಸಿಕ್ಕಿತ್ತು. ಆದರೆ ಅದಕ್ಕೆ ಸೇರದೆ ಅಂಜನಾ ಮತ್ತು ರಾಥೋಡ್ ಹೆಚ್ಚುವರಿ ಶಿಕ್ಷಣದ ತರಬೇತಿಗಾಗಿ ಮಂಗಳೂರಿಗೆ ಬರುವ ನಿರ್ಧಾರ ಮಾಡಿದರು ಎನ್ನಲಾಗಿದೆ.

ಅದರಂತೆ ಅಂಜನಾ ಬ್ಯಾಂಕಿಂಗ್ ತರಬೇತಿಗಾಗಿ ಮಂಗಳೂರಿಗೆ ಆಗಮಿಸಿದರೆ ಸಂದೀಪ್ ರಾಥೋಡ್ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯಲು ಬಂದಿದ್ದ. ಪರಸ್ಪರ ಪ್ರೀತಿಸುತ್ತಿದ್ದ ಇವರು ಮಂಗಳೂರಿಗೆ ಬರುವ ಮುಂಚೆನೇ ಒಂದೇ ರೂಮಿನಲ್ಲಿ ವಾಸಿಸುವ ನಿರ್ಧಾರಕ್ಕೆ ಬಂದಿದ್ದರು ಎನ್ನಲಾಗಿದೆ. ಜೂ. 2ರಂದು ಈ ಮನೆಯಲ್ಲಿ ಬಾಡಿಗೆ ಕೋಣೆ ಹಿಡಿದಿದ್ದರು. ಅಲ್ಲದೆ ತಾವು ಪತಿ ಮತ್ತು ಪತ್ನಿ ಎಂದು ಪರಿಚಯಿಸಿಕೊಂಡು ಮನೆ ಮಾಡಿಕೊಂಡಿದ್ದಾರೆ.

ಶುಕ್ರವಾರ ಕೊಲೆಯಾದ ಅಂಜನಾ ಬಳಿ ಆಧಾರ್ ಕಾರ್ಡ್ ಪತ್ತೆಯಾಗಿದ್ದು, ಅದರಲ್ಲಿ ಅವರ ಮನೆಯ ವಿಳಾಸ ಸಿಕ್ಕಿದೆ. ಆಧಾರ್ ಕಾರ್ಡ್ ನಂಬರ್ ಆಧಾರದಲ್ಲಿ ಶೋಧ ನಡೆಸಿದಾಗ ಅಂಜನಾ ತಾಯಿಯ ಮೊಬೈಲ್ ನಂಬರ್ ಸಿಕ್ಕಿದೆ. ಆ ಮೊಬೈಲ್‌ಗೆ ಕರೆ ಮಾಡಿ ವಿವರ ಕೇಳಿದಾಗ ‘ನಾವು ಮಂಗಳೂರಿನಲ್ಲಿದ್ದೇವೆ. ಅಂಜನಾ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಆಕೆ ನಾಪತ್ತೆಯಾದ ಕಾರಣ ಆಕೆಯ ತಂದೆ ಬರ್ಕೆ ಠಾಣೆಗೆ ದೂರು ನೀಡಲು ಹೋಗಿದ್ದಾರೆ’ ಎಂದು ಹೇಳಿದ್ದರು.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯ ಮಂಜುನಾಥ ವೈ.ಎನ್.ಎಂಬವರ ಏಕೈಕ ಪುತ್ರಿಯಾಗಿರುವ ಅಂಜನಾ ವಶಿಷ್ಟ (22) ಗುರುವಾರ ಸಂಜೆ ಮಂಗಳೂರಿಗೆ ಬಂದಿದ್ದಳು. ಈಕೆಯನ್ನು ಮಂಜುನಾಥ್ ಸ್ವತಃ ಚಿಕ್ಕಮಗಳೂರಿನಲ್ಲಿ ಬಸ್ ಹತ್ತಿಸಿದ್ದರು ಎನ್ನಲಾಗಿದೆ. ಮಂಗಳೂರಿಗೆ ಬಂದು ಮುಟ್ಟಿರುವ ಬಗ್ಗೆ ಈಕೆ ತನ್ನ ತಂದೆಯ ಗಮನಕ್ಕೆ ತಂದಿದ್ದಳಲ್ಲದೆ ಮಂಗಳೂರಿನಲ್ಲಿ ಬಾಡಿಗೆ ಕೋಣೆ ಹಿಡಿದು ವಾಸವಾಗುವುದಾಗಿ ತಿಳಿಸಿದ್ದಳು.

ಅದರಂತೆ ಮಂಜುನಾಥ್ ಮಗಳು ಅಂಜನಾಳ ಬಟ್ಟೆಬರೆಯೊಂದಿಗೆ ಶುಕ್ರವಾರ ಬೆಳಗ್ಗೆ ಮಂಗಳೂರಿಗೆ ಬಂದಿದ್ದರು. ಆದರೆ ಮಗಳ ಮೊಬೈಲ್ ನೆಟ್‌ವರ್ಕ್ ತೋರಿಸದ ಕಾರಣ ಆತಂಕಗೊಂಡು ಬರ್ಕೆ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಈ ಮಧ್ಯೆ ಶುಕ್ರವಾರ ಸಂಜೆ ಅತ್ತಾವರದ ಮನೆಯೊಂದರ ಬಾಡಿಗೆ ಕೋಣೆಯಲ್ಲಿ ಯುವತಿಯ ಮೃತದೇಹ ಕಂಡು ಬಂದ ಮೇರೆಗೆ ಮತ್ತು ಅಲ್ಲಿ ಲಭ್ಯವಾದ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಅಂಜನಾಳ ಕೊಲೆಯಾಗಿರುವುದನ್ನು ಪೊಲೀಸರು ದೃಢಪಡಿಸಿದರು. ಅಲ್ಲದೆ ಅಂಜನಾಳ ತಂದೆ ಮಂಜುನಾಥ್ ಕೂಡ ಮಗಳ ಮೃತದೇಹವನ್ನು ಗುರುತಿಸಿದ್ದರು.

ಪೂರ್ವಾಪರ ವಿಚಾರಿಸದೆ ಮನೆ ನೀಡಬೇಡಿ: ಡಿಸಿಪಿ

ಇದೇ ವೇಳೆ ಯಾರೂ ಕೂಡಾ ಪೂರ್ವಾಪರ ವಿಚಾರಣೆ ಮಾಡದೆ ಮತ್ತು ಸೂಕ್ತ ಗುರುತು ದಾಖಲೆಪತ್ರ ಪಡೆಯದೆ ಮನೆಯ ಕೋಣೆ ಯನ್ನು ಬಾಡಿಗೆಗೆ ಅಥವಾ ಲೀಸ್‌ಗೆ ನೀಡಬಾರದು ಎಂದು ಡಿಸಿಪಿ ಹನುಮಂತರಾಯ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

Comments are closed.