ಕರಾವಳಿ

ಕಂಚಿನಕಂಠದ ಬಡಗುತಿಟ್ಟು ಯಕ್ಷಗಾನದ ಪ್ರಸಿದ್ಧ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ನಿಧನ

Pinterest LinkedIn Tumblr

ಕುಂದಾಪುರ: ಬಡಗುತಿಟ್ಟಿನ ಯಕ್ಷಗಾನದ ಕೊಂಡಿಯೊಂದು ಕಳಚಿದೆ. ಭಾಗವತ ಶ್ರೇಷ್ಠ ಸುಬ್ರಹ್ಮಣ್ಯ ಧಾರೇಶ್ವರ (67) ಅವರು ಎ.25 ರಂದು ಬೆಳಗ್ಗೆ 4.30 ಕ್ಕೆ ಬೆಂಗಳೂರಿನಲ್ಲಿ ಪುತ್ರನ ಮನೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ. ಅವರು ಯಕ್ಷಗಾನ ಕ್ಷೇತ್ರದಲ್ಲಿ 46 ವರ್ಷಗಳ ಸೇವೆ ಸಲ್ಲಿಸಿದ್ದರು.

ಪೆರ್ಡೂರು ಮೇಳವೊಂದರಲ್ಲೇ 28 ವರ್ಷ ಪ್ರಧಾನ ಭಾಗವತರಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಅಮೃತೇಶ್ವರಿ ಮೇಳದಲ್ಲಿ ತಮ್ಮ ತಿರುಗಾಟ ಆರಂಭಿಸಿದ್ದರು. ಹಿರೇಮಹಾಲಿಂಗೇಶ್ವರ ಮೇಳ ಹಾಗೂ ಶಿರಸಿ ಮೇಳದಲ್ಲೂ ಭಾಗವತರಾಗಿ ಬಳಿಕ ಪೆರ್ಡೂರು ಮೇಳದಲ್ಲಿ ಪ್ರಸಿದ್ಧಿಯಾಗಿದ್ದರು.

ಬಳಿಕ ಎಲೆಕ್ಟ್ರಿಕ್ ಅಂಗಡಿ ಹಾಕಿ ಯಕ್ಷಗಾನ ಮೇಳಕ್ಕೆ ಲೈಟಿಂಗ್ ವ್ಯವಸ್ಥೆಗೆ ಸೇರಿದ್ದರು. ಪ್ರಾಚಾರ್ಯ ನಾರಣಪ್ಪ ಉಪ್ಪೂರರ ಮೂಲಕ ರಂಗಸ್ಥಳದ ಮೇಲೇರಿದರು. ಹೊಸ ಹೊಸ ಪ್ರಸಂಗಗಳನ್ನು ಹೊಸತನದಲ್ಲಿ ನಿರ್ದೇಶಿಸುವ ಮೂಲಕ ರಂಗಮಾಂತ್ರಿಕ ಎನಿಸಿದ್ದರು.ಕೀರ್ತಿಯ ಉತ್ತುಂಗದಲ್ಲಿ ಇದ್ದಾಗಲೇ ಮೇಳ ತಿರುಗಾಟ ನಿಲ್ಲಿಸಿದ್ದರು.

ಮೇಳ ಬಿಟ್ಟು 10 ವರ್ಷದ ಬಳಿಕ ಮತ್ತೆ ಅದೇ ಮೇಳಕ್ಕೆ ಅನಿವಾರ್ಯ ಸಂದರ್ಭದಲ್ಲಿ ಸೇರಿ ಒಂದು ವರ್ಷದ ತಿರುಗಾಟ ಮಾಡಿದ್ದರು. ಧಾರೇಶ್ವರ ಯಕ್ಷ ಬಳಗ ಮೂಲಕ ಯಕ್ಷಗಾನ ಕಾರ್ಯಕ್ರಮ ಸಂಯೋಜಿಸುತ್ತಿದ್ದರು.

ಯಕ್ಷಗಾನ ರಂಗ ಕಂಡ ಪ್ರಯೋಗಶೀಲ ಭಾಗವತರಾಗಿದ್ದ ಅವರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Comments are closed.