ಕರಾವಳಿ

ಕ್ರಿಕೆಟ್ ಬೆಟ್ಟಿಂಗ್ ವಿರುದ್ಧ ಪೊಲೀಸರ ವಿಶೇಷ ಕಾರ್ಯಾಚರಣೆ : ಮಂಗಳೂರಿನಲ್ಲಿ ಓರ್ವ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು : ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಶುರುವಾಗುತ್ತಿದ್ದಂತೆ ಬೆಟ್ಟಿಂಗ್ ವಿರುದ್ಧ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಖಡಕ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯೋರ್ವನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಕೋಣಾಜೆ ನಿವಾಸಿ ವಿಶ್ವಾಸ್ (40) ಬಂಧಿತ ಆರೋಪಿ. ನಗರದಲ್ಲಿ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾತ್ರವಲ್ಲದೆ ಮಟ್ಕಾ ಚಟುವಟಿಕೆಯಲ್ಲಿ ತೊಡಗಿದ್ದ ಈತನನ್ನು ನಗರ ಅಪರಾಧ ಪತ್ತೆದಳದ ಪೊಲೀಸರು ಬಂಧಿಸಿ, ಆರೋಪಿಯಿಂದ 5,200 ರೂ. ನಗದು, ಮೊಬೈಲ್, ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿ ಗೋವಾದಲ್ಲಿದ್ದು ಪ್ಲೇ 365 ಆಯಪ್ ಮೂಲಕ ಬೆಟ್ಟಿಂಗ್ ದಂಧೆ ಮಾಡುತ್ತಿದ್ದ. ಈತನಿಗೆ ಸಹೋದರ ಡೆನ್ಸಿಲ್ ಸಹಾಯ ಮಾಡುತ್ತಿದ್ದು, ಆತನ ಮುಖಾಂತರ ನಗರದಲ್ಲಿ ಬೆಟ್ಟಿಂಗ್ ವ್ಯವಹಾರ ಮಾಡುತ್ತಿದ್ದ. ಡೆನ್ಸಿಲ್ ಯುವಕರನ್ನು ಬೆಟ್ಟಿಂಗ್ ದಂಧೆಗೆ ಪ್ರೋತ್ಸಾಹಿಸುತ್ತಿದ್ದು, ಆನ್‌ಲೈನ್ ವ್ಯವಹಾರದಲ್ಲೇ ಹಣದ ವಹಿವಾಟು ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿಯನ್ನು ನೋಡಲು ಬಂದಿದ್ದ: ಆರೋಪಿ ವಿಶ್ವಾಸ್ ಬೆಟ್ಟಿಂಗ್ ದಂಧೆ ನಡೆಸುತ್ತಿರುವ ಬಗ್ಗೆ ಮಾಹಿತಿ ಪಡೆದು ಪೊಲೀಸರು, ಈತನ ಬಂಧನಕ್ಕೆ ಹಲವು ಸಮಯದ ಹಿಂದೆಯೇ ಬಲೆ ಬೀಸಿದ್ದರು. ಆದರೆ ಈತ ಗೋವಾದಲ್ಲಿ ತಲೆಮರೆಸಿಕೊಂಡ ಕಾರಣ ಸಾಧ್ಯವಾಗಿರಲಿಲ್ಲ. ಗುರುವಾರ ಈತ ತಾಯಿಯನ್ನು ನೋಡಲು ನಗರಕ್ಕೆ ಬಂದ ಬಗ್ಗೆ ಖಚಿತ ಮಾಹಿತಿ ಪಡೆದ ನಗರ ಪೊಲೀಸರು ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನೊಬ್ಬ ಆರೋಪಿ ಡೆನ್ಸಿಲ್ ಮಹಾರಾಷ್ಟ್ರಕ್ಕೆ ತೆರಳಿದ್ದು, ಆತನ ಬಂಧನಕ್ಕೂ ಶೋಧ ಕಾರ್ಯ ನಡೆಸುತ್ತಿದ್ದಾರೆ.

ವಿಶ್ವಾಸ್ ನಗರದಲ್ಲಿ ಬೆಟ್ಟಿಂಗ್ ಮಾತ್ರವಲ್ಲದೆ, ಮಟ್ಕಾ ದಂಧೆಯನ್ನು ನಡೆಸುತ್ತಿದ್ದ. ಈತ ವಿಶ್ವಕಪ್ ವೇಳೆಯೂ ಬೆಟ್ಟಿಂಗ್ ದಂಧೆ ನಡೆಸಲು ಸಂಚು ರೂಪಿಸಿದ್ದ ಎನ್ನುವುದು ವಿಚಾರಣೆ ವೇಳೆ ತಿಳಿದು ಬಂದಿದೆ.

ನಗರ ಅಪರಾಧ ಪತ್ತೆದಳದ ಪೊಲೀಸರು ಆರೋಪಿಯನ್ನು ಕದ್ರಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈತನ ಮೇಲೆ ಪಣಂಬೂರು ಠಾಣೆಯಲ್ಲೂ ನಾಲ್ಕು ಪ್ರಕರಣಗಳಿವೆ.

ವಿಶ್ವಕಪ್ ಕ್ರಿಕೆಟ್ ಬೆಟ್ಟಿಂಗ್ : ಕಮಿಷನರ್ ಖಡಕ್ ಎಚ್ಚರಿಕೆ

ವಿಶ್ವಕಪ್ ಕ್ರಿಕೆಟ್ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದಲ್ಲಿ ಬೆಟ್ಟಿಂಗ್ ದಂಧೆಯ ಚಟುವಟಿಕೆಗಳೂ ಆರಂಭಗೊಳ್ಳುತ್ತವೆ. ಆದ್ದರಿಂದ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಶುರುವಾಗುತ್ತಿದ್ದಂತೆ ಬೆಟ್ಟಿಂಗ್ ನಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ವಿಶ್ವಕಪ್ ಕ್ರಿಕೆಟ್ ಆರಂಭದಲ್ಲಿಯೇ ಮಂಗಳೂರು ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್ ಅವರು ಖಡಕ್ ಎಚ್ಚರಿಕೆ ನೀಡಿದ್ದರು.

ಈ ಹಿಂದೆ ಐಪಿಎಲ್ ಪಂದ್ಯಾವಳಿಗಳು ಆರಂಭವಾಗುವ ಮೊದಲೇ ಸಂದೀಪ್ ಪಾಟೀಲ್ ಬೆಟ್ಟಿಂಗ್ ದಂಧೆ ವಿರುದ್ಧ ಟ್ವೀಟ್ ‌ಮೂಲಕ ಎಚ್ಚರಿಸಿದ್ದರು. ಆ ಬಳಿಕ ಪೊಲೀಸ್ ತಂಡಗಳನ್ನು ಕಾರ್ಯಾಚರಣೆಗಿಳಿಸಿ 18 ಪ್ರಕರಣಗಳನ್ನು ಪತ್ತೆ ಹಚ್ಚಿ ಬೆಟ್ಟಿಂಗ್ ದಂಧೆಕೋರರಿಗೆ ಭಯ ಹುಟ್ಟಿಸಿದ್ದರು. ಈಗ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗಳು ಆರಂಭವಾಗಿರುವುದರಿಂದ ಬೆಟ್ಟಿಂಗ್ ಹಾವಳಿ ತಡೆಗೆ ಮಂಗಳೂರು ಪೊಲೀಸರು ಭಾರೀ ಕಟ್ಟೆಚ್ಚರ ವಹಿಸಿದ್ದಾರೆ. ಪೊಲೀಸ್ ಕಮಿಷನರ್ ಮತ್ತೆ ಎಚ್ಚರಿಕೆ ನೀಡಿದ್ದಾರೆ.

Comments are closed.