ಕರಾವಳಿ

ಮೋದಿಯವರ ಗಾಂಭೀರ್ಯ ಮೆಚ್ಚುಗೆಗೆ ಪಾತ್ರವಾಗಿದೆ: ಪೇಜಾವರ ಶ್ರೀ

Pinterest LinkedIn Tumblr

ಉಡುಪಿ: ನಾಥುರಾಮ್ ಗೋಡ್ಸೆಯನ್ನು ರಾಷ್ಟ್ರಭಕ್ತ ಎನ್ನುವಂತೆ ಬಿಂಬಿಸುತ್ತಿರುವುದು ರಾಷ್ಟ್ರಕ್ಕೆ ದೊಡ್ಡ ಅವಮಾನ. ಈ ಹೇಳಿಕೆ ಕೊಟ್ಟವರ ಬಗ್ಗೆ ನನಗೆ ಅಸಮಾಧಾನವಿದೆ. ಮಹಾತ್ಮಗಾಂಧಿ ರಾಷ್ಟ್ರಭಕ್ತರು, ರಾಷ್ಟ್ರಪುತ್ರರೆಂದು ಪೇಜಾವರ ಮಠದ ಹಿರಿಯ ಯತಿ ಶ್ರೀವಿಶ್ವೇಶ ತೀರ್ಥ ಶ್ರೀಪಾದರು ತಿಳಿಸಿದ್ದಾರೆ.

ದಿಲ್ಲಿಯಲ್ಲಿ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮವನ್ನು ಮುಗಿಸಿ ಶುಕ್ರವಾರ ಉಡುಪಿಗೆ ಆಗಮಿಸಿದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ಮೋದಿ ಅವರ ಪ್ರಮಾಣ ವಚನ ಕಾರ್ಯಕ್ರಮ ಶಿಸ್ತುಬದ್ಧವಾಗಿ ನಡೆದಿದೆ. ಕಳೆದ ಬಾರಿ ಹೊಸ ಅನುಭವ, ಇದು (2 ನೇ ಬಾರಿ) ಹೆಚ್ಚಿನ ಉತ್ಸಾಹ ಕೊಟ್ಟಿದೆ. ಜನರಲ್ಲಿ ಮೋದಿಯ ಬಗ್ಗೆ ಅಭಿಮಾನ ತುಂಬಿ ತುಳುಕುತ್ತಿತ್ತು. ಆ ಗಾಂಭೀರ್ಯ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ತಿಳಿಸಿದರು.

2 ನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಅಭಿವೃದ್ಧಿ ಕಾರ್ಯಗಳ ನಿರೀಕ್ಷೆಯಲ್ಲಿದ್ದೇವೆ. ದೇಶದ ರಕ್ಷಣೆ, ಕಾಶ್ಮೀರದ ಸಮಸ್ಯೆ ಪರಿಹಾರ ಕಾಣಬೇಕು. ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು. ಕೃಷಿಗೆ ಮಾರಕವಾಗದ ಉದ್ಯಮ ಸ್ಥಾಪನೆಯಾಗಬೇಕೆಂದರು. ಕೇಂದ್ರದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತವಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕು. ಇದಕ್ಕೆ ಕಾಂಗ್ರೆಸ್‍ನ ರಾಹುಲ್ ಗಾಂಧಿ ಕೂಡಾ ಸಹಕಾರ ಕೊಡಬೇಕು. ಮಂದಿರ ನಿರ್ಮಾಣದಿಂದ ಯಾವುದೇ ಪಕ್ಷ, ಧರ್ಮಕ್ಕೂ ಹಾನಿಯಾಗಲ್ಲ ಎಂದರು.

ಭಾರತ ಗಾಂಧೀಜಿ ಅವರಿಂದ ಪ್ರಾರಂಭ ಆಗಿರುವುದ್ದಲ್ಲ. ವೇದವ್ಯಾಸರು ಎಲ್ಲಾ ವಾಙ್ಮಯವನ್ನು ಆವಿರ್ಭಾವ ಮಾಡಿದವರು. ವೇದ ವ್ಯಾಸರಿಂದ ನಮ್ಮ ಸಂಸ್ಕೃತಿ, ಪರಂಪರೆ ರಾಷ್ಟ್ರೀಯತ್ವ ಎಲ್ಲವೂ ಜಾಗೃತವಾಗಿದೆ. ಆದ್ದರಿಂದ ವೇದವ್ಯಾಸರೇ ರಾಷ್ಟ್ರಪಿತರು ಎಂಬೂದು ನನ್ನ ಅಭಿಪ್ರಾಯ. ಆದರೆ ಮಹಾತ್ಮಾಗಾಂಧಿ ಬಗ್ಗೆ ನನಗೆ ಅಪಾರ ಗೌರವವಿದೆ ಎಂದರು.

ರಾಜಕೀಯ ಪ್ರಚಾರ ವೇಳೆಯೂ ಅಭಿವೃದ್ಧಿ ಕಡೆಗೆ ಪಕ್ಷಗಳು ಗಮನವೇ ಕೊಡಲಿಲ್ಲ. ಮುಂದಾದರೂ ಅಭಿವೃದ್ಧಿ ಬಗ್ಗೆ ಮಾತನಾಡುವಂತಾಗಬೇಕು. ಹಿಂದೂ ವಿಚಾರ ತೆಗೆದರೆ ಬಹುಸಂಖ್ಯಾತರು ಜಾಗೃತರಾಗುತ್ತಾರೆ. ಪ್ರತ್ಯೇಕ ಹೋರಾಟ ಮಾಡಿದರೆ ವಿಪಕ್ಷಗಳು ಹೆಚ್ಚಿನ ಸೀಟು ಗೆಲ್ಲುತ್ತಿದ್ದವು ಎಂದು ಅಭಿಪ್ರಾಯಪಟ್ಟರು.

Comments are closed.