ಉಡುಪಿ: ಸುವರ್ಣ ತ್ರಿಭುಜ ಬೋಟ್ ನಾಪತ್ತೆಗೆ ಸಂಬಂಧಿಸಿದಂತೆ ತಜ್ಞರ ಮಾಹಿತಿ ಪಡೆಯಲಾಗುವುದು. ನೌಕಾ ಪಡೆ ಹಾಗೂ ಸರಕಾರದ ಸಹಕಾರದಿಂದ ಬೋಟನ್ನು ಮೇಲಕ್ಕೆತ್ತುವ ಬಗ್ಗೆಯೂ ಚಿಂತನೆ ನಡೆದಿದೆ ಎಂದು ಎಸ್‌ಪಿ ನಿಶಾ ಜೇಮ್ಸ್ ತಿಳಿಸಿದರು.
ಎಸ್‌ಪಿ ಕಚೇರಿಯಲ್ಲಿ ನಡೆದ ಫೋನ್‌ಇನ್ ಕಾರ್ಯ ಕ್ರಮದಲ್ಲಿ ಅವರು ಈ ಬಗ್ಗೆ ತಿಳಿಸಿದರು.
ಈಗಾಗಲೇ ಗೋವಾ, ಮಹಾರಾಷ್ಟ್ರ, ಕೇರಳ ಭಾಗಗಳಿಗೆ ಉಡುಪಿ ಪೊಲೀಸರ ತಂಡವನ್ನು ಕಳುಹಿಸಲಾಗಿದ್ದು ಅಲ್ಲಿನ ಠಾಣಾ ವ್ಯಾಪ್ತಿಯಲ್ಲಿ ಇದಕ್ಕೆ ಸಂಬಂಧಿಸಿದ ಯಾವುದಾದರೂ ಪ್ರಕರಣ ದಾಖಲಾಗಿದೆಯೇ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗಿದೆ. ಸದ್ಯ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಇನ್ನು ತಜ್ಞರ ಮಾಹಿತಿ ಪಡೆದು ಸಮಾಲೋಚಿಸಲಾಗುವುದು ಎಂದರು.
ಮಹಾರಾಷ್ಟ್ರದ ಮಾಲ್ವಾನ್ ಕಡಲತೀರದಿಂದ 30 ನಾಟಿಕಲ್ ಮೈಲ್ ದೂರದಲ್ಲಿ 60 ಮೀ. ಆಳದಲ್ಲಿ ಮೇ 1ರಂದು ಪತ್ತೆಯಾದ ಸುವರ್ಣ ತ್ರಿಭುಜ ದೋಣಿ ಪ್ರಕರಣಕ್ಕೆ ಸಂಬಂಧಿಸಿ ತಜ್ಞರ ಸಲಹೆ ಕೇಳಲಾಗಿದೆ. ಸುವರ್ಣ ತ್ರಿಭುಜ ದೋಣಿಗೆ ಡಿಕ್ಕಿಯಾಗಿರಬಹುದಾದ ನೌಕಾ ಪಡೆಯ ಐಎನ್‌ಎಸ್ ಕೊಚ್ಚಿ ಅಥವಾ ವಾಣಿಜ್ಯ ಹಡಗಿನ ವೇಗ, ದಿಕ್ಕು, ಅಪಘಾತ ಹೇಗೆ ಸಂಭವಿಸಿರಬಹುದು ಎನ್ನುವ ಕುರಿತು ತಜ್ಞರು ಸ್ಪಷ್ಟ ಚಿತ್ರಣ ನೀಡಲಿದ್ದಾರೆ.
ಏಳು ಮೀನುಗಾರರ ನಾಪತ್ತೆ ಕುರಿತಂತೆ ಗೋವಾ, ಮಹಾರಾಷ್ಟ್ರದ ಕಡೆಗೆ ತೆರಳಿದ ಪೊಲೀಸ್ ತಂಡ ರತ್ನಗಿರಿಯಿಂದ ಕೊಚ್ಚಿ ತನಕ ತೆರಳಿ ಮಾಹಿತಿ ಕಲೆ ಹಾಕಿದ್ದು ಯಾವುದೇ ಸುಳಿವು ದೊರೆತಿಲ್ಲ ಎಂದರು.