
ಮಂಗಳೂರು, ಎಪ್ರಿಲ್.18 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಈಗಾಗಲೇ ಬೆಳಗ್ಗೆ ಏಳು ಗಂಟೆಗೆ ಆರಂಭಗೊಂಡಿದ್ದು, ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಬಹಳ ಉತ್ಸಾಹದಿಂದ ಮತದಾನ ಕೇಂದ್ರದತ್ತ ತೆರಳಿ ಮತದಾನದಲ್ಲಿ ತೊಡಗಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲಹಂತದ ಮತದಾನ ಇಂದು ಆರಂಭಗೊಂಡಿದೆ ಮೊದಲಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದ್ದು,.ಇದರಲ್ಲಿ ದ.ಕ.ಲೋಕಸಭಾ ಕ್ಷೇತ್ರವೂ ಒಂದು. ದ.ಕ.ಜಿಲ್ಲೆಯಲ್ಲಿ ಗುರುವಾರ ಮುಂಜಾನೆಯಿಂದಲೇ ಮತದಾನ ಪ್ರಕ್ರಿಯೆ ಬಿರುಸಿನಿಂದ ನಡೆಯುತ್ತಿದೆ.
ದ.ಕ.ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬೆಳಗ್ಗೆ 9ಗಂಟೆ ವೇಳೆಗೆ ಶೇ.14. ರಷ್ಟು ಮತದಾನವಾಗಿದ್ದು, ಬಳಿಕ 11 ಗಂಟೆಗೆ ಶೇಖಡ 32.34ರಷ್ಟು ಮತದಾನವಾಗಿದೆ. ಇದರಲ್ಲಿ ಬಂಟ್ವಾಳ, ಬೆಳ್ತಂಗಡಿ ಮತ್ತು ಸುಳ್ಯದಲ್ಲಿ ಅತೀ ಹೆಚ್ಚು ಮಂದಿ ಮತದಾನವಾಗಿದೆ.
11 ಗಂಟೆಯ ವೇಳೆಗೆ ಬೆಳ್ತಂಗಡಿಯಲ್ಲಿ ಶೇಖಡ 33.80 ಮೂಡಬಿದ್ರೆ ಶೇಖಡ 31.65 ಬಂಟ್ವಾಳ ಶೇಖಡ 33.89 ಪುತ್ತೂರು ಶೇಖಡ 33.16 ಸುಳ್ಯ ಶೇಖಡ 33.65 ಮಂಗಳೂರು ಉತ್ತರ ( ಸುರತ್ಕಲ್) ಶೇಖಡ31.91 ಮಂಗಳೂರು ದಕ್ಷಿಣ ಶೇಖಡ 29.63 ಹಾಗೂ ಮಂಗಳೂರು (ಉಳ್ಳಾಲ) ಶೇಖಡ 31.33 ಮತದಾನವಾಗಿದೆ.


ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಈ ಬಾರಿ ವಿವಿಧ ಪಕ್ಷಗಳಿಂದ ಒಟ್ಟು 13 ಮಂದಿ ಅಭ್ಯರ್ಥಿಗಳು ಲೋಕಸಮರದ ಅಖಾಡ ದಲ್ಲಿದ್ದಾರೆ. ಕಾಂಗ್ರೆಸ್ನಿಂದ ಮಿಥುನ್ ರೈ ಅದೃಷ್ಟ ಪರೀಕ್ಷೆಗೆ ಅಣಿಯಾಗಿ ನಿಂತಿದ್ದರೆ, ಬಿಜೆಪಿಯಿಂದ ಹಾಲಿ ಸಂಸದರೂ ಆಗಿರುವ ನಳಿನ್ ಕುಮಾರ್ ಕಟೀಲ್ ಕಣದಲ್ಲಿದ್ದಾರೆ.
ಇನ್ನುಳಿದಂತೆ ಬಿಎಸ್ಪಿಯಿಂದ ಎಸ್. ಸತೀಶ್ ಸಾಲ್ಯಾನ್, ಎಸ್ಡಿಪಿಐನಿಂದ ಮೊಹಮ್ಮದ್ ಇಲಿಯಾಸ್, ಉಪೇಂದ್ರರ ಉತ್ತಮ ಪ್ರಜಾಕೀಯ ಪಾರ್ಟಿಯಿಂದ ವಿಜಯ್ ಶ್ರೀನಿವಾಸ್, ಹಿಂದೂಸ್ತಾನ್ ಜನತಾ ಪಾರ್ಟಿಯಿಂದ ಸುದೀಪ್ ಕುಮಾರ್ ಪೂಜಾರಿ ಮತ್ತು ಪಕ್ಷೇತರರಾಗಿ ಅಬ್ದುಲ್ ಹಮೀದ್, ಅಲೆಗ್ಸಾಂಡರ್, ದೀಪಕ್, ರಾಜೇಶ್ ಕುವೆಲ್ಲೊ, ಮೊಹಮ್ಮದ್ ಖಾಲಿದ್, ಮ್ಯಾಕ್ಸಿನ್ ಪಿಂಟು, ವೆಂಕಟೇಶ್ ಬೆಂಡೆ ಹಾಗು ಸುರೇಶ್ ಪೂಜಾರಿ ಅಖಾಡದಲ್ಲಿದ್ದಾರೆ.
ಆದರೆ, ಕ್ಷೇತ್ರದಲ್ಲಿ ಕಾಂಗ್ರೆಸ್ v/s ಬಿಜೆಪಿ ನಡುವೆ ನೇರ ಹಣಾಹಣಿ ಇದ್ದು, ಕೈ ಪಕ್ಷದ ಮಿಥುನ್ ರೈ ಮತ್ತು ಕಮಲ ಪಾರ್ಟಿಯ ನಳಿನ್ ಕುಮಾರ್ ಕಟೀಲ್ ಮಧ್ಯೆ ಲೋಕಸಮರದ ಯುದ್ಧ ಜೋರಾಗಿದೆ. ಎಲ್ಲ ಅಭ್ಯರ್ಥಿಗಳ ರಾಜಕೀಯ ಭವಿಷ್ಯವನ್ನು ಇಂದು ಕರಾವಳಿ ಜಿಲ್ಲೆಯ ಮತದಾರರು ಬರೆಯಲು ಸಜ್ಜಾಗಿದ್ದಾರೆ.
Comments are closed.