ಕರಾವಳಿ

ನಾಳೆ ಲೋಕಸಭಾ ಚುನಾವಣೆ ; ದ.ಕ.ಜಿಲ್ಲೆಯಲ್ಲಿ ವ್ಯಾಪಕ ಸಿದ್ಧತೆ – ಭದ್ರತೆ : ನಳಿನ್, ಮಿಥುನ್ ಯಾರಾಗುತ್ತಾರೆ ಮುಂದಿನ ಎಂಪಿ : ಮತದಾರರ ಕೈಯಲ್ಲಿದೆ ಭವಿಷ್ಯ

Pinterest LinkedIn Tumblr

ಮಂಗಳೂರು, ಎಪ್ರಿಲ್.17 : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ರಣರಂಗ ಸಜ್ಜುಗೊಂಡಿದೆ. ಚುನಾವಣಾ ಹಿನ್ನೆಲೆಯಲ್ಲಿ ಎಲ್ಲಾ ಪೂರ್ವಭಾವಿ ಸಿದ್ಧತೆಗಳು ಬಿರುಸಿನಿಂದ ನಡೆದಿದೆ. ಅಭ್ಯರ್ಥಿಗಳ ಹಣೆಬರಹ ಬರೆಯ ಬಲ್ಲ ಮತಯಂತ್ರಗಳು ಈಗಾಗಲೇ ಮತಗಟ್ಟೆಗಳನ್ನು ತಲುಪಿದೆ. ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ಚುನಾವಣಾ ಸಿಬ್ಬಂದಿ ಇವಿಎಂ, ವಿವಿಪ್ಯಾಟ್‌ಗಳೊಂದಿಗೆ ಮತಗಟ್ಟೆಗಳಿಗೆ ತೆರಳಿದ್ದಾರೆ.

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಮೊದಲಹಂತದ ಮತದಾನ ನಾಳೆ ನಡೆಯಲಿದೆ. ಮೊದಲಹಂತದಲ್ಲಿ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣೆ ನಡೆಯಲಿದೆ.ಇದರಲ್ಲಿ ದ.ಕ.ಲೋಕಸಭಾ ಕ್ಷೇತ್ರವೂ ಒಂದು. ದ.ಕ.ಜಿಲ್ಲೆಯಲ್ಲಿ ಮತಸಮರಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತದಾನದ ಹಿನ್ನೆಲೆಯಲ್ಲಿ ನಡೆಯುವಂತಹ ಮಾಸ್ಟರಿಂಗ್ ಕಾರ್ಯವನ್ನು ಮುಗಿಸಿ ಚುನಾವಣಾ ನಿಯೋಜಿತ ಸಿಬ್ಬಂದಿಗಳು ಈಗಾಗಲೇ ಮತಯಂತ್ರಗಳ ಜೊತೆಗೆ ಮತಗಟ್ಟೆಗೆ ತೆರಳಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಾಳೆ ಮತದಾನ ನಡೆಯಲಿದ್ದು, ಚುನಾವಣೆ ಹಿನ್ನೆಲೆಯಲ್ಲಿ ಸಿದ್ಧತೆಗಳು ಬಿರುಸಿನಿಂದ ನಡೆಯುತ್ತಿವೆ. ಕ್ಷೇತ್ರದಲ್ಲಿ 1,861 ಮತಗಟ್ಟೆಗಳಿದ್ದು, ಈ ಎಲ್ಲಾ ಮತಗಟ್ಟೆಗಳಿಗೆ ತೆರಳಲು ಚುನಾವಣಾ ಸಿಬ್ಬಂದಿ ಮತ್ತು ಪೊಲೀಸರು ಸಜ್ಜಾಗಿದ್ದಾರೆ. ಇಂದು ಹಲವೆಡೆ ನಡೆದ ಮಸ್ಟರಿಂಗ್ ಕೇಂದ್ರಕ್ಕೆ ಬಂದ ಚುನಾವಣಾ ಅಧಿಕಾರಿಗಳು ಮತ್ತು ಪೊಲೀಸ್ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆಗಳ ಮಾಹಿತಿಗಳನ್ನು ಪಡೆದು ಮತಗಟ್ಟೆ ಕೇಂದ್ರಗಳಿಗೆ ತೆರಳಿದ್ದಾರೆ.

ಚುನಾವಣಾ ಸಿಬ್ಬಂದಿ ಮಸ್ಟರಿಂಗ್ ಕೇಂದ್ರದಲ್ಲಿ ಮತಯಂತ್ರ, ವಿವಿಪ್ಯಾಟ್, ಕಂಟ್ರೋಲಿಂಗ್ ಸಿಸ್ಟಮ್ ಮತ್ತು ದಾಖಲೆಗಳನ್ನು ಪಡೆದುಕೊಂಡು ಮತಗಟ್ಟೆಗಳಿಗೆ ತೆರಳಿದ್ದಾರೆ. ಚುನಾವಣಾ ಕರ್ತವ್ಯಕ್ಕೆ 8,920 ಚುನಾವಣಾ ಸಿಬ್ಬಂದಿ ನಿಯೋಜಿತರಾಗಿದ್ದು, ಇವರು ಇಂದೇ ಮತಗಟ್ಟೆಗೆ ತೆರಳಿ ನಾಳಿನ ಮತದಾನದ ಕರ್ತವ್ಯ ನಿರ್ವಹಿಸಲಿದ್ದಾರೆ.

13 ಮಂದಿ ಅಭ್ಯರ್ಥಿಗಳ ಭವಿಷ್ಯ ನಾಳೆ ನಿರ್ಧಾರ :

ಲೋಕಸಭಾ ಚುನಾವಣೆ ಎಂಬುದು ಮತದಾರರ ಪಾಲಿಗೆ ಸಂಭ್ರಮದ ಪ್ರಜಾಪ್ರಭುತ್ವದ ಹಬ್ಬ. ದಕ್ಷಿಣ ಕನ್ನಡ ಜಿಲ್ಲೆಯ ಮತದಾರ ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಮತ ಚಲಾಯಿಸಲು ಸಿದ್ಧರಾಗಿದ್ದು, ಇದೇ ವೇಳೆ ಅಭ್ಯರ್ಥಿಗಳ ಮನದಲ್ಲಿ ತಳಮಳ ಆರಂಭವಾಗಿದೆ. ದಕ್ಷಿಣ ಕನ್ನಡ ಲೋಕಸಭಾ ಚುನಾವಣೆಯಲ್ಲಿ ಮೇಲ್ನೋಟಕ್ಕೆ ಕಾಂಗ್ರೆಸ್- ಬಿಜೆಪಿ ನಡುವಿನ ಹೋರಾಟ ಕಂಡು ಬರುತ್ತಿದೆ. ದ.ಕ. ಜಿಲ್ಲೆಯಲ್ಲಿ 13 ಮಂದಿ ಅಭ್ಯರ್ಥಿಗಳು ಕಣದಲ್ಲಿದ್ದು, ಅವರ ಭವಿಷ್ಯವನ್ನು ಮತದಾರರು ಎ. 18ರಂದು ನಿರ್ಧರಿಸಲಿದ್ದಾರೆ.

ನೇರ ಹಣಾಹಣಿಯಲ್ಲಿರುವ ಕಾಂಗ್ರೆಸ್, ಬಿಜೆಪಿಯ ಜತೆಗೆ ಎಸ್‌ಡಿಪಿಐ, ಬಿಎಸ್‌ಪಿ, ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ, ಹಿಂದೂಸ್ಥಾನ ಜನತಾ ಪಾರ್ಟಿಯಿಂದಲೂ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದು, 7 ಮಂದಿ ಪಕ್ಷೇತರರಾಗಿ ರಾಜಕೀಯ ಭವಿಷ್ಯ ಬರೆಸಿಕೊಳ್ಳಲು ಚುನಾವಣಾ ಕಣದಲ್ಲಿದ್ದಾರೆ.

ದ.ಕ. ಜಿಲ್ಲೆಯಲ್ಲಿ ಒಟ್ಟು 17,24,460 ಮತದಾರರಿದ್ದು, ಈ ಪೈಕಿ 8,45,308 ಪುರುಷ ಮತದಾರರು ಮತ್ತು 8,79,050 ಮಹಿಳಾ ಮತದಾರರಾಗಿದ್ದಾರೆ. ಇತರೆ ಮತದಾರರು 102 ಮಂದಿ ಇದ್ದಾರೆ. ಎಂಟು ವಿಧಾನಸಭಾ ಕ್ಷೇತ್ರಗಳ 1861 ಮತಗಟ್ಟೆಗಳಲ್ಲಿ ಮತದಾನ ಬೆಳಗ್ಗೆ 7 ಗಂಟೆಗೆ ಆರಂಭವಾಗಲಿದೆ.

ಜಿಲ್ಲಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ :

ಶಾಂತಿಯುತ ಮತದಾನಕ್ಕೆ ಹೆಚ್ಚಿನ ಬಂದೋಬಸ್ತ್ ಕಾರ್ಯಗಳನ್ನು ನಡೆಸಲಾಗಿದೆ. ಯಾವುದೇ ಗೊಂದಲಗಳಿಲ್ಲದೆ ಚುನಾವಣೆ ನಡೆಯಲಿದೆ. ಚುನಾವಣೆಗೆ ತಾಲೂಕು ಆಡಳಿತ ಸಂಪೂರ್ಣವಾಗಿ ಸಜ್ಜಾಗಿದೆ. ಯಾವುದೇ ಬೂತ್‍ಗಳಲ್ಲಿ ಗೊಂದಲಗಳ ನಡೆಯದಂತೆ ಹೆಚ್ಚಿನ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಹೆಚ್ಚಿನ ನಿಗಾ ವಹಿಸಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಚುನಾವಣಾ ಪ್ರಕ್ರಿಯೆಗಾಗಿ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 1800 ಭದ್ರತಾ ಸಿಬ್ಬಂದಿ ಹಾಗೂ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ 1500 ಪೊಲೀಸರು ಕಾರ್ಯ ನಿರ್ವಹಿಸಲಿದ್ದಾರೆ.

Comments are closed.