ಕರಾವಳಿ

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದ ಮೋದಿಯವರ ಹೆಸರಲ್ಲಿ ಮತ ಕೇಳಿದರೆ ಏನು ತಪ್ಪು : ಮಾಳವಿಕಾ ಅವಿನಾಶ್ ಪ್ರಶ್ನೆ

Pinterest LinkedIn Tumblr

ಮಂಗಳೂರು, ಎಪ್ರಿಲ್.11: ಭ್ರಷ್ಟಾಚಾರ ನಿರ್ಮೂಲನೆ, ಆಂತರಿಕ ಭದ್ರತೆ, ರೈತರು ಕಾರ್ಮಿಕರಿಗೆ ಪೂರಕವಾದ ಹಲವಾರು ಯೋಜನೆ ಗಳನ್ನು ಜಾರಿಗೆ ತರುವ ಮೂಲಕ ನರೇಂದ್ರ ಮೋದಿಯವರು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ದಿದ್ದಾರೆ. ಹಾಗಾಗಿ ದಕ್ಷಿಣ ಕನ್ನಡ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರವಾಗಿ ಮೋದಿ ಹೆಸರಿನಲ್ಲಿ ಜನರ ಬಳಿಗೆ ಹೋಗುತ್ತಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಬಿಜೆಪಿ ತಾರಾ ಪ್ರಚಾರಕಿ ಮಾಳವಿಕಾ ಅವಿನಾಶ್ ಪ್ರಶ್ನಿಸಿದ್ದಾರೆ.

ದ.ಕ.ಜಿಲ್ಲಾ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ನಳಿನ್ ಕುಮಾರ್ ಕಟೀಲು ಪರ ಪ್ರಚಾರಕ್ಕೆ ಜಿಲ್ಲೆಗೆ ಆಗಮಿಸಿರುವ ಅವರು ಗುರುವಾರ ಬಂಟ್ಸ್ ಹಾಸ್ಟೇಲ್ ಸಮೀಪದ ಪಕ್ಷದ ಚುನಾವಣಾ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಐದು ವರ್ಷಗಳ ಅವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಮಾಡಿರುವ ಸಾಧನೆಗಳನ್ನು ಹೇಳಿಕೊಂಡು ಅವರ ಹೆಸರಿನಲ್ಲಿ ಮತ ಕೇಳಲು ನಮಗೆ ಯಾವುದೇ ಸಂಕೋಚ ಇಲ್ಲ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಅವರ ಸಾಧನೆಯ ಜತೆಗೆ ನಾವು ಸ್ಥಳೀಯ ಅಭ್ಯರ್ಥಿಗಳ ರಿಪೋರ್ಟ್ ಕಾರ್ಡ್‌ಗಳನ್ನು ತಂದಿದ್ದೇವೆ. ನಳಿನ್ ಕುಮಾರ್ ಅವರ ಸಾಧನೆಯ ರಿಪೋರ್ಟ್ ಕಾರ್ಡ್ ಕೂಡಾ ಇದೆ ಎಂದು ಹೇಳಿದರು.

ಬಿಜೆಪಿಯು ಕರ್ನಾಟಕದಲ್ಲಿ 36 ಜನ ತಾರಾ ಪ್ರಚಾರಕರನ್ನು ನೇಮಕ ಮಾಡಿದ್ದು, ಅವರಲ್ಲಿ ತಾನೂ ಒಬ್ಬಾಕೆ. ಈಗಾಗಲೇ 12 ಜಿಲ್ಲೆಗಳಲ್ಲಿ ಪ್ರವಾಸ ಮಾಡಿದ್ದು, ಕೆಲ ದಿನಗಳ ಹಿಂದೆ ಸುರತ್ಕಲ್,ಬಂಟ್ವಾಳ ಸೇರಿದಂತೆ ಕೆಲವು ಕಡೆಗಳಲ್ಲಿ ಪ್ರಬುದ್ಧರ ಸಮಾವೇಶಗಳಲ್ಲಿ ಭಾಗವಹಿಸಿದ್ದೇನೆ. ಇದೀಗ ಸಂಪೂರ್ಣ ಪ್ರಚಾರ ಕಾರ್ಯದಲ್ಲಿ ಭಾಗವಹಿಸುತ್ತಿರುವುದಾಗಿ ಮಾಳವಿಕ ಹೇಳಿದರು.

ಮುಖ್ಯಮಂತ್ರಿಗಳಿಂದ ಮಲತಾಯಿ ಧೋರಣೆ:

ಮುಖ್ಯಮಂತ್ರಿ ಕುಮಾರ ಸ್ವಾಮಿಯವರು ಉಳಾಯಿಬೆಟ್ಟು ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಗಳನ್ನು ಖುಲಾಸಿಗೊಳಿಸಿ, ಹಿಂದೂಗಳ ಮೇಲೆ ಮಲತಾಯಿ ಧೋರಣೆ ಅನುಸರಿಸಿದ್ದಾರೆ. ಈ ಬಗ್ಗೆ ಅವರು ಉತ್ತರಿಸಬೇಕು. ಬಾಲಾಕೋಟ್ ದಾಳಿ ಸಂದರ್ಭ ಬಿಜೆಪಿ ಸಂಭ್ರಮಾಚರಣೆ ಮಾಡಿತ್ತು. ಆದರೆ ಸಂಭ್ರಮಾಚರಣೆಯಿಂದ ಕೆಲವರಿಗೆ ನೋವಾಗುತ್ತದೆ ಎಂದು ಹೇಳಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ದೇಶಭಕ್ತರಿಗೆ ಹಾಡಿದ ಅವಮಾನ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನಪರಿಷತ್‌ನ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ಮಹಿಳಾ ಘಟಕದ ಪ್ರಮುಖರಾದ ಪೂಜಾ ಪೈ, ಪ್ರಭಾ ಮಾಲಿನಿ, ಧನಲಕ್ಷ್ಮಿ ಗಟ್ಟಿ ಮುಂತಾದವರು ಉಪಸ್ಥಿತರಿದ್ದರು.

Comments are closed.