ಕರಾವಳಿ

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ – ಜಿಡಿಪಿ ಅಭಿವೃದ್ಧಿ ಸಂಶಯಾಸ್ಪದವಾಗಿದೆ ; ದಿನೇಶ್ ಗುಂಡೂರಾವ್ ಆರೋಪ

Pinterest LinkedIn Tumblr

ಮಂಗಳೂರು, ಎಪ್ರಿಲ್.02: ಚೌಕೀದಾರ್ ಎಂದು ಹೇಳಿಕೊಳ್ಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಬಡವರ ಪಾಲಿನ ಚೌಕೀದಾರ್ ಅಲ್ಲ. ಬದಲಾಗಿ ದೇಶದ ಶ್ರೀಮಂತರಿಗೆ ರಕ್ಷಣೆ ನೀಡುವ ಚೌಕೀದಾರ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.

ಮಂಗಳವಾರ ಮಂಗಳೂರಿನ ಕಾಂಗ್ರೆಸ್ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಮಹಾನ್ ಸುಳ್ಳುಗಾರ. ದೇಶದ ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿ ಇದುವರೆಗೆ ಒಂದು ರೂಪಾಯಿಯನ್ನು ಹಾಕಿಲ್ಲ.ಬದಲಾಗಿ ಆರ್ಥಿಕ ಕ್ಷೇತ್ರ ಕುಸಿಯುತ್ತಿದೆ. ನಿರುದ್ಯೋಗ ಸಮಸ್ಯೆ ಹೆಚ್ಚಳವಾಗಿದೆ. ಜಿಡಿಪಿ ಅಭಿವೃದ್ಧಿ ಸಂಶಯಾಸ್ಪದವಾಗಿದೆ. ಆದರೆ ಲಾಭ ಆಗಿದ್ದು ಮಾತ್ರ ಶ್ರೀಮಂತರಿಗೆ ಎಂದು ದೂರಿದರು.

ಐದು ವರ್ಷಗಳ ಹಿಂದೆ ದೇಶದಲ್ಲಿ ಬದಲಾವಣೆ ಬಯಸಿ ಜನತೆ ಬಿಜೆಪಿಗೆ ಅವಕಾಶ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ ಬಳಿಕ ಚುನಾವಣೆಯ ಸಂದರ್ಭ ನೀಡಿದ್ದ ಯಾವುದೇ ಈಡೇರಿಕೆಗಳನ್ನು ಮೋದಿ ನೇತೃತ್ವದ ಸರಕಾರ ಈಡೇರಿಸಿಲ್ಲ. ಆದರೆ ಐದು ವರ್ಷಗಳಲ್ಲಿ ಲೋಕಪಾಲವನ್ನು ನೇಮಕ ಮಾಡಲಾಗದ ಪ್ರಧಾನಿ ಮೋದಿಯವರು ಚುನಾವಣೆಯ ಸಂದರ್ಭದಲ್ಲಿ ನೇಮಕ ಮಾಡುವ ಮೂಲಕ ತಪ್ಪು ಎಸಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ಆರೋಪ ಮಾಡಿದರು.

ಕಾಂಗ್ರೆಸ್‌ನಿಂದ ಇಂದು ಅಧಿಕೃತವಾಗಿ ಪ್ರಣಾಳಿಕೆ ಬಿಡುಗಡೆಯಾಗಿದ್ದು, ಅವುಗಳನ್ನು ಈಡೇರಿಸಲು ನಾವು ಬದ್ಧರಾಗಿದ್ದೇವೆ ಎಂದು ಹೇಳಿದ ದಿನೇಶ್ ಗುಂಡೂರಾವ್, ನಾವು ಜನರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಹೇಳುವುದಿಲ್ಲ. ಆದರೆ ದೇಶದ ಶೇ. 20ರಷ್ಟು ಅರ್ಹ ಬಡವರಿಗೆ ಮಾಸಿಕ 6000 ರೂ.ನಂತೆ ವಾರ್ಷಿಕ 72,000 ರೂ.ಗಳನ್ನು ಹಾಕಲಿದ್ದೇವೆ. ಉದ್ಯೋಗ ಖಾತರಿಯಡಿ ದಿನಗಳನ್ನು 100ರಿಂದ 150ಕ್ಕೆ ಏರಿಕೆ ಮಾಡಲಿದ್ದೇವೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್, ಕಾಂಗ್ರೆಸ್‌ನ ದ.ಕ.ಜಿಲ್ಲಾ ಲೋಕಸಭಾ ಅಭ್ಯರ್ಥಿ ಮಿಥುನ್ ರೈ, ಮಾಜಿ ಶಾಸಕ ಜೆ.ಆರ್. ಲೋಬೋ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಕೆಪಿಸಿಸಿಯ ಪ್ರಮುಖರಾದ ತಾರನಾಥ ಕಳ್ಳಿಗೆ, ಕಣಚೂರು ಮೋನು, ಮನಪಾ ಸದಸ್ಯ ವಿನಯ್ ರಾಜ್, ಸಂತೋಷ್ ಶೆಟ್ಟಿ, ಸುನಿಲ್ ಮುಂತಾದವರು ಉಪಸ್ಥಿತರಿದ್ದರು.

Comments are closed.