ಮಂಗಳೂರು, ಮಾರ್ಚ್.19: ರಫೇಲ್ ಬಗ್ಗೆ ಎಮ್ ಎಲ್ ಸಿ ಐವನ್ ಡಿಸೋಜ ಬಿಡುಗಡೆ ಮಾಡಿರುವ ಕೈಪಿಡಿ ಸುಳ್ಳಿನ ಕಂತೆಯಾಗಿದ್ದು, ಇವರ ಆರೋಪದಲ್ಲಿ ಹುರುಳಿಲ್ಲ ಎಂದು ದ.ಕ.ಜಿಲ್ಲಾ ಬಿಜೆಪಿ ವಕ್ತಾರ ಜಿತೇಂದ್ರ ಕೊಟ್ಟಾರಿ ಹೇಳಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆಯ ಕಾಂಗ್ರೆಸ್ ನಾಯಕರು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಎದುರಿಸಲು ಸೂಕ್ತ ಅಸ್ತ್ರವಿಲ್ಲದೆ ಪರದಾಡುತ್ತಿದ್ದಾರೆ. ಅದಕ್ಕೆ ಕಾಂಗ್ರೆಸ್ ನಾಯಕರು ರಫೇಲ್ ಬಗ್ಗೆ ಸತ್ಯಾಂಶ ಗೊತ್ತಿದ್ದರೂ ಕೂಡ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಮತ್ತೆ ಟಿಕೆಟ್ ನೀಡಿದರೆ ಪಕ್ಷದ ಕಚೇರಿಯ ಮುಂದೆ ಆತ್ಮಾಹುತಿ ಮಾಡುವುದಾಗಿ ಪಕ್ಷದ ಕಾರ್ಯಕರ್ತರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿತೇಂದ್ರ ಕೊಟ್ಟಾರಿ, ಜಿಲ್ಲೆಯ ಹಾಲಿ ಸಂಸದರ ವಿರುದ್ಧ ಆರೋಪ ಮಾಡಲು ಏನೂ ಸಿಗದೆ ಕಾಂಗ್ರೆಸ್ಸಿಗರು ಚಡಪಡಿಸುತ್ತಿದ್ದಾರೆ. ಅದಕ್ಕೆ ಈ ರೀತಿಯ ಕೀಳು ಮಟ್ಟದ ರಜಾಕೀಯ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯಲ್ಲಿ ಹರಿದಾಡುವ ವಿಚಾರಗಳನ್ನು ನಾವು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದು ಹೇಳಿದರು.
ಮಾಜಿ ಕಾರ್ಪೊರೇಟರ್ ಪ್ರೇಮಾನಂದ ಶೆಟ್ಟಿ ಹಾಗೂ ಪಕ್ಷದ ಪ್ರಮುಖರಾದ ಸತೀಶ್ ಪ್ರಭು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Comments are closed.