ರಾಷ್ಟ್ರೀಯ

ರಸ್ತೆಯ ಮೇಲೆ ಬಿದ್ದಿದ್ದ ಬ್ಯಾಗ್ ಮರಳಿಸಿದವನಿಗೆ ಭಾರೀ ಮೊತ್ತದ ಬಹುಮಾನ

Pinterest LinkedIn Tumblr


ಸೂರತ್​: ರಸ್ತೆಯ ಮೇಲೆ ಹಣದ ಬ್ಯಾಗ್​ ಅಥವಾ ಮೊಬೈಲ್​ ಸಿಕ್ಕರೆ ಅದನ್ನು ಮಾಲೀಕರಿಗೆ ಮರಳಿಸುವವರ ಸಂಖ್ಯೆ ಕಡಿಮೆ. ಆದರೆ, ಗುಜರಾತ್​ನ ಸೇಲ್ಸ್​ಮೆನ್​ ಓರ್ವ ತನಗೆ ಸಿಕ್ಕ ಬ್ಯಾಗ್​ಅನ್ನು ಮಾಲೀಕನಿಗೆ ಮರಳಿಸಿದ್ದಾನೆ. ಇದಕ್ಕೆ ಪ್ರತಿಯಾಗಿ ಆತನಿಗೆ 2 ಲಕ್ಷ ರೂ. ಬಹುಮಾನ ಸಿಕ್ಕಿದೆ!

ದಿಲೀಪ್​ ಪೊಡ್ಡ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ಈತ ಗಾರ್ಮೆಂಟ್ಸ್​ ಒಂದರಲ್ಲಿ ಸೇಲ್ಸ್​ಮೆನ್​ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಕೆಲಸ ಮುಗಿಸಿ ಬರುವಾಗ ಅಂಗಡಿ ಎದುರು ಬ್ಯಾಗ್​ ಒಂದು ಬಿದ್ದಿತ್ತು. ಅದನ್ನು ನೋಡಿದ ದಿಲೀಪ್​ಗೆ ಕುತೂಹಲ ಹುಟ್ಟಿಕೊಂಡಿತ್ತು. ಆ ಬ್ಯಾಗ್​ಅನ್ನು ಪ್ರತಿಯೊಬ್ಬರು ನೋಡುತ್ತಾ ಸಾಗುತ್ತಿದ್ದರೇ ಹೊರತು ಅದನ್ನು ಎತ್ತಿಕೊಳ್ಳುವ ದೈರ್ಯ ಮಾಡುತ್ತಿರಲಿಲ್ಲ.

ದಿಲೀಪ್​ ಧೈರ್ಯ ಮಾಡಿ ಬ್ಯಾಗ್​ ಎತ್ತಿಕೊಂಡ. ಮನೆಗೆ ಬಂದು ಅದನ್ನು ತೆಗೆದು ನೋಡಿದಾಗ ಎರಡು ಸಾವಿರ ರೂಪಾಯಿ ನೋಟುಗಳ ಕಂತೆಯೇ ಇತ್ತು. ಬ್ಯಾಗ್​ನಲ್ಲಿದ್ದ ಹಣ ಎಣಿಸಿದಾಗ ಅದರಲ್ಲಿ 10 ಲಕ್ಷ ರೂ. ಇರುವ ವಿಚಾರ ಬೆಳಕಿಗೆ ಬಂದಿತ್ತು. ಇದನ್ನು ನೋಡಿ ದಿಲೀಪ್​ ಒಮ್ಮೆ ಆಶ್ಚರ್ತಚಿಕತನಾದ.

ಈ ಹಣವನ್ನು ಜೇಬಿಗೆ ಇಳಿಸಿಕೊಳ್ಳುವ ಬದಲು, ಈ ವಿಚಾರವನ್ನು ಗಾರ್ಮೆಂಟ್​ನ ಮಾಲೀಕನಿಗೆ ದಿಲೀಪ್​ ತಿಳಿಸಿದ. ಸಿಸಿಟಿವಿ ದೃಶ್ಯಾವಳಿಗಳನ್ನು ನೋಡಿ ಬ್ಯಾಗ್​ನ ನಿಜವಾದ ಮಾಲೀಕನನ್ನು ಪತ್ತೆ ಹಚ್ಚಲಾಯಿತು.
“ದಿಲೀಪ್​ ಅವರ ಪ್ರಾಮಾಣಿಕತೆ ಮೆಚ್ಚಿ ಬ್ಯಾಗ್​ನ ಮಾಲೀಕರು ತುಂಬಾನೇ ಖುಷಿಪಟ್ಟಿದ್ದರು. ವಜ್ರದ ವ್ಯಾಪಾರಿ ಆಗಿರುವ ಅವರು, ದಿಲೀಪ್​ಗೆ 2 ಲಕ್ಷ ರೂ. ಬಹುಮಾನ ನೀಡಿದರು,” ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.