ಕರಾವಳಿ

ಲೋಕ ಸಭಾ ಚುನಾವಣೆ ಹಿನ್ನೆಲೆ : ಶಸ್ತ್ರಾಸ್ತ್ರಗಳನ್ನು ಠೇವಣಿ ಇಡಲು ಜಿಲ್ಲಾ ದಂಡಾಧಿಕಾರಿಗಳ ಆದೇಶ

Pinterest LinkedIn Tumblr

ಮಂಗಳೂರು ಮಾರ್ಚ್ 11 : ದಿನಾಂಕ: 18-04-2019 ರಂದು 2019 ನೇ ಸಾಲಿನ ಕರ್ನಾಟಕ ಲೋಕ ಸಭಾ ಚುನಾವಣೆ ನಡೆಯಲಿದ್ದು, ಈ ಹಿನ್ನಲೆಯಲ್ಲಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಪರವಾನಿಗೆ ಹೊಂದಿರುವ ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ದಿನಾಂಕ: 18-03-2019 ರೊಳಗೆ ಠೇವಣಿ ಇರಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ಸಸಿಕಾಂತ್ ಸೆಂಥಿಲ್. ಐ.ಎ.ಎಸ್. ಇವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯ ಪ್ರಸಕ್ತ ಕಾನೂನು ಸುವ್ಯವಸ್ಥೆ ಸಾರ್ವಜನಿಕ ಶಾಂತಿ ಸುರಕ್ಷತೆಯ ಹಿತದೃಷ್ಠಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಬೆಳೆ ರಕ್ಷಣೆಗಾಗಿ ಮತ್ತು ಆತ್ಮ ರಕ್ಷಣೆಗಾಗಿ ಮಂಜೂರು ಮಾಡಲಾಗಿರುವ ಶಸ್ತ್ರಾಸ್ತ್ರ ಪರವಾನಿಗೆಗಳನ್ನು ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು ಚುನಾವಣಾ ಅವಧಿಯಲ್ಲಿ ಠೇವಣಿಯಲ್ಲಿರಿಸಲು ಆದೇಶಿಸುವುದು ಅವಶ್ಯವೆಂದು ಮನಗಂಡು ಈ ಆದೇಶವನ್ನು ಈಗಾಗಲೇ 11-03-2019 ರಂದು ಹೊರಡಿಸಲಾಗಿರುತ್ತದೆ.

ಸದ್ರಿ ಆದೇಶದಂತೆ ಆತ್ಮ ರಕ್ಷಣೆಗಾಗಿ ಮತ್ತು ಕೃಷಿ ರಕ್ಷಣೆಗಾಗಿ ಶಸ್ತ್ರಾಸ್ತ್ರ ಪರವಾನಿಗೆ ಹೊಂದಿದವರು ತಮ್ಮ ಪರವಾನಿಗೆಯಲ್ಲಿ ಹೊಂದಿರುವ ಎಲ್ಲಾ ಶಸ್ತ್ರಾಸ್ತ್ರಗಳನ್ನು (ರಿವಾಲ್ವರ್ / ಪಿಸ್ತೂಲ್/ ಎಸ್.ಬಿ.ಬಿ.ಎಲ್/ ಡಿ.ಬಿ.ಬಿ.ಎಲ್/ ಎಸ್.ಬಿ.ಎಂ.ಎಲ್/ ಡಿ.ಬಿ.ಎಂ.ಎಲ್/ ಎನ್.ಪಿ.ಬಿ ರೈಫಲ್) ಹತ್ತಿರದ ಪೊಲೀಸ್ ಠಾಣೆ ಅಥವಾ ನಮೂನೆ ನಂಬ್ರ 8 ರ ಪರವಾನಿಗೆ ಹೊಂದಿರುವ ಅಧಿಕೃತ ಕೋವಿ ಮದ್ದುಗುಂಡು ವ್ಯಾಪಾರಿಗಳಲ್ಲಿ ದಿನಾಂಕ:18-03-2019 ರ ಮೊದಲು ಠೇವಣಿ ಇಡಬೇಕು.

ಚುನಾವಣಾ ಫಲಿತಾಂಶ ಘೋಷಣೆಯಾದ ದಿನಾಂಕದಿಂದ ಒಂದು ವಾರದ ನಂತರ (ದಿನಾಂಕ :31-05-2019) ರಿಂದ ಶಸ್ತ್ರಾಸ್ತ್ರ ಠೇವಣಿ ಇಡಲಾದ ಪೊಲೀಸ್ ಠಾಣೆ / ಡೀಲರ್ ಗಳಿಂದ ಪರವಾನಿಗೆದಾರರು ಶಸ್ತ್ರಾಸ್ತ್ರಗಳನ್ನು ಮರು ಪಡೆದುಕೊಳ್ಳುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಆದೇಶ ಹೊರಡಿಸಿದ್ದಾರೆ.

Comments are closed.