ರಾಷ್ಟ್ರೀಯ

ಸಂಜೋತಾ ಎಕ್ಸ್​ಪ್ರೆಸ್ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು: ಪಾಕ್ ಮಹಿಳೆಯಿಂದ ಹೊಸ ಸಾಕ್ಷ್ಯ

Pinterest LinkedIn Tumblr


ನವದೆಹಲಿ: ಹನ್ನೆರಡು ವರ್ಷಗಳ ಹಿಂದಿನ ಸಂಜೋತಾ ಎಕ್ಸ್​ಪ್ರೆಸ್ ಬಾಂಬ್ ಸ್ಫೋಟ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ಪಾಕಿಸ್ತಾನದ ಮಹಿಳೆಯೊಬ್ಬರು ಈ ಪ್ರಕರಣದಲ್ಲಿ ಹೊಸ ಸಾಕ್ಷ್ಯ ಒದಗಿಸಲು ಮುಂದೆ ಬಂದಿದ್ದಾರೆ. ಇವತ್ತು ಈ ಪ್ರಕರಣದ ತೀರ್ಪು ಕೊಡಬೇಕಿದ್ದ ಎನ್​ಐಎ ಕೋರ್ಟ್ ಮಾರ್ಚ್ 14ರಂದು ಈ ಮಹಿಳೆಯ ಸಾಕ್ಷ್ಯಾಧಾರವನ್ನು ಪರಿಶೀಲಿಸಿ ವಿಚಾರಣೆ ನಡೆಸಲಿದೆ. ಸ್ವಾಮಿ ಅಸೀಮಾನಂದ, ಲೋಕೇಶ್ ಶರ್ಮಾ, ಕಮಲ್ ಚೌಹಾಣ್, ರಾಜೀಂದರ್ ಚೌಧರಿ ಸೇರಿದಂತೆ ಈ ಪ್ರಕರಣದಲ್ಲಿ 8 ಆರೋಪಿಗಳಿದ್ದಾರೆ.

2007ರ ಫೆ. 18ರಂದು ಪಾಕಿಸ್ತಾನಕ್ಕೆ ಹೊರಟಿದ್ದ ಸಂಜೋತಾ ಎಕ್ಸ್​ಪ್ರೆಸ್ ರೈಲಿನ 2 ಬೋಗಿಗಳಲ್ಲಿ ಸ್ಫೋಟವಾಗಿತ್ತು. ಹರಿಯಾಣದ ಪಾನಿಪತ್ ಬಳಿಯ ದಿವಾನಿ ಎಂಬ ಗ್ರಾಮದಲ್ಲಿ ಸಂಭವಿಸಿದ್ದ ಈ ದುರಂತದಲ್ಲಿ 68 ಜನರು ಬಲಿಯಾಗಿದ್ದರು. ಬೇರೆ ಬೋಗಿಗಳಲ್ಲೂ ಎರಡು ಜೀವಂತ ಸೂಟ್​ಕೇಸ್ ಬಾಂಬ್​ಗಳು ಪತ್ತೆಯಾಗಿದ್ದವು.

ಈ ಪ್ರಕರಣದಲ್ಲಿ ಎಸ್​ಐಟಿ ಆರಂಭಿಕ ತನಿಖೆ ನಡೆಸಿದ ಬಳಿಕ ಎನ್​ಐಎಗೆ ಈ ತನಿಖೆಯ ಜವಾಬ್ದಾರಿ ವಹಿಸಲಾಯಿತು. ಬಲಪಂಥೀಯ ಸಂಘಟನೆಗಳಿಗೆ ಸೇರಿದ ವ್ಯಕ್ತಿಗಳು ಈ ಕೃತ್ಯ ಎಸಗಿದ್ದು ಎನ್​ಐಎ ತನಿಖೆಯಿಂದ ತಿಳಿದುಬಂದಿತ್ತು.

ಸ್ವಾಮಿ ಅಸೀಮಾನಂದ ಅವರು ಇತರ ಬಲಪಂಥೀಯ ಕಾರ್ಯಕರ್ತರ ಜೊತೆ ಸೇರಿ ಈ ಬಾಂಬ್ ಸ್ಫೋಟ ನಡೆಸಿದ್ದಾಗಿ 2010ರಲ್ಲಿ ತಪ್ಪೊಪ್ಪಿಕೊಂಡಿದ್ದರು. ಆದರೆ, ಒತ್ತಡದಲ್ಲಿ ತಾನು ಆ ಹೇಳಿಕೆ ನೀಡಿದ್ದಾಗಿ ಹೇಳಿ ಅಸೀಮಾನಂದ ಅವರು 2016ರ ಡಿಸೆಂಬರ್​ನಲ್ಲಿ ಜಾಮೀನು ಪಡೆದು ಹೊರಬಂದಿದ್ದಾರೆ. ಪ್ರಕರಣದ ಇತರ ಕೆಲ ಆರೋಪಿಗಳು ನ್ಯಾಯಾಂಗ ಬಂಧನದಲ್ಲೇ ಇದ್ದಾರೆ.

ಈಗ ಪಾಕಿಸ್ತಾನೀ ಮಹಿಳೆಯೊಬ್ಬರು ನೀಡಲಿರುವ ಹೊಸ ಸಾಕ್ಷ್ಯದ ಬಗ್ಗೆ ಎಲ್ಲರ ಗಮನ ಬಿದ್ದಿದೆ.

Comments are closed.