ಕರಾವಳಿ

ಸಂಘಪರಿವಾರದ ಮುಖಂಡರ ಕೊಲೆಗೆ ಸಂಚು : ಗುಪ್ತಚರ ಇಲಾಖೆಯಿಂದ ಯಾವೂದೇ ಮಾಹಿತಿ ಇಲ್ಲ : ಎಸ್‌ಪಿ ಸ್ಪಷ್ಟನೆ

Pinterest LinkedIn Tumblr

ಮಂಗಳೂರು, ಜನವರಿ.12: ಆರೆಸ್ಸೆಸ್ ಮುಖಂಡರ ಕೊಲೆಗೆ ವಿದೇಶದಲ್ಲಿ ಕುಳಿತು ಸಂಚು ರೂಪಿಸುತ್ತಿರುವ ಕುರಿತು ಕೇಂದ್ರ ಗುಪ್ತಚರ ಇಲಾಖೆಯು ದ.ಕ. ಜಿಲ್ಲಾ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ರವಾನಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ.ಲಕ್ಷ್ಮೀಪ್ರಸಾದ್ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮವೊಂದರ ಜೊತೆ ಮಾತನಾಡಿದ ಅವರು, ಕಲ್ಲಡ್ಕ ಪ್ರಭಾಕರ ಭಟ್ ಅವರಿಗೆ ಈ ಮೊದಲಿನಿಂದಲೂ ಪೊಲೀಸ್ ಭದ್ರತೆ ನೀಡಲಾಗುತ್ತಿದೆ. ಭದ್ರತಾ ಸಿಬ್ಬಂದಿಯನ್ನು ಹೆಚ್ಚಿಸಿಲ್ಲ. ‘ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ಹೆಚ್ಚಿಸಲಾಗಿದೆ’ ಎನ್ನುವುದು ಸುಳ್ಳುಸುದ್ದಿ. ಎಂದಿನಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಆಗಾಗ ಅವರ ಮನೆ ಬಳಿ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಭಾಕರ ಭಟ್ ಅವರಿಗೆ ಬೆದರಿಕೆ ಇರುವ ಕುರಿತು ನಮಗೆ ಯಾವುದೇ ರೀತಿಯ ಅಧಿಕೃತ ಮಾಹಿತಿ ಈವರೆಗೂ ಬಂದಿಲ್ಲ. ಅವರು ಪೊಲೀಸರ ರಕ್ಷಣೆಯಲ್ಲಿರುವ ವ್ಯಕ್ತಿ. ಅಂತಹವರ ಭದ್ರತಾ ವ್ಯವಸ್ಥೆಯಲ್ಲಿ ಆಗಾಗ ಬದಲಾವಣೆ ಮಾಡಲಾಗುತ್ತಿದೆ. ಹೊರಗಡೆ ತೆರಳುವಾಗ ಬೆಂಗಾವಲನ್ನೂ ನೀಡಲಾಗುತ್ತದೆ. ಇದು ಸಹಜ ಪ್ರಕ್ರಿಯೆ ಎಂದು ಹೇಳಿದ್ದಾರೆ.

ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಸಾರ ;

ಕರಾವಳಿಯ ಸಂಘ‌ ಪರಿವಾರದ ಮೂವರು ಮುಖಂಡರ ವಿರುದ್ಧ ದಾಳಿಗೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ಪೊಲೀಸ್ ಗುಪ್ತಚಾರ ಇಲಾಖೆಗೆ ಲಭಿಸಿದೆ ಎಂಬ ವದಂತಿ ಗುರುವಾರದಿಂದ ಜಿಲ್ಲೆಯಾದ್ಯಂತ ಹರಡಿತ್ತು.

ಆರ್‌ಎಸ್ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್, ವಿಎಚ್ ಪಿ ಮುಖಂಡರಾದ ಶರಣ್ ಪಂಪ್ ವೆಲ್ ಹಾಗೂ ಜಗದೀಶ್ ಶೇಣವ ವಿರುದ್ಧ ಸ್ಕೆಚ್ ರೂಪಿಸಲಾಗಿದ್ದು, ಯಾವೂದೇ ಸಂದರ್ಭದಲ್ಲೂ ದಾಳಿಯಾಗುವ ಸಾಧ್ಯತೆ ಇದೆ ಎಂಬ ವದಂತಿ ಹಬ್ಬಿರುವ ಹಿನ್ನೆಲೆಯಲ್ಲಿ ಎಸ್ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ಈ ಸ್ಪಷ್ಟನೆಯನ್ನು ನೀಡಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್ ವೆಲ್ ಗೆ ಪೊಲೀಸ್ ಇಲಾಖೆಯಿಂದ ದೂರವಾಣಿ ಕರೆ ಮಾಡಲಾಗಿದ್ದು, ಜಾಗೃತೆಯಾಗಿ ಇರುವಂತೆ ಸೂಚಿಸಲಾಗಿದೆ ಎನ್ನಲಾಗಿದೆ. ಇದೇ ವೇಳೆ ಆರ್ ಎಸ್ ಎಸ್ ಮುಖಂಡ ಡಾ ಕಲ್ಲಡ್ಕ ಪ್ರಭಾಕರ್ ಭಟ್, ವಿಎಚ್ ಪಿ ಮುಖಂಡ ಜಗದೀಶ ಶೇಣವ ಅವರಿಗೂ ಕೂಡ ಎಚ್ಚರಿಕೆ ವಹಿಸುವಂತೆ ಮಂಗಳೂರು ಪೊಲೀಸರು ಸೂಚನೆ ನೀಡಿದ್ದಾರೆ ಎನ್ನುವ ಮಾಹಿತಿ ಹೆಚ್ಚಿನ ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

Comments are closed.