ಕ್ರೀಡೆ

ರೋಹಿತ್ ಏಕಾಂಗಿ ಹೋರಾಟ ವ್ಯರ್ಥ; ಭಾರತಕ್ಕೆ ಹೀನಾಯ ಸೋಲು! ಆಸೀಸ್ ಶುಭಾರಂಭ

Pinterest LinkedIn Tumblr

ಸಿಡ್ನಿ: ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮುಗ್ಗರಿಸಿದೆ.

ರೋಹಿತ್ ಅವರ ಅಮೋಘ ಶತಕ ಹಾಗೂ ಧೋನಿ ಅರ್ಧಶತಕದ ಹೊರತಾಗಿಯು ಟೀಂ ಇಂಡಿಯಾ ಸೋಲುಂಡಿದೆ. ಈ ಮೂಲಕ ಆಸ್ಟ್ರೇಲಿಯಾ ತಂಡ 34 ರನ್​ಗಳ ಗೆಲುವಿನೊಂದಿಗೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ.

ಆಸ್ಟ್ರೇಲಿಯಾ ನೀಡಿದ್ದ 289 ರನ್​ಗಳ ಸವಾಲಿನ ಮೊತ್ತ ಬೆನ್ನತ್ತಿದ ಭಾರತ 4 ರನ್ ಆಗುವ ಹೊತ್ತಿಗೆ ತನ್ನ ಪ್ರಮುಖ 3 ವಿಕೆಟ್ ಕಳೆದುಕೊಂಡಿತು. ಶಿಖರ್ ಧವನ್ ಹಾಗೂ ಅಂಬಟಿ ರಾಯುಡು ಸೊನ್ನೆ ಸುತ್ತಿದರೆ, ನಾಯಕ ವಿರಾಟ್ ಕೊಹ್ಲಿ 3 ರನ್​ಗೆ ಬ್ಯಾಟ್ ಕೆಳಗಿಟ್ಟು ಆಘಾತ ನೀಡಿದರು. ಈ ಮೂಲಕ ಭಾರತ ಆರಂಭದಲ್ಲೆ ಸೋಲಿನ ಸುಳಿಗೆ ಸಿಲುಕಿತು.

ಆದರೆ, ಟೀಂ ಇಂಡಿಯಾಕ್ಕೆ ಗೆಲುವಿನ ರುಚಿ ನೀಡಿದ್ದು ರೋಹಿತ್ ಶರ್ಮಾ ಹಾಗೂ ಎಂ ಎಸ್ ಧೋನಿ. ಎಚ್ಚರಿಕೆಯ ಆಟವಾಡಿದ ಈ ಜೋಡಿ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟರು. ಸುಮಾರು ಒಂದು ವರ್ಷದ ಬಳಿಕ ಧೋನಿ ಅರ್ಧಶತಕ ಗಳಿಸಿದರು. 4ನೇ ವಿಕೆಟ್​​ಗೆ ರೋಹಿತ್-ಧೋನಿ 137 ರನ್​ಗಳ ಕಾಣಿಕೆ ನೀಡಿದರು. ಧೋನಿ ಅರ್ಧಶತಕ ಬಾರಿಸಿ 51 ರನ್​ಗೆ ಎಲ್​ಬಿ ಬಲೆಗೆ ಸಿಲುಕಿದರು. ಈ ಮಧ್ಯೆ ಏಕದಿನ ಪಂದ್ಯಗಳಲ್ಲಿ 10,000 ರನ್ ಪೂರೈಸಿದ ಭಾರತದ ಐದನೇ ಬ್ಯಾಟ್ಸ್​ಮನ್​ ಎಂಬ ದಾಖಲೆ ಬರೆದರು.

ಇತ್ತ ತಂಡವನ್ನು ಹೇಗಾದರು ಮಾಡಿ ಗೆಲುವಿನ ದಡ ಸೇರಿಸಬೇಕೆಂದು ಪಣತೊಟ್ಟಿದ್ದ ರೋಹಿತ್ ಶರ್ಮಾ ಭರ್ಜರಿ ಆಟ ಪ್ರದರ್ಶಿಸಿದರು. ಒಂದು ಕಡೆ ವಿಕೆಟ್ ಉರುಳಿದ್ದರೆ ಇತ್ತ ಏಕಾಂಗಿ ಹೋರಾಟ ನಡೆಸಿದ ರೋಹಿತ್ ಶತಕ ಸಿಡಿಸಿ ಮಿಂಚಿದರು. ಅಂತರಾಷ್ಟ್ರೀಯ ಏಕದಿನ ಕ್ರಿಕೆಟ್​ನಲ್ಲಿ 22ನೇಸೆಂಚುರಿ ಬಾರಿಸಿದರು. ಸೆಂಚುರಿ ಬಳಿಕವೂ ರೋಹಿತ್ ಅಬ್ಬರಿಸಿದರಾದರು ಇವರಿಗೆ ಯಾವೊಬ್ಬ ಬ್ಯಾಟ್ಸ್​ಮನ್​ ಸಾತ್ ನೀಡಲಿಲ್ಲ. ದಿನೇಶ್ ಕಾರ್ತಿಕ್ 12, ರವೀಂದ್ರ ಜಡೇಜಾ 8 ರನ್​ಗೆ ನಿರ್ಗಮಿಸಿದರು. ಅಂತಿಮವಾಗಿ ರೋಹಿತ್ ಶರ್ಮಾ ಕೂಡ 129 ಎಸೆತಗಳಲ್ಲಿ 10 ಬೌಂಡರಿ ಹಾಗೂ 6 ಸಿಕ್ಸ್​ನೊಂದಿಗೆ 133 ರನ್ ಗಳಿಸಿ ಸುಸ್ತಾದರು.

ಕೊನೆಯಲ್ಲಿ ಭುವನೇಶ್ವರ್ ಕುಮಾರ್(ಅಜೇಯ 29) ಬ್ಯಾಟ್ ಬೀಸಿದರಾದರು ಯಾವುದೇ ಪ್ರಯೋಜನವಾಗಿಲ್ಲ. ಪರಿಣಾಮ ಭಾರತ 50 ಓವರ್​ಗೆ 9 ವಿಕೆಟ್ ಕಳೆದುಕೊಂದು 254 ರನ್​​ ಗಳಿಸಲಷ್ಟೆ ಶಕ್ತವಾಯಿತು. ಆಸೀಸ್ ಪರ ರಿಚರ್ಡಸನ್​ 4 ವಿಕೆಟ್ ಕಿತ್ತರೆ, ಬೆಹ್ರೆನ್​​​ಡ್ರಾಫ್​ ಹಾಗೂ ಸ್ಟಾಯಿನಿಸ್ ತಲಾ 2 ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸೀಸ್ ಉತ್ತಮ ಆರಂಭ ಪಡೆದುಕೊಳ್ಳುವಲ್ಲಿ ವಿಫಲವಾಯಿತು. ನಾಯಕ ಆ್ಯರೋನ್​​ ಫಿಂಚ್ ಕೇವಲ 6 ರನ್​ಗೆ ಔಟ್ ಆದರು.ಇದರ ಬೆನ್ನಲ್ಲೆ ಮತ್ತೊಬ್ಬ ಓಪನರ್ ಅಲೆಕ್ಸ್ ಕ್ಯಾರಿ ಕೂಡ 24 ರನ್​ಗೆ ನಿರ್ಗಮಿಸಿದರು.

ಬಳಿಕ ಜೊತೆಯಾದ ಉಸ್ಮಾನ್ ಖ್ವಾಜಾ ಹಾಗೂ ಶಾನ್ ಮಾರ್ಶ್​ ಭರ್ಜರಿ ಆಟ ಪ್ರದರ್ಶಿಸಿದರು. 92 ರನ್​ಗಳ ಜೊತೆಯಾಟವಾಡಿದ ಈ ಜೋಡಿ ತಂಡದ ಮೊತ್ತವನ್ನು 150ರ ಅಂಚಿಗೆ ತಂದಿಟ್ಟರು. ಅಂತೆಯೆ ಖ್ವಾಜಾ ಆಕರ್ಷಕ ಅರ್ಧಶತಕ ಸಿಡಿಸಿ 59 ರನ್​ಗೆ ಜಡೇಜಾಗೆ ವಿಕೆಟ್ ಒಪ್ಪಿಸಿದರು.

4ನೇ ವಿಕೆಟ್​ಗೆ ಮಾರ್ಶ್​​ ಜೊಯತೆಯಾದ ಪೀಟರ್ ಹ್ಯಾಂಡ್ಸ್​ಕಾಂಬ್​​ ಕೂಡ ಉತ್ತಮ ಆಟ ಪ್ರದರ್ಶಿಸಿದರು. ಅರ್ಧಶತಕದ ಜೊತೆಯಾಟದೊಂದಿಗೆ ಮಾರ್ಶ್​​ 54 ರನ್​ಗೆ ನಿರ್ಗಮಿಸಿದರು. ಮಾರ್ಶ್​​ ನಿರ್ಗಮನದ ಬಳಿಕ ಮಾರ್ಕಸ್ ಸ್ಟೊಯಿನಿಸ್ ಜೊತೆಯಾದ ಹ್ಯಾಂಡ್ಸ್​​ಕಾಂಬ್​​ ಬಿರುಸಿನ ಆಟಕ್ಕೆ ಮುಂದಾದರು. ಟೀಂ ಇಂಡಿಯಾ ಬೌಲರ್​ಗಳನ್ನು ಕಾಡಿದ ಈ ಜೋಡಿ ತಂಡದ ಮೊತ್ತವನ್ನು 250ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

ಆರ್ಭಟಿಸಿದ ಹ್ಯಾಂಡ್ಸ್​​ಕಾಂಬ್​​ 61 ಎಸೆತಗಳಲ್ಲಿ 6 ಬೌಂಡರಿ ಹಾಗೂ 2 ಸಿಕ್ಸ್​ನೊಂದಿಗೆ 73 ರನ್​ ಗಳಿಸಿ ಕೊನೆ ಕ್ಷಣದಲ್ಲಿ ನಿರ್ಗಮಿಸಿದರೆ, ಸ್ಟೊಯಿನಿ ಬ್ಯಾಟ್ ಬೀಸಿ ಅಜೇಯ 47 ರನ್ ಸಿಡಿಸಿ ಭಾರತಕ್ಕೆ 289 ರನ್ ಟಾರ್ಗೆಟ್ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತ ಪರ ಭುವನೇಶ್ವರ್ ಕುಮಾರ್ ಹಾಗೂ ಕುಲ್ದೀಪ್ ಯಾದವ್ ತಲಾ 2 ವಿಕೆಟ್ ಕಿತ್ತರೆ ಜಡೇಜಾ 1 ವಿಕೆಟ್ ಪಡೆದರು.

34 ರನ್​ಗಳ ಗೆಲುವಿನೊಂದಿಗೆ ಆಸ್ಟ್ರೇಲಿಯಾ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. 4 ವಿಕೆಟ್ ಕಿತ್ತ ರಿಚರ್ಡಸನ್ ಪಂದ್ಯ ಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿದರು. ಮುಂದಿನ ಎರಡನೇ ಏಕದಿನ ಪಂದ್ಯ ಜನವರಿ 15 ರಂದು ಓವೆಲ್​ನ ಅಡಿಲೇಡ್ ಮೈದಾನದಲ್ಲಿ ನಡೆಯಲಿದೆ.

Comments are closed.