ಮಂಗಳೂರು, ಡಿಸೆಂಬರ್.24: ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಬಿಜೆಪಿ ಕ್ಷೀಣಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೇರಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಹಾಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. 200 ಸ್ಥಾನಗಳನ್ನು ಕಾಂಗ್ರೆಸ್ ಜಯಿಸುವ ಮೂಲಕ ಪ್ರಧಾನಿ ಅಭ್ಯರ್ಥಿಯಾಗಿ ರಾಹುಲ್ ಗಾಂಧಿ ಆಯ್ಕೆಯಾಗಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಮಾಜಿ ಕೇಂದ್ರ ಸಚಿವ, ಹಾಲಿ ಸಂಸದ ಎಂ.ವೀರಪ್ಪ ಮೊಯ್ಲಿ ವಿಶ್ವಾಸ ಹೇಳಿದ್ದಾರೆ.
ಮಂಗಳೂರಿನಲ್ಲಿ ಲೇಡಿಗೋಶನ್ ಆಸ್ಪತ್ರೆಯ ನೂತನ ಕಟ್ಟಡವನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಬಿಜೆಪಿಗೆ 3 ಅಥವಾ 4 ಸ್ಥಾನ ಸಿಕ್ಕಿದರೂ ಆಶ್ಚರ್ಯವಿಲ್ಲ. ಒಟ್ಟಾರೆಯಾಗಿ ಮೋದಿ ಅಧಿಕಾರದಿಂದ ಕೆಳಗಿಳಿಯುವುದು ನಿಶ್ಚಿತ ಎಂದು ಹೇಳಿದರು.
ರಾಹುಲ್ ಗಾಂಧಿ ಪ್ರಧಾನಿ ಹುದ್ದೆಗೇರುವುದನ್ನು ಮೈತ್ರಿಕೂಟ ಒಪ್ಪುತ್ತದೆ. ರಾಹುಲ್ ಗಾಂಧಿ ಅವರ ಪಾರದರ್ಶಕತೆ, ಮಾತು, ಪ್ರಾಮಾಣಿಕತೆ, ರೈತ ಹಾಗೂ ಬಡವರ ಬಗ್ಗೆ ಕಾಳಜಿಯಿಂದ ಜನರಿಗೆ ವಿಶ್ವಾಸ ಮೂಡಿದೆ. ಮೈತ್ರಿಕೂಟದಲ್ಲಿ ಕಾಂಗ್ರೆಸ್ 200 ಸ್ಥಾನ ಗೆದ್ದರೆ, ಮೈತ್ರಿಕೂಟ ಮುಖಂಡ ರಾಹುಲ್ ಗಾಂಧಿ ಆಗುತ್ತಾರೆ. ಆದರೆ ಈಗಲೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡುವುದಿಲ್ಲ. ಚುನಾವಣೆ ಆಗಲಿ. ಮೈತ್ರಿಕೂಟದಲ್ಲಿ ಕಾಂಗ್ರೆಸ್ ಅತ್ಯಧಿಕ ಸ್ಥಾನ ಪಡೆದವರು ಪ್ರಧಾನಿ ಆಗುತ್ತಾರೆ ಎಂದರು.
ಮುಂಬರು ಲೋಕಸಭಾ ಚುನಾವಣೆಯಲ್ಲಿ ತಾನು ಚಿಕ್ಕಬಳ್ಳಾಪುರದಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮೊಯ್ಲಿ ಉತ್ತರಿಸಿದರು. ಮೂರನೇ ಬಾರಿಯೂ ಚಿಕ್ಕಬಳ್ಳಾಪುರದಿಂದಲೇ ಸ್ಪರ್ಧಿಸುವೆ. ಮಂಗಳೂರಿನಿಂದ ಸ್ಪರ್ಧಿಸಲು ನಾನು ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.
Comments are closed.