ಕರಾವಳಿ

ಸುಪ್ರೀಂ ಕೋರ್ಟ್ ಜಡ್ಜ್ ಅಬ್ದುಲ್ ನಝೀರ್ ಅವರಿಂದ ಡಾ.ಎಂ.ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟೀಸ್’ ಕೃತಿ ಅನಾವರಣ

Pinterest LinkedIn Tumblr

ಮಂಗಳೂರು, ಡಿಸೆಂಬರ್.24: ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಅವರು ಸೋಮವಾರ ಜಿಲ್ಲಾ ನ್ಯಾಯಾಲಯ ಸಂಕೀರ್ಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರದ ಮಾಜಿ ಸಚಿವ, ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದ ಡಾ.ಎಂ.ವೀರಪ್ಪ ಮೊಯ್ಲಿಯವರ ‘ದಿ ವೀಲ್ ಆಫ್ ಜಸ್ಟೀಸ್’ ಕೃತಿಯನ್ನು ಅನಾವರಣಗೊಳಿಸಿದರು.

ಈ ವೇಳೆ ಮಾತನಾಡಿದ ಅವರು, ಕಾನೂನಿನ ಕುರಿತಂತೆ ಮಾಹಿತಿಯ ಕೊರತೆ ಹಾಗೂ ಆರ್ಥಿಕ ಸಮಸ್ಯೆ ದೇಶದಲ್ಲಿ ನ್ಯಾಯದಾನದಲ್ಲಿ ವಿಳಂಬಕ್ಕೆ ಕಾರಣ. ಸದ್ಯ ನ್ಯಾಯಾಂಗ ವ್ಯವಸ್ಥೆಯಲ್ಲೂ ಸಾಕಷ್ಟು ಬದಲಾವಣೆ ಹಾಗೂ ಪ್ರಗತಿ ಆಗಿರುವುದರಿಂದ ನ್ಯಾಯದಾನ ಪ್ರಕ್ರಿಯೆಯಲ್ಲಿ ವೇಗ ಹೆಚ್ಚಿದೆ. ಡಾ.ಮೊಯ್ಲಿಯವರ ಈ ಪುಸ್ತಕ ರಾಷ್ಟ್ರ ಮಟ್ಟದ ಶಾಲೆಗಳಲ್ಲಿ ಚರ್ಚಾ ವಿಷಯವಾಗುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿನ ನ್ಯೂನತೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಎಲ್ಲವೂ ಆಂಗ್ಲ ಭಾಷೆಯಲ್ಲೇ ಸಾಗಿತ್ತು. ಹಾಗಿದ್ದರೂ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿರುವ ನ್ಯಾಯಮೂರ್ತಿ ಎಸ್. ಅಬ್ದುಲ್ ನಝೀರ್ ತಮ್ಮ ಮಾತನ್ನು ಆರಂಭಿಸುವಾಗಲೇ ‘ಮಾತೆರೆಗ್ಲಾ ನಮಸ್ಕಾರ’ ಎಂದು ತುಳುವಿನಲ್ಲಿ ಮಾತು ಆರಂಭಿಸಿದರು.

ಈ ಸಂದರ್ಭ ಜಿಲ್ಲಾ ನ್ಯಾಯಾಲಯಕ್ಕೆ ನೇರ ನೇಮಕಾತಿಗೊಂಡಿರುವ ನೂತನ ಜಿಲ್ಲಾ ನ್ಯಾಯಾಧೀಶ ಯಾದವ ಕರ್ಕೇರನ್ನು ಸವೋಚ್ಚ ನ್ಯಾಯಾಲಯದ ನ್ಯಾಯಾಧೀಶ ಎಸ್. ಅಬ್ದುಲ್ ನಝೀರ್ ಅಭಿನಂದಿಸಿದರು.

ಮಂಗಳೂರು ವಕೀಲರ ಸಂಘದ ವತಿಯಿಂದ ಡಾ.ಎಂ.ವೀರಪ್ಪ ಮೊಯ್ಲಿಯವರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಕೃತಿಕರ್ತ ಡಾ.ಎಂ.ವೀರಪ್ಪ ಮೊಯ್ಲಿ ಮಾತನಾಡಿ, ವಕೀಲನಾಗಿ, ಕಾನೂನು ಸಚಿವನಾಗಿ ಪಡೆದ, ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಗಳಿಸಿದ ಅನುಭವಗಳನ್ನು ಸಮೀಕರಿಸಿ, ಸಂಶೋಧನೆ ನಡೆಸಿ, ಅಂತರ್‌ರಾಷ್ಟ್ರೀಯ ಮಟ್ಟದ ಕಾನೂನು ತಜ್ಞರ ಜತೆ ಅಭ್ಯಾಸ ಮಾಡಿ ಈ ಪುಸ್ತಕವನ್ನು ನಾನು ಬರೆದಿದ್ದೇನೆ. ಇದರಿಂದ ಇದು ಕೇವಲ ನನ್ನ ಕೊಡುಗೆ ಅಲ್ಲ. ಇದು ಜಗತ್ತಿನ ಕಾನೂನು ವಿದ್ವಾಂಸರ ಜಾನಪದ ಸಂಚಯ ಎಂದು ತಮ್ಮ ಕೃತಿಯ ಬಗ್ಗೆ ವ್ಯಾಖ್ಯಾನಿಸಿದರು.

ವೇದಿಕೆಯಲ್ಲಿ ಜಿಲ್ಲಾ ನ್ಯಾಯಾಧೀಶ ನ್ಯಾ.ಕಡೂರು ಸತ್ಯನಾರಾಯಣ ಆಚಾರ್, ನ್ಯಾಯವಾದಿ ಎಂ.ಕೆ.ವಿಜಯ ಕುಮಾರ್, ಹಿರಿಯ ನ್ಯಾಯವಾದಿಗಳಾದ ಪಿ.ಪಿ.ಹೆಗ್ಡೆ, ದಿನಕರ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಂ.ಆರ್.ಬಲ್ಲಾಳ್ ಸ್ವಾಗತಿಸಿದರು.

Comments are closed.