
ಮಂಗಳೂರು, ಡಿಸೆಂಬರ್ 24 : ಜಗತ್ತಿನೆಲ್ಲೆಡೆ ನಾಳೆ ಕ್ರಿಸ್ಮಸ್ ಹಬ್ಬದ ಸಂಭ್ರಮ. ಕರಾವಳಿಯಲ್ಲಿ ಕ್ರಿಸ್ ಮಸ್ ಹಬ್ಬದ ಸಂಭ್ರಮ ಕಳೆದ ಕೆಲವು ದಿನಗಳ ಮೊದಲೇ ಆರಂಭವಾಗಿದ್ದು, ಮಂಗಳೂರಿನ ಬೀದಿ ಬೀದಿಗಳಲ್ಲಿ ಕ್ರಿಸ್ ಮಸ್ ಶಾಪಿಂಗ್ ಜೋರಾಗಿದೆ.
ಮಂಗಳೂರಿನಲ್ಲಿ ಕ್ರಿಸ್ ಮಸ್ ಹಬ್ಬದ ಸಿದ್ಧತೆ ಜೋರಾಗಿಯೇ ನಡೆಯುತ್ತಿದ್ದು, ಮಾರುಕಟ್ಟೆಯಲ್ಲಿ ಬಗೆಬಗೆಯ ನಕ್ಷತ್ರಗಳು, ಗೋದಳಲಿಗಳು, ಬಾಲ ಏಸು, ಮೇರಿ, ಜೋಸೆಫ್, ದೇವದೂತರು, ನಾಗರಿಕರು,ಕುರಿಗಾಹಿಗಳು, ಕುರಿ, ಒಂಟೆಗಳ ಪುಟ್ಟ ಪುಟ್ಟ ಗೊಂಬೆಗಳ ಮಾರಾಟ ಮತ್ತು ಖರೀದಿಯ ಭರಾಟೆ ಬಹಳ ಜೋರಾಗಿಯೇ ನಡೆಯುತ್ತಿದೆ.

ಮಾರುಕಟ್ಟೆಗೆ ಬಗೆಬಗೆಯ ಅಲಂಕಾರಿಕ ಸಾಮಗ್ರಿಗಳು ಲಗ್ಗೆ ಇಟ್ಟಿದ್ದು, ನಗರದ ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ನಕ್ಷತ್ರಗಳು, ಜಗಮಗಿಸುವ ಗೂಡುದೀಪಗಳು, ಕ್ರಿಬ್ಸ್ ಗೆ ಬೇಕಾದ ವಸ್ತುಗಳು, ಬೇಕರಿಗಳಲ್ಲಿ ಪ್ರದರ್ಶನಕ್ಕಿಟ್ಟಿರುವ ವಿವಿಧ ಆಕಾರದ ಕೇಕ್ ಗಳು ಹಾಗೂ ಬಗೆ-ಬಗೆಯ ತಿಂಡಿಗಳು ಯೇಸುವಿನ ಜನನದ ಆಗಮನವನ್ನು ಸಾರುತ್ತಿವೆ. ಇದಲ್ಲದೆ ಸಾಂತಾ ಕ್ಲಾಸ್ ಗೊಂಬೆಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಈ ಎಲ್ಲಾ ಸಾಮಾಗ್ರಿಗಳು ಸಾಮಾನ್ಯವಾಗಿ ಕೈಗೆಟಕುವ ದರದಿಂದ ಹಿಡಿದು ದುಬಾರಿ ಬೆಲೆಗಳಲ್ಲಿಯೂ ದೊರೆಯುತ್ತವೆ.

ಮಂಗಳೂರಿನ ಮಾರುಕಟ್ಟೆಯಲ್ಲಿ ರೆಡಿಮೆಡ್ ಗೋದಳಿ, ಹುರುಳಿ ಗದ್ದೆ, ಹೆಸರು ಗದ್ದೆ, ಹುಲ್ಲುಗಾವಲು, ಕ್ರಿಸ್ ಮಸ್ ಟ್ರೀಗಳೆಲ್ಲವೂ ಪ್ಲಾಸ್ಟಿಕ್ ಮೋಲ್ಡ್ ರೂಪದಲ್ಲಿ ದೊರೆಯುತ್ತಿವೆ. ಹೆಚ್ಚಿನ ಶ್ರಮವಿಲ್ಲದೇ ಕಡಿಮೆ ಸಮಯದಲ್ಲಿ ಇವುಗಳನ್ನು ಸುಲಭವಾಗಿ ಜೋಡಿಸಿ ಗೋದಳಿಯನ್ನು ನಿರ್ಮಾಣ ಮಾಡಬಹುದು ಎಂಬ ಕಾರಣಕ್ಕೆ ಈ ರೆಡಿಮೆಡ್ ವಸ್ತುಗಳಿಗೆ ಬೇಡಿಕೆ ಹೆಚ್ಚಿದೆ.

ಕರಾವಳಿಯ ಕ್ಯಾಥೊಲಿಕ್ ಬಂಧುಗಳು ಕುಸ್ವಾರ್ ಇಲ್ಲದೆ ಕ್ರಿಸ್ಮಸ್ ಹಬ್ಬವನ್ನು ಆಚರಣೆ ಮಾಡೋದಿಲ್ಲ. ಈ ಹಿನ್ನೆಲೆಯಲ್ಲಿ ಕರಾವಳಿಯ ಕ್ರೈಸ್ತರು ಹೆಚ್ಚಾಗಿ ಮನೆಯಲ್ಲೇ ಕುಸ್ವಾರ್ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ಡಿಸೆಂಬರ್ ಮೊದಲ ವಾರದಿಂದಲೇ ಕುಸ್ವಾರ್ ತಯಾರಿಕೆ ಅರಂಭವಾಗುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಬೇಕರಿಯ ಕುಸ್ವಾರ್ ಖಾದ್ಯದ ಖರೀದಿ ಜೋರಾಗಿಯೇ ನಡೆಯುತ್ತಿದೆ. ಇಲ್ಲಿ ಕೇಕ್ ಗಳಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಆದರೆ, ಕುಸ್ವಾರ್ ಗಳಿಗಂತೂ ಬೇಡಿಕೆ ಇದ್ದೇ ಇದೆ.
ಕ್ರಿಸ್ಮಸ್ ಹಬ್ಬವನ್ನು ಬಡವರು ಶ್ರೀಮಂತರೆನ್ನದೆ ಎಲ್ಲಾ ಕ್ರಿಶ್ಚಿಯನ್ ಬಾಂಧವರು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದ್ದರಿಂದ ಗೋದಳಿಯ ಸಾಮಾಗ್ರಿಗಳ ಖರೀದಿಯು ಜೋರಾಗಿ ನಡೆಯುತ್ತಿದ್ದು, ಅಂಗಡಿ ಮಾಲೀಕರು ಗ್ರಾಹಕರ ಗಮನಸೆಳೆಯುತ್ತಿದ್ದಾರೆ.
Comments are closed.