ಕರಾವಳಿ

ಗಂಗೊಳ್ಳಿಯಲ್ಲಿ ಅಂಗಡಿ, ವಾಹನಕ್ಕೆ ಬೆಂಕಿಯಿಟ್ಟ ದುಷ್ಕರ್ಮಿಗಳಿಬ್ಬರಿಗೆ 7 ವರ್ಷ ಕಠಿಣ ಸಜೆ, 35 ಸಾವಿರ ದಂಡ

Pinterest LinkedIn Tumblr

ಕುಂದಾಪುರ: 2015 ಜ.21 ರಂದು ರಾತ್ರಿ ಗಂಗೊಳ್ಳಿ ಮುಖ್ಯರಸ್ತೆಯ ಸನಿಹ ಇರುವ ವೆಂಕಟೇಶ ಶೆಣೈ ಮಾಲೀಕತ್ವದ ವೆಂಕಟೇಶ್ವರ ಸ್ಟೋರ್ಸ್ ಅಂಗಡಿ, ಅಂಗಡಿಗೆ ಸಂಬಂಧಿಸಿದ ಗೋದಾಮು ಹಾಗೂ ಮನೆಯ ಮುಂಭಾಗ ಪಾರ್ಕ್ ಮಾಡಿದ್ದ ಚವರ್ಲೆಟ್ ಎಂಜಾಯ್ ಕಾರು, ರಿಟ್ಜ್ ಹಾಗೂ 407 ವಾಹನಕ್ಕೆ ಬೆಂಕಿ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರ ವಿರುದ್ಧ ಹೊರಿಸಲಾದ ಆರೋಪಗಳು ಸಾಭೀತಾದ ಹಿನ್ನೆಲೆ ಅಪರಾಧಿಗಳಿಗೆ ಇಂದು ಕುಂದಾಪುರದಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಧರಾದ ಪ್ರಕಾಶ ಖಂಡೇರಿ ಶಿಕ್ಷೆ ಪ್ರಕಟಿಸಿದ್ದಾರೆ. ಪ್ರಾಸಿಕ್ಯೂಶನ್ ಪರ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದ ಮಂಡಿಸಿದ್ದರು.

ಅಪರಾಧಿಗಳಾದ ಗಂಗೊಳ್ಳಿಯ ಮಹಮ್ಮದ್ ಜುನೈದ್, ವೆಲ್ಡಿಂಗ್ ಜಾಫರ್ ಎಂಬಿಬ್ಬರಿಗೆ ಕಟ್ಟಡಕ್ಕೆ ಅಕ್ರಮ ಪ್ರವೇಶ ಐಪಿಸಿ ಕಲಂ 451ಕ್ಕೆ 1 ವರ್ಷ ಕಠಿಣ ಸಜೆ, 5 ಸಾವಿರ ದಂಡ, ಬೆಂಕಿ ಹಾಕಿದ್ದಕ್ಕೆ ಐಪಿಸಿ ಕಲಂ 436ರ ಅಡಿ, 7 ವರ್ಷ ಕಠಿಣ ಸಜೆ 20ಸಾವಿರ ದಂಡ, ನಷ್ಟಗೊಳಿಸಿದ ಪ್ರಕರಣಕ್ಕೆ 427 ಕಲಂನಲ್ಲಿ 2 ವರ್ಷ ಸಜೆ ಹಾಗೂ 10 ಸಾವಿರ ದಂಡ ವಿಧಿಸಿ ತೀರ್ಪು ನೀಡಲಾಗಿದೆ.

ಅಂದು ನಡೆದಿದ್ದೇನು?
ಮುಖ್ಯರಸ್ತೆಯ ಸನಿಹದಲ್ಲೇ ಇದ್ದ ವೆಂಕಟೇಶ್ವರ ಸ್ಟೋರ್ಸ್ ಅಂಗಡಿಗೆ 2015 ಜ.21 ರಂದು ರಾತ್ರಿ ಅಪರಿಚಿತ ಇಬ್ಬರು ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಇದೇ ವೇಳೆ ಅಂಗಡಿಯ ಮುಂಭಾಗದಲ್ಲಿ ಶಬ್ಧವಾಗುತ್ತಿರುವುದನ್ನು ಕೇಳಿಸಿಕೊಂಡ ಅಂಗಡಿ ಮಾಲೀಕ ವೆಂಕಟೇಶ್ ಶೆಣೈ ಎಂಬುವರು ಹೊರಗಡೆ ಬರುತ್ತಿದ್ದಂತೆ, ದುಷ್ಕರ್ಮಿಗಳು ಬೆಂಕಿ ಹಚ್ಚಲು ಮುಂದಾಗಿದ್ದು ವೆಂಕಟೇಶ ಶೆಣೈ ಬೆಂಕಿ ಹಚ್ಚದಂತೆ ಕೂಗಾಡಿದರೂ ಕೂಡ ಲೆಕ್ಕಿಸದೇ ಬೆಂಕಿಯಿಟ್ಟು ಸ್ಥಳದಿಂದ ಪರಾರಿಯಾಗಿದ್ದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿತ್ತು. ಅತೀಸೂಕ್ಷ್ಮ ಪ್ರದೇಶವೆಂದು ಬಿಂಬಿತವಾದ ಗಂಗೊಳ್ಳಿಯಲ್ಲಿ ನಡೆದ ಈ ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದ್ದು ಮಾತ್ರವಲ್ಲದೇ ಗಂಗೊಳ್ಳಿ ಬಂದ್ ಕೂಡ ನಡೆದಿತ್ತು. ಅಂದಿನ ಉಡುಪಿ ಎಸ್ಪಿ ಅಣ್ಣಾಮಲೈ, ಕುಂದಾಪುರ ಡಿವೈಎಸ್ಪಿ ಮಂಜುನಾಥ ಶೆಟ್ಟಿ ಬೈಂದೂರು ಸಿಪಿ‌ಐ ಸುದರ್ಶನ್ ನೇತೃತ್ವದಲ್ಲಿ ತನಿಖೆ ಕೈಗೊಂಡಿದ್ದ ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಸುಬ್ಬಣ್ಣ ಹಾಗೂ ತಂಡ ಸಿ.ಸಿ. ಟಿವಿ ಪೂಟೇಜ್ ಸೇರಿದಂತೆ ಇನ್ನಿತರ ತಾಂತ್ರಿಕ ತಂತ್ರಜ್ಞಾನಗಳನ್ನು ಬಳಸಿಕೊಂಡು ಆರೋಪಿಗಳಾದ ಗಂಗೊಳ್ಳಿ ಮೂಲದ ಮಹಮ್ಮದ್ ಜುನೈದ್, ವೆಲ್ಡಿಂಗ್ ಜಾಫರ್ ಎಂಬಿಬ್ಬರನ್ನು ಕೇವಲ ಹದಿನೈದು ದಿನಗಳ ಅಂತರದಲ್ಲಿ ಬಂಧಿಸಲು ಯಶಸ್ವಿಯಾಗಿದ್ದರು.

ಇದನ್ನೂ ಓದಿರಿ:

ಗಂಗೊಳ್ಳಿಯ ವೆಂಕಟೇಶ್ವರ ಸ್ಟೋರ್‍ಸ್ ಅಂಗಡಿ, ವಾಹನಕ್ಕೆ ಬೆಂಕಿ; ಅಪರಾಧಿಗಳಿಬ್ಬರಿಗೆ ಡಿ.10ಕ್ಕೆ ಶಿಕ್ಷೆ ಪ್ರಕಟ

ಗಂಗೊಳ್ಳಿ: ದಿನಸಿ ಅಂಗಡಿ, ಕಾರು ಹಾಗೂ ಗೋದಾಮಿಗೆ ದುಷ್ಕರ್ಮಿಗಳಿಂದ ಬೆಂಕಿ; ಹಿಂದೂಪರ ಸಂಘಟನೆಗಳ ತೀವೃ ಆಕ್ರೋಷ; ಗಂಗೊಳ್ಳಿ ಬಂದ್

ಗಂಗೊಳ್ಳಿ ಬೆಂಕಿ ಪ್ರಕರಣ ; ಪ್ರಮುಖ ಆರೋಪಿ ಬಂಧನ 

Comments are closed.