ಕರಾವಳಿ

ಮಣಿಪಾಲದಲ್ಲಿ ಕ್ಲಬ್ ಮಾಲಿಕನ ಮರ್ಡರ್: ಕುಂದಾಪುರದಲ್ಲಿ ಮೂವರು ಆರೋಪಿಗಳ ಬಂಧನ, ಓರ್ವ ಪರಾರಿ

Pinterest LinkedIn Tumblr

ಉಡುಪಿ: ಮಣಿಪಾಲ- ಪೆರಂಪಳ್ಳಿ ರಸ್ತೆಯ ಝೆಪ್ಟಾ ಲಾಂಗ್ ಕಟ್ಟಡದಲ್ಲಿರುವ ಸೆವೆನ್ತ್ ಹೆವೆನ್ ಹೊಟೇಲಿನ ಮೊದಲ ಮಹಡಿಯ ಸೆವೆನ್ತ್ ಆರ್‌ಸಿ ಹೆಸರಿನ ಇಸ್ಪೀಟ್ ಕ್ಲಬ್‌ನ ಮಾಲಕ ಉಡುಪಿ ಪುತ್ತೂರು ಗ್ರಾಮ ಸುಬ್ರಹ್ಮಣ್ಯ ನಗರದ ನಿವಾಸಿ ಗುರುಪ್ರಸಾದ್ ಭಟ್ (44) ಅವರನ್ನು ಭಾನುವಾರ ಮಧ್ಯಾಹ್ನ ದುಷ್ಕರ್ಮಿಗಳ ತಂಡ ಚಾಕುವಿನಿಂದ ಇರಿದು ಕೊಲೆ ಮಾಡಿದ್ದು ಉಡುಪಿ ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಮೂವರು ಆರೋಪಿಗಳನ್ನು  ಕುಂದಾಪುರದ ಕಂಡ್ಲೂರು ಬ್ರಿಡ್ಜ್ ಬಳಿ ರಾತ್ರಿ ಬಂಧಿಸಿದ್ದಾರೆ.

ಬಂಧಿತರನ್ನು ಪ್ರದೀಪ್ ಪೂಜಾರಿ (36), ಸುಜಿತ್ ಪಿಂಟೋ (35) ಹಾಗೂ ರಾಜೇಶ್ ಪೂಜಾರಿ (30) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು ಆತನನ್ನು ರಂಜಿತ್ ಎನ್ನಲಾಗಿದೆ. ಆತನ ಬಂಧನಕ್ಕೆ ಪೊಲಿಸರು ಬಲೆ ಬೀಸಿದ್ದಾರೆ.

ಟೂರಿಸ್ಟ್ ಬಿಳಿ ಬಣ್ಣದ ಒಮ್ನಿ ಕಾರಿನಲ್ಲಿ ಬಂದ ನಾಲ್ವರು ಕ್ಲಬ್‌ಗೆ ನುಗ್ಗಿ ಗುರುಪ್ರಸಾದ್ ಭಟ್‌ಗೆ ಹಲ್ಲೆ ನಡೆಸಿ ಕುತ್ತಿಗೆಯ ಹಿಂಭಾಗಕ್ಕೆ ಚೂರಿಯಿಂದ ಇರಿದು ಅದೇ ಕಾರಿನಲ್ಲಿ ಪರಾರಿಯಾಗಿದ್ದರು. ತೀವ್ರವಾಗಿ ಗಾಯಗೊಂಡ ಗುರುಪ್ರಸಾದ್ ಅವರನ್ನು ಕಾರಿನಲ್ಲೇ ಮಣಿಪಾಲ ಆಸ್ಪತ್ರೆಗೆ ಸಾಗಿಸಿದರು. ಆದರೆ ತೀವ್ರ ರಕ್ತಸ್ರಾವದಿಂದ ಗುರು ಪ್ರಸಾದ್ ದಾರಿ ಮಧ್ಯೆ ಮೃತಪಟ್ಟಿದ್ದರು.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ..
ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಮುಂದುವರಿಸುತ್ತಲೇ ಕೆಲವು ಮಹತ್ತರ ದಾಖಲೆಗಳು ಅವರಿಗೆ ಆರೋಪಿಗಳನು ಬಂಧಿಸುವಲ್ಲಿ ನೆರವಾಗುತ್ತದೆ. ಓಮ್ನಿ ಕಾರಿನಲ್ಲಿ ಆರೋಪಿಗಳು ಪರಾರಿಯಾದ ಬಗ್ಗೆ ವಿವಿಧ ಠಾಣೆಗಳಿಗೂ ಮಾಹಿತಿಯಿತ್ತು. ಅದರಂತೆಯೇ ಎಲ್ಲಾ ಪೊಲೀಸರು ಆಯಕಟ್ಟಿನ ಸ್ಥಳ, ಚೆಕ್ ಪೋಸ್ಟ್ ಭಾಗದಲ್ಲಿ ಅಲರ್ಟ್ ಇದ್ದರು. ಕಂಡ್ಲೂರು ಚೆಕ್ ಪೋಸ್ಟ್ ಸಮೀಪ ಈ ಕಾರು ನಿಲ್ಲಿಸದೇ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದು ಅನುಮಾನ ಬಂದ ಕುಂದಾಪುರ ಗ್ರಾಮಾಂತರ ಠಾಣೆ ಎಸ್ಐ ಶ್ರೀಧರ್ ನಾಯ್ಕ್ ಹಾಗೂ ತಂಡ ಕಂಡ್ಲೂರು ಬ್ರಿಡ್ಜ್ ಬಳಿ ಆರೋಪಿಗಳನ್ನು ವಶಕ್ಕೆ ಪಡೆಯುತ್ತಾರೆ.

ಹಣಕಾಸು ದ್ವೇಷವು ತೆಗೆಯಿತೇ ಪ್ರಾಣ…?
ಗುರುಪ್ರಸಾದ್ ಹಲವು ಮಂದಿಯ ಜೊತೆ ಹಣಕಾಸು ವ್ಯವಹಾರ ಹೊಂದಿದ್ದು, ಇದೇ ಕಾರಣಕ್ಕೆ ದುಷ್ಕರ್ಮಿಗಳು ಅವರನ್ನು ಕೊಲೆ ಮಾಡಿದ್ದಾರೆಂಬುದು ತಿಳಿದುಬಂದಿದೆ. ಬಹಳಷ್ಟು ದುಂದು ವೆಚ್ಚ ಮಾಡುತ್ತಿದ್ದ ಗುರುಪ್ರಸಾದ್, ಹಲವು ಮಂದಿಯಿಂದ ಹಣ ಪಡೆದು ಹಿಂತಿರುಗಿಸದೆ ದ್ವೇಷ ಕಟ್ಟಿಕೊಂಡಿದ್ದರು ಎಂದು ಹೇಳಲಾಗಿದೆ. ಶನಿವಾರ ತಡರಾತ್ರಿವರೆಗೂ ಗೆಳೆಯರೊಂದಿಗೆ ಇಸ್ಪೀಟು ಆಟ ಆಡುತ್ತಿದ್ದ ಇವರ ಮೊಬೈಲ್‌ಗೆ ಹಲವು ಬಾರಿ ಕೊಲೆ ಬೆದರಿಕೆ ಕರೆ ಬಂದಿತ್ತೆನ್ನಲಾಗಿದೆ. ನಸುಕಿನ ವೇಳೆ ಸುಮಾರು ಮೂರು ಗಂಟೆಗೆ ಗೆಳೆಯರೆಲ್ಲ ಮನೆಗೆ ಹೋದ ನಂತ ಗುರುಪ್ರಸಾದ್ ಕ್ಲಬ್‌ನಲ್ಲೇ ಮಲಗಿದ್ದರು. ಇಂದು ಬೆಳಗ್ಗೆ 9ಗಂಟೆಗೆ ಅವರು ಮತ್ತೆ ಆಟದಲ್ಲಿ ತೊಡಗಿಸಿಕೊಂಡಿದ್ದರು. ಮಧ್ಯಾಹ್ನ 12ಗಂಟೆ ವೇಳೆಗೆ ಎಲ್ಲರೂ ಹೋದ ಬಳಿಕ ಕ್ಲಬ್‌ನ ಕೆಲಸದವರಾದ ಶಂಕರ ಹಾಗೂ ಜಯ ಅವರೊಂದಿಗೆ ಕ್ಲಬ್‌ನಲ್ಲೇ ಇದ್ದರು. ಇದೇ ಸಮಯ ಬಳಸಿಕೊಂಡು ದುಷ್ಕರ್ಮಿ ಗಳು ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸಿ.ಸಿ. ಟಿವಿ ದೃಶ್ಯಗಳ ಆಧಾರದಲ್ಲಿ…..
ಈ ಕಟ್ಟಡದಲ್ಲಿ ಸೆವೆನ್ ಹೆವೆನ್ ಬಾರ್, ಹೊಟೇಲು, ಪಬ್, ಲಾಡ್ಜಿಂಗ್, ಕ್ಲಬ್‌ಗಳಿದ್ದು, ಪ್ರತಿಯೊಂದು ಕಡೆಗಳಲ್ಲಿಯೂ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ. ಅಲ್ಲದೆ ಕೊಲೆ ನಡೆದ ಕ್ಲಬ್‌ನಲ್ಲಿಯೂ ಸುಮಾರು ಐದು ಸಿಸಿ ಕ್ಯಾಮೆರಾಗಳಿವೆ. ದುಷ್ಕರ್ಮಿಗಳು ಬಂದ ಬಿಳಿಬಣ್ಣ ಓಮ್ನಿ ಕಾರು, ಅದರ ನಂಬರ್ ಲಾಡ್ಜ್ ಹೊರಭಾಗದಲ್ಲಿರುವ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದ್ದರೆ, ಕ್ಲಬ್ ಒಳಗಿನ ಸಿಸಿ ಕ್ಯಾಮೆರಾದಲ್ಲಿ ನಾಲ್ವರು ದುಷ್ಕರ್ಮಿಗಳು ಗುರುಪ್ರಸಾದ್ ಭಟ್‌ಗೆ ಕೈಯಿಂದ ಹೊಡೆದು ಕಾಲಿನಿಂದ ತುಳಿಯುವ ಹಾಗೂ ಮೂವರು ಗುರು ಪ್ರಸಾದ್ ಭಟ್‌ರನ್ನು ಮೊಣಕಾಲಿನಲ್ಲಿ ಕುಳ್ಳಿರಿಸಿ ಕುತ್ತಿಗೆಯನ್ನು ಬಗ್ಗಿಸಿ, ಓರ್ವ ಚೂರಿಯಿಂದ ಅವರ ಕುತ್ತಿಗೆಯ ಹಿಂಭಾಗಕ್ಕೆ ಬಲವಾಗಿ ಇರಿಯುವ ದೃಶ್ಯ ಕೂಡ ದಾಖಲಾಗಿದೆ. ಕಟ್ಟಡ ಹಾಗೂ ಕ್ಲಬ್‌ನ ಸಿಸಿ ಕ್ಯಾಮೆರಾಗಳ ಫೂಟೇಜ್‌ಗಳನ್ನು ವಶಪಡಿಸಿಕೊಂಡ ಪೊಲೀಸರು ಆರೋಪಿಗಳ ಗುರುತು ಪತ್ತೆ ಹಚ್ಚಿದರು. ಅಲ್ಲದೆ ಶನಿವಾರ ಬೆದರಿಕೆ ಕರೆ ಬಂದಿರುವ ಗುರುಪ್ರಸಾದ್ ಭಟ್ ಮೊಬೈಲ್‌ನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದು ಹಲವು ವಿಚಾರಗಳು ಆರೋಪಿಗಳ ಬಂಧನಕ್ಕೆ ಸಹಕಾರಿಯಾಗಿದೆ.

ಸ್ಥಳಕ್ಕೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ, ಹೆಚ್ಚುವರಿ ಎಸ್ಪಿ ಕುಮಾರಚಂದ್ರ, ಮಣಿಪಾಲ ನಿರೀಕ್ಷಕ ಸುದರ್ಶನ್, ಉಡುಪಿ ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸದ್ಯ ಆರೋಪಿಗಳನ್ನು ಮಣಿಪಾಲ ಠಾಣೆಗೆ ಹಸ್ತಾಂತರಿಸಲಾಗಿದೆ. ಹೆಚ್ಚಿನ ಮಾಹಿತಿಗಳು ಇನ್ನಷ್ಟೇ ತಿಳಿದುಬರಬೇಕಿದೆ.

ಇದನ್ನೂ ಓದಿರಿ: 

ಮಟಮಟ ಮಧ್ಯಾಹ್ನವೇ ಮಣಿಪಾಲದಲ್ಲಿ ಮರ್ಡರ್; ಕ್ಲಬ್ ಮಾಲಿಕನನ್ನು ಇರಿದು ಕೊಂದ ದುಷ್ಕರ್ಮಿಗಳು

Comments are closed.