ಕರಾವಳಿ

ಮಂಗಳೂರು ನಗರದ ಅಭಿವೃದ್ಧಿಗೆ ಅನುದಾನ ಮಂಜೂರು ಮಾಡಿ ಕಾಮಗಾರಿಗೆ ವೇಗ ನೀಡಲು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಆಗ್ರಹ

Pinterest LinkedIn Tumblr

ಮಂಗಳೂರು: ಮಂಗಳೂರು ನಗರ ದಕ್ಷಿಣದ ಅಭಿವೃದ್ಧಿಗೆ ಅಗತ್ಯ ಇರುವ ಯೋಜನೆಗಳಿಗೆ ಶೀಘ್ರದಲ್ಲಿ ಅನುದಾನ ಮಂಜೂರು ಮಾಡಿ ಕಾಮಗಾರಿಗೆ ವೇಗ ನೀಡಬೇಕು ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಅವರು ನಗರಾಭಿವೃದ್ಧಿ ಸಚಿವ ಯು ಟಿ ಖಾದರ್, ಜಿಲ್ಲಾ ಉಸ್ತುವಾರಿ ಕಾರ್‍ಯದರ್‍ಶಿ ವಿ ಪೊನ್ನುರಾಜ್, ಕೆಯು‌ಐಡಿ‌ಎಫ್ ಸಿ ವ್ಯವಸ್ಥಾಪಕ ನಿರ್‍ದೇಶಕ ಇಬ್ರಾಹಿಂ ಮತ್ತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರಿಗೆ ವಿವರಿಸಿದ್ದಾರೆ.

ಶಾಸಕ ವೇದವ್ಯಾಸ ಕಾಮತ್ ಅವರು ಸ್ಮಾರ್‍ಟ್ ಸಿಟಿ ಯೋಜನೆ ಕುರಿತಂತೆ ಜನಪ್ರತಿನಿಧಿಗಳು ಹಾಗೂ ಉನ್ನತ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು.

ಐದು ಲಕ್ಷ ಜನರು ವಾಸಿಸುವ ಸುಮಾರು ೧೫೦೦ ಕಿಮೀ ವ್ಯಾಪ್ತಿಯ ಮಂಗಳೂರು ನಗರಕ್ಕೆ ಕುಡಿಯುವ ನೀರಿನ ಸಮಗ್ರ ಯೋಜನೆಯನ್ನು ಜಾರಿಗೆ ತರಲು ಬೇಕಾಗುವ ಒಟ್ಟು ಮೊತ್ತ ಅಂದಾಜು 480 ಕೋಟಿ. ಎಡಿಬಿ (2) ರಲ್ಲಿ 220 ಕೋಟಿ ಮಂಜೂರು ಮಾಡಲಾಗಿದೆ. ವ್ಯತ್ಯಾಸದ ಮೊತ್ತವನ್ನು ಕೂಡಲೇ ಮಂಜೂರು ಮಾಡಿದರೆ ಯೋಜನೆ ಸಮರ್‍ಪಕವಾಗಿ ಜಾರಿಗೆ ಬರುತ್ತದೆ. ಈಗಾಗಲೇ ಮಂಗಳೂರಿಗೆ ಬರುವ ನೀರಿನಲ್ಲಿ 65% ನೀರು ಪೋಲಾಗುತ್ತಿದೆ. ಇದನ್ನು ತಡೆಗಟ್ಟಲು ಪೂರ್‍ಣ ಕಾಮಗಾರಿ ಮಾಡಿದರೆ ಮಾತ್ರ ಸಾಧ್ಯ. ಆದ್ದರಿಂದ ರಾಜ್ಯ ಸರಕಾರ ವ್ಯತ್ಯಾಸ ಇರುವ ಮೊತ್ತವನ್ನು ಮಂಜೂರು ಮಾಡಿದರೆ ಯಾವುದೇ ತೊಂದರೆ ಇಲ್ಲದೆ ಎಲ್ಲಾ ಕಡೆ ನೀರು ಪೂರೈಕೆ ಮಾಡಬಹುದು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ತುಂಬೆ ಹೊಸ ವೆಂಟೆಂಡ್ ಡ್ಯಾಂನಲ್ಲಿ ಏಳು ಮೀಟರ್ ನೀರು ನಿಲ್ಲಿಸಬಹುದು. ಆದರೆ ಅಷ್ಟು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಕಾರಣ ಹೆಚ್ಚೆಚ್ಚು ನೀರು ನಿಲ್ಲಿಸಿದಷ್ಟು ದೊಡ್ಡ ಸಂಖ್ಯೆಯಲ್ಲಿ ರೈತರ ಭೂಮಿ ಮುಳುಗಡೆಯಾಗಲಿದೆ. ಪ್ರಸ್ತುತ ಕೃಷಿಕರ ಭೂಮಿಗೆ ಬಾಡಿಗೆ ನೀಡಲಾಗುತ್ತಿದೆ. ಅದರ ಬದಲಿಗೆ ಈಗಾಗಲೇ ಸರ್‍ವೆ ಮಾಡಿ ಪಟ್ಟಿ ಮಾಡಿದಂತೆ ರೈತರಿಗೆ ಪರಿಹಾರ ನೀಡಬೇಕು. ಅದಕ್ಕಾಗಿ ಸುಮಾರು 120 ಕೋಟಿ ರೂಪಾಯಿ ಅನುದಾನದ ಅಗತ್ಯ ಇದೆ. ಈ ಬಾರಿಯ ಬಜೆಟಿನಲ್ಲಿ ರಾಜ್ಯ ಸರಕಾರ ೧೨೦ ಕೋಟಿ ರೂಪಾಯಿಯನ್ನು ತುಂಬೆಯಲ್ಲಿ ಭೂಮಿ ಕಳೆದುಕೊಳ್ಳುವ ರೈತರಿಗೆ ಪರಿಹಾರವಾಗಿ ನೀಡಲು ಮೀಸಲಿಡಬೇಕು ಎಂದು ಮನವಿ ಸಲ್ಲಿಸಿದ್ದೇನೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಕಾಂಕ್ರೀಟ್ ರಸ್ತೆಗಳನ್ನು ನಿರ್‍ಮಿಸುವಾಗ ಆ ರಸ್ತೆಗಳ ಒಳಚರಂಡಿ ಪೈಪು ಮತ್ತು ನೀರಿನ ಪೈಪ್ ಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ಅಳವಡಿಸಲು ಅಗತ್ಯವಿರುವಷ್ಟು ಜಾಗ ಬಿಟ್ಟು ನಂತರ ಕಾಂಕ್ರೀಟ್ ಹಾಕಬೇಕು. ಇಲ್ಲದಿದ್ದರೆ ಪ್ರತಿ ಬಾರಿ ನೀರಿನ ಪೈಪು ಮತ್ತು ಒಳಚರಂಡಿ ಪೈಪುಗಳ ಸಮಸ್ಯೆ ಬಂದಾಗ ಕಾಂಕ್ರೀಟ್ ರಸ್ತೆಗಳನ್ನು ಅಲ್ಲಲ್ಲಿ ಒಡೆದು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಸಮಯ, ಹಣ ಮತ್ತು ಶ್ರಮ ವ್ಯರ್‍ಥವಾಗುತ್ತದೆ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಅಮೃತ ಯೋಜನೆಯಲ್ಲಿ ಮಂಗಳೂರಿಗೆ ಮಂಜೂರಾದ ಮೊತ್ತ 179 ಕೋಟಿ. ಇದರಲ್ಲಿ ಕಾಮಗಾರಿಗೋಸ್ಕರ ಟೆಂಡರ್ ಆದ ಮೊತ್ತ 55 ಕೋಟಿ. ಮಂಗಳೂರು ಬಿಟ್ಟು ಬೇರೆ ಅಮೃತ ಯೋಜನೆ ಸಿಕ್ಕಿದ ನಗರಗಳಲ್ಲಿ ಕಾಮಗಾರಿಯ ಹೆಚ್ಚಿನ ಭಾಗ ಮುಗಿದಿದೆ. ನಮ್ಮಲ್ಲಿ ಆರಂಭವೇ ಆಗಿಲ್ಲ. ಇದಕ್ಕೆ ಸೂಕ್ತ ಕ್ರಮ ಕೈಗೊಂಡು ಶೀಘ್ರ ಕಾಮಗಾರಿ ಆರಂಭಿಸಲು ಶಾಸಕ ವೇದವ್ಯಾಸ ಕಾಮತ್ ಮನವಿ ಮಾಡಿದರು.

ಅಮೃತ ಯೋಜನೆ ಮತ್ತು ಎಡಿಬಿ(2) ಸೀಮಿತವಾದ ಮೊತ್ತದಲ್ಲಿ ಪೂರ್‍ಣ ಪ್ರಮಾಣದಲ್ಲಿ ಒಳಚರಂಡಿಯ ಕಾಮಗಾರಿಗಳು ಸಾಧ್ಯವಾಗುತ್ತಿಲ್ಲ. 1970ರಲ್ಲಿ ಅಳವಡಿಸಿದ ಯುಜಿಡಿ ಪೈಪುಗಳು ಇವತ್ತಿನ ಜನಸಂಖ್ಯೆಯ ಪ್ರಮಾಣಕ್ಕೆ ಒತ್ತಡವನ್ನು ಸಹಿಸಿಕೊಳ್ಳದೇ ಕುಸಿದಿವೆ. ಇದನ್ನು ಸಮಗ್ರವಾಗಿ ಸರಿಮಾಡಬೇಕಾದರೆ ಸಾಕಷ್ಟು ಅನುದಾನದ ಅಗತ್ಯ ಇದೆ. ಇದನ್ನು ರಾಜ್ಯ ಸರಕಾರ ಬಿಡುಗಡೆ ಮಾಡಬೇಕು ಎಂದು ಶಾಸಕರು ಹೇಳಿದರು.

Comments are closed.