ಪ್ರಮುಖ ವರದಿಗಳು

68ನೇ ಗಣರಾಜ್ಯೋತ್ಸವ; ಮೋದಿಯೊಂದಿಗೆ ಸಂಭ್ರಮಾಚರಣೆಗೆ ಸಾಕ್ಷಿಯಾದ ಅಬುದಾಬಿ ಯುವರಾಜ; ಕಣ್ಮನ ಸೆಳೆದ ಪಥಸಂಚಲನ

Pinterest LinkedIn Tumblr

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ನಡೆದ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಗೆ ರಾಷ್ಟ್ರಗೀತೆಯನ್ನು ಹಾಡುವ ಮೂಲಕ ವರ್ಣ ರಂಜಿತ ತೆರೆ ಎಳೆಯಲಾಗಿದ್ದು, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿದ್ದ ಶೇಖ್ ಮೊಹಮ್ಮದ್ ಬಿನ್ ಜಾಯೇದ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯ ಬೀಳ್ಕೊಡುಗೆ ನೀಡಿದರು.

ಇದಕ್ಕೂ ಮೊದಲು ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡುವ ಮೂಲಕ 68ನೇ ಗಣರಾಜ್ಯೋತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಿದರು.ಉಗ್ರ ದಾಳಿ ಆತಂಕದ ನಡುವೆಯೇ 68ನೇ ಗಣರಾಜ್ಯೋತ್ಸವ ಸಂಭ್ರಮಾಚರಣೆಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಧ್ವಜಾರೋಹಣ ಮಾಡಿದರು.

ಈ ವೇಳೆ 21 ಸುತ್ತು ಕುಶಾಲ ತೋಪು ಸಿಡಿಸುವ ಮೂಲಕ ಧ್ವಜಗೌರವ ಸಲ್ಲಿಸಲಾಯಿತು. ಬಳಿಕ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು, ಗಡಿಯಲ್ಲಿ ತಮ್ಮ ಶೌರ್ಯ ಪ್ರದರ್ಶನ ಮಾಡಿ 3 ಉಗ್ರರನ್ನು ಹತ್ಯೈಗೈದಿದ್ದ ಹುತಾತ್ಮ ಯೋಧ ಹವಾಲ್ದಾರ್ ಹಂಗಪನ್ ದಾದಾ ಅವರಿಗೆ ಅಶೋಕ ಚಕ್ರ ಪ್ರಶಸ್ತಿ ಪ್ರದಾನ ಮಾಡಿದರು. ಹವಾಲ್ದಾರ್ ಹಂಗಪನ್ ದಾದಾ ಅವರ ಪತ್ನಿಗೆ ಪ್ರಣಬ್ ಮುಖರ್ಜಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಸಶಸ್ತ್ರ ಪಡೆಗಳ ಆಕರ್ಷಕ ಕವಾಯತು, ಹೆಲಿಕ್ಯಾಪ್ಟರ್‌ಗಳ ರೋಮಾಂಚನಕಾರಿ ಹಾರಾಟ, 15 ಸೇನಾ ಪಡೆಗಳ ಪಥಸಂಚಲನ, ಎನ್‌ಸಿಸಿ ಮತ್ತು ಎನ್‌ಎಸ್‌ಎಸ್‌ ಪಡೆಗಳ ಆಕರ್ಷಕ ಪಥಸಂಚಲನ ಕಣ್ಮನ ಸೆಳೆಯಿತು.

ಇದೇ ಮೊದಲ ಬಾರಿಗೆ ಎನ್‌ಎಸ್‌ಜಿ ಕಮಾಂಡೋ ಪಡೆ ಪಥ ಸಂಚಲನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಯುಎಇ ಯೋಧರ ಪಡೆಯೂ ಪಥ ಸಂಚಲನಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು.

ಇದರ ಬೆನ್ನಲ್ಲೇ ಭಾರತೀಯ ಸೇನೆಯಎಂಐ-17 ಹೆಲಿಕಾಪ್ಟರ್ ಸೇರಿದಂತೆ ಇತರೆ 3 ಹೆಲಿಕಾಪ್ಟರ್ ಗಳು ತ್ರಿವರ್ಣ ಧ್ವಜವನ್ನು ಹೊತ್ತು ಸಾಗುವ ಮೂಲಕ ಆಕರ್ಷಕ ಪಥ ಸಂಚಲನಕ್ಕೆ ಚಾಲನೆ ನೀಡಿದವು. ಬಳಿಕ ಪರೇಡ್ ಕಮಾಂಡರ್ ಮನೋಜ್ ನರವಾನೆ ಮತ್ತು ಮೇಜರ್ ಜನರಲ್ ರಾಜೇಶ್ ಸಹಾಯ್ ಅವರ ನೇತೃತ್ವದ ಅಶ್ವಾರೋಹಿ ದಳ ಭಾರತೀಯ ಶಸ್ತ್ರಸ್ತ್ರ ದಳದ ಸುಪ್ರೀಂ ಕಮ್ಯಾಂಡರ್ ರಾಷ್ಟ್ರಪತಿಗಳಿಗೆ ಗೌರವ ಸಲ್ಲಿಸಿದರು.

Comments are closed.