ಮಂಗಳೂರು.ಜನವರಿ.26: ದ.ಕ.ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಬುಧವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆರ್ಟಿಎ ಸಭೆ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, ಗ್ರಾಮಾಂತರ ಪ್ರದೇಶದ ಹಲವು ಕಡೆ ರಾತ್ರಿ ಮತ್ತು ಮುಂಜಾನೆಯ ವೇಳೆ ಕೆಲವು ಬಸ್ಗಳು ‘ಟ್ರಿಪ್ ಕಟ್’ ಮಾಡುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಮಾಲಕರು ತಮಗೆ ನೀಡಿದ ಪರವಾನಿಗೆಯ ನಿಬಂಧನೆ ಯಂತೆ ಬಸ್ಗಳನ್ನು ಚಲಿಸುವ ವ್ಯವಸ್ಥೆ ಮಾಡಬೇಕು. ಮುಂದಿನ ದಿನಗಳಲ್ಲಿ ‘ಬಸ್ ಟ್ರಿಪ್’ ಸಹಿತ ಪರವಾನಿಗೆಯ ನಿಯಮಗಳನ್ನು ಉಲ್ಲಂಘಿಸಿದರೆ ಸೂಕ್ತ ಕ್ರಮ ಜರಗಿಸಲಾಗುವುದು ಎಂದು ಹೇಳಿದರು.
ಕೆಲವು ಬಸ್ಗಳ ಮಾಲಕ-ಸಿಬ್ಬಂದಿ ವರ್ಗ ಕಲೆಕ್ಷನ್ (ಆದಾಯ) ಇಲ್ಲ ಎಂದು ರಾತ್ರಿ ಮತ್ತು ಮುಂಜಾನೆಯ ಹೊತ್ತು ಬಸ್ಗಳನ್ನು ಓಡಿಸುತ್ತಿಲ್ಲ.ಗ್ರಾಮಾಂತರ ಪ್ರದೇಶದ ಪ್ರಯಾಣಿಕರಂತೂ ಇದರಿಂದ ತುಂಬಾ ಸಮಸ್ಯೆಗೊಳಗಾಗುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಖಾಸಗಿ ಅಥವಾ ಸರಕಾರಿ ಬಸ್ನವರು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡಬೇಕು. ಯಾವುದೇ ಕಾರಣಕ್ಕೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು.
ಬಜಾಲ್ ಜಲ್ಲಿಗುಡ್ಡೆಗೆ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ. ಮುಂಜಾನೆ ಮತ್ತು ರಾತ್ರಿ ಹೊತ್ತು ಟ್ರಿಪ್ ಕಟ್ ಮಾಡುತ್ತಾರೆ. ನರ್ಮ್ ಬಸ್ಸಿನವರಿಗೂ ಕೆಲವು ಖಾಸಗಿ ಬಸ್ಸಿನವರು ಅಡ್ಡಿಪಡಿಸುತ್ತಾರೆ. ಜಲ್ಲಿಗುಡ್ಡೆಯಿಂದ ಸುಮಾರು 1.5 ಕಿ.ಮೀ. ದೂರದ ಕಲ್ಲಕಟ್ಟೆ ಎಂಬಲ್ಲಿಗೆ ಬಸ್ಗಳನ್ನು ಓಡಿಸಲು ಕ್ರಮ ಜರಗಿಸಬೇಕು ಎಂದು ಡಿವೈಎಫ್‌ಐ ಮುಖಂಡ ಸಂತೋಷ್ ಬಜಾಲ್ ಒತ್ತಾಯಿಸಿದರು.
ಇದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರಗಿಸುವಂತೆ ಆರ್ಟಿಒ ಮತ್ತು ಕೆಎಸ್ಸಾರ್ಟಿಸಿ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು. ನರ್ಮ್ ಬಸ್ಗಳು ಮುಸ್ಸಂಜೆಯ ಬಳಿಕ ಓಡುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಕೊಂಚಾಡಿ-ದೇರೆಬೈಲ್ ಲ್ಯಾಂಡ್ಲಿಂಕ್ಸ್ಗೆ, ವಿಟ್ಲಕ್ಕೆ ಬಸ್ ಬರುತ್ತಿಲ್ಲ. ಬಿಜೈಯಿಂದ ಪೊಳಲಿಗೆ ಪರವಾನಿಗೆ ನೀಡಬೇಕು ಇತ್ಯಾದಿ ಬೇಡಿಕೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಈ ಎಲ್ಲ ಸಮಸ್ಯೆಗೆ ಕ್ರಮ ಜರಗಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ-ಮಣಿಪಾಲ-ಮಂಗಳೂರು ಮಧ್ಯೆ ಓಡಾಡುವ ಎಕ್ಸ್ಪ್ರೆಸ್ ಬಸ್ಗಳು ಹಳೆಯಂಗಡಿಯಲ್ಲಿ ‘ಸ್ಟಾಪ್’ ಕೊಡಬೇಕು ಎಂದು ಸಾರ್ವಜನಿಕರು ಬೇಡಿಕೆ ಮುಂದಿಟ್ಟರು.
ಎಕ್ಸ್ಪ್ರೆಸ್ ಬಸ್ಗಳು ಎಲ್ಲೆಡೆ ನಿಲುಗಡೆಯಾದರೆ ಸರ್ವಿಸ್ ಬಸ್ಗಳು ಓಡಾಟ ನಿಲ್ಲಿಸಬೇಕಾದೀತು. ಹಿಂದೆ ಮಂಗಳೂರು-ಉಡುಪಿ ಮಧ್ಯೆ ಕೇವಲ 4 ಸ್ಟಾಪ್ಗಳು ಇತ್ತು. ಈಗ ಅದು 14ಕ್ಕೇರಿದೆ. ಹಾಗಾಗಿ ಹಳೆಯಂಗಡಿಯಲ್ಲಿ ಎಕ್ಸ್ಪ್ರೆಸ್ಗೆ ಸ್ಟಾಪ್ ಕೊಡಬಾರದು ಎಂದು ಸರ್ವಿಸ್ ಬಸ್ ಮಾಲಕರು ಮನವಿ ಮಾಡಿದರು.
ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ, ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್, ಡಿವೈಎಫ್‌ಐ ಮುಖಂಡ ಬಿ.ಕೆ.ಇಮ್ತಿಯಾಝ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಆರ್ಟಿಎ ಸಭೆಯಲ್ಲಿ ಸಾರ್ವಜನಿಕರಿಗೆ ಮಾತನಾಡುವ ಬದಲು ಮೊದಲು ಅರ್ಜಿ ಸಲ್ಲಿಸಬೇಕು. ಮುಂದಿನ ಸಭೆಯಲ್ಲಿ ಆ ಅರ್ಜಿಗೆ ಉತ್ತರಿಸಲಾಗುವುದು. ಇದರಿಂದ ಅರ್ಜಿಗೆ ಸ್ಪಂದಿಸಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಸಭೆಯ ಆರಂಭಕ್ಕೆ ಹೇಳಿದರು.
ಇದಕ್ಕೆ ಪ್ರತಿಕ್ರಿಯಿಸಿದ ನಾಗರಿಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಹನುಮಂತ ಕಾಮತ್ ಕಳೆದ ಹಲವು ಸಮಯದಿಂದ ಸಾರಿಗೆ ಅದಾಲತ್ ನಡೆಯುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಆರ್ಟಿಎ ಸಭೆಗೆ ಹಾಜರಾಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಾರಿಗೆ ಅದಾಲತ್ ನಿಗದಿತ ಸಮಯಕ್ಕೆ ಮಾಡುವಂತೆ ಕ್ರಮ ಜರಗಿಸಿ ಎಂದರು.ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಮುಂದಿನ ದಿನಗಳಲ್ಲಿ ಕ್ರಮಬದ್ಧವಾಗಿ ಸಾರಿಗೆ ಅದಾಲತ್ ಮಾಡಲು ಆರ್ಟಿಒಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಎಸ್ಪಿ ಭೂಷನ್ ಜಿ. ಬೊರಸೆ, ಡಿಸಿಪಿ ಸಂದೀಪ್ ಪಾಟೀಲ್, ಆರ್ಟಿಒ ರಮೇಶ್ ವರ್ಣೇಕರ್ ಮತ್ತಿತರರು ಉಪಸ್ಥಿತರಿದ್ದರು.
Comments are closed.