ಕರ್ನಾಟಕ

ಬೆಳಗಾವಿಯ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ ಗ್ಯಾಂಗ್‍ನಿಂದ ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ !

Pinterest LinkedIn Tumblr

ಬೆಳಗಾವಿ: ಫೇಸ್‍ಬುಕ್‍ನಲ್ಲಿ ಬಿಜೆಪಿಗೆ ವಿರುದ್ಧವಾಗಿ ಸ್ಟೇಟಸ್ ಹಾಕಿದ್ದಕ್ಕೆ ಬೆಳಗಾವಿಯ ಕಾಗವಾಡ ಕ್ಷೇತ್ರದ ಬಿಜೆಪಿ ಶಾಸಕ ರಾಜು ಕಾಗೆ ಗ್ಯಾಂಗ್‍ನಿಂದ ಕಾಂಗ್ರೆಸ್ ಮುಖಂಡನ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿಯ ಉಗಾರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಜನವರಿ 01 ಹೊಸ ವರ್ಷದ ದಿನ ಬೆಳಗ್ಗೆ 9 ಗಂಟೆಗೆ ಬಿಜೆಪಿ ಶಾಸಕ ರಾಜು ಕಾಗೆ ಪುತ್ರಿ ಹಾಗೂ ಸಹೋದರನ ಗ್ಯಾಂಗ್ ಉಗಾರ ಗ್ರಾಮದ ಕಾಂಗ್ರೆಸ್ ಮುಖಂಡ ವಿವೇಕ್ ಶೆಟ್ಟಿ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಮನೆಗೆ ನುಗ್ಗಿ ಹಲ್ಲೆ ನಡೆಸಿದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ತಾಯಿ, ಪತ್ನಿ ಮತ್ತು ಗ್ರಾಮದ ಜನರ ಎದುರೇ ಮನಬಂದಂತೆ ಥಳಿಸಿದ್ದು, ಮನೆಯಿಂದ ಎಳೆದು ತಂದು ರಸ್ತೆಯಲ್ಲಿ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ. ಶಾಸಕ ರಾಜು ಕಾಗೆ ಪುತ್ರಿ ಪ್ರತೀಕ್ಷಾ, ವಿವೇಕ್ ಶೆಟ್ಟಿಯ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾಳೆ. ಅಲ್ಲದೆ ಗ್ರಾಮಸ್ಥರ ಮುಂದೆ ಥಳಿಸಿ ಕಾರಲ್ಲಿ ಎತ್ತಿಹಾಕಿಕೊಂಡು ಹೋಗಿ ಮತ್ತೆ ಥಳಿಸಲಾಗಿದೆ.

ಘಟನೆಯಿಂದ ವಿವೇಕ್ ಶೆಟ್ಟಿ ಎಡಗಾಲಿನ ಮೂಳೆ ಮುರಿತಕ್ಕೆ ಒಳಗಾಗಿದ್ದು, ಪ್ರಾಣ ಉಳಿಸಿಕೊಳ್ಳಲು ಮಹಾರಾಷ್ಟ್ರದ ಮೀರಜ್‍ನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದ್ರೆ ಮಾರಣಾಂತಿಕ ಹಲ್ಲೆ ನಡೆದಿದ್ದರೂ ವಿವೇಕ್ ಶೆಟ್ಟಿ ಕುಟುಂಬಸ್ಥರು ಈ ಬಗ್ಗೆ ಯಾವುದೇ ದೂರು ದಾಖಲಿಸಿಲ್ಲ.

ಈ ಘಟನೆ ನಡೆದು 9 ದಿನಗಳಾದ್ರೂ ಗಾಯಗೊಂಡ ವಿವೇಕ್ ಶೆಟ್ಟಿ ಇನ್ನೂ ಚೇತರಿಸಿಕೊಂಡಿಲ್ಲ. ಮಹಾರಾಷ್ಟ್ರದ ಮೀರಜ್‍ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎದ್ದು ಓಡಾಡಲು ಆಗದ ಪರಿಸ್ಥಿತಿಯಲ್ಲಿದ್ದಾರೆ.

ಫೇಸ್‍ಬುಕ್ ಸ್ಟೇಟಸ್ ಏನು?: ಬಿಜೆಪಿ ನಕಲಿ ಹಿಂದುತ್ವ ಪ್ರಚಾರ ಮಾಡುತ್ತಿದೆ. ಕಾಂಗ್ರೆಸ್ ಅಲ್ಪಸಂಖ್ಯಾತರ ಪರವಾಗಿದೆ. ಅಲ್ಪಸಂಖ್ಯಾತರನ್ನು ಬಿಜೆಪಿ ದೇಶದ್ರೋಹಿ ಎಂದು ಹೇಳುತ್ತಿತ್ತು. ಜೊತೆಗೆ ಟಿಪ್ಪು ಜಯಂತಿ ವಿರೋಧ ಮಾಡುತ್ತಿದ್ದರು. ಆದ್ರೆ ಈಗ ಚುನಾವಣೆ ಸಂದರ್ಭದಲ್ಲಿ ನಿಮ್ಮ ಹಿಂದುತ್ವ ಎಲ್ಲಿ ಹೋಯ್ತು. ಈ ಚುನಾವಣೆಯಲ್ಲಿ ಬಣ್ಣ ಬದಲಾಯಿಸುತ್ತಿದ್ದೀರಾ? ನಿಮಗೆ ಈಗ ಕೊಬ್ಬು ಹೆಚ್ಚಾಗಿದೆ. ಕ್ಷೇತ್ರದಲ್ಲಿ ನಿಮಗೆ ತಕ್ಕ ಪಾಠ ಕಲಿಸುವ ಸಮಯ ಬಂದಿದೆ. ಹಿಂದುತ್ವದ ಹೇಸರು ಹೇಳಿ ನೀವು ಚುನಾವಣೆಗೆ ಹೋದರೆ ಜನರು ನಿಮಗೆ ಘೇರಾವ್ ಹಾಕಿ ಚಪ್ಪಲಿ ಹಾರ ಹಾಕುವುದು ನಿಶ್ಚಿತ. ನಿರ್ಲಜ್ಜಂ ಸದಾ ಸುಖಿ ಅಂತ ವಿವೇಕ್ ಶೆಟ್ಟಿ ಫೇಸ್‍ಬುಕ್ ಸ್ಟೇಟಸ್ ಹಾಕಿದ್ದರು.

Comments are closed.