ಕರಾವಳಿ

ಮಂಗಳೂರು ಉತ್ತರ: ನಗರ ವ್ಯಾಪ್ತಿಯಲ್ಲಿ 900 ನಿವೇಶನ ರಹಿತರಿಗೆ ವಸತಿ ಸಂಕೀರ್ಣ

Pinterest LinkedIn Tumblr

ಮ೦ಗಳೂರು ಜನವರಿ 9 :ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರಕ್ಕೊಳಪಟ್ಟ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ನಿವೇಶನ ರಹಿತ ಸುಮಾರು 900 ಮಂದಿ ಅರ್ಹ ಫಲಾನುಭವಿಗಳಿಗೆ ಫ್ಲಾಟ್ ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ವಸತಿ ಒದಗಿಸುವ ಯೋಜನೆಯು ಪ್ರಗತಿಯಲ್ಲಿದೆ ಎಂದು ಶಾಸಕ ಬಿ.ಎ. ಮೊಹಿಯುದ್ದೀನ್ ಬಾವಾ ತಿಳಿಸಿದ್ದಾರೆ.

ಅವರು ಮಹಾನಗರಪಾಲಿಕೆಯಲ್ಲಿ ನಡೆದ ಉತ್ತರ ವಿಧಾನಸಭಾ ಕ್ಷೇತ್ರದ ನಗರ ಆಶ್ರಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸುರತ್ಕಲ್ ಇಡ್ಯಾ ಗ್ರಾಮದ ಸರ್ವೇ ನಂಬ್ರ 16ರಲ್ಲಿ ಕಾದಿರಿಸಿದ 3.86 ಎಕರೆ ಜಮೀನಿನಲ್ಲಿ ಜಿ ಪ್ಲಸ್ 3 ಮಾದರಿಯಲ್ಲಿ ವಸತಿ ಸಂಕೀರ್ಣ ನಿರ್ಮಿಸಿ ನಿವೇಶನ ರಹಿತ 600 ಫಲಾನುಭವಿಗಳಿಗೆ ವಿತರಿಸುವ ಸಲುವಾಗಿ ವಿಸ್ತೃತ ಯೋಜನಾ ವರದಿ(ಡಿಪಿ‌ಆರ್) ತಯಾರಿಸಲಾಗಿದೆ. ಅದೇ ರೀತಿ ಸುರತ್ಕಲ್ ಗ್ರಾಮದ 1.85 ಎಕರೆ ಜಮೀನಿನಲ್ಲಿ ಜಿ ಪ್ಲಸ್ 3 ಮಾದರಿಯ ವಸತಿ ಸಂಕೀರ್ಣ ನಿರ್ಮಿಸಿ ನಿವೇಶನ ರಹಿತ 300 ಫಲಾನುಭವಿಗಳಿಗೆ ವಿತರಿಸಲು ಅರ್ಹ ಫಲಾನುಭವಿಗಳನ್ನು ಈಗಾಗಲೇ ನಗರ ಆಶ್ರಯ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ. ಈ ಯೋಜನೆಯ ಡಿಪಿ‌ಆರ್ ಪ್ರಗತಿಯಲ್ಲಿದೆ ಎಂದು ಶಾಸಕರು ತಿಳಿಸಿದರು.

ಈ ಎರಡೂ ಯೋಜನೆಗಳ 900 ಫಲಾನುಭವಿಗಳಿಗೆ ಜಿ ಪ್ಲಸ್ 3 ಮಾದರಿಯ ವಸತಿ ಸಂಕೀರ್ಣ ಒದಗಿಸಲು ಈ ತಿಂಗಳ ಅಂತ್ಯದೊಳಗೆ ಫಲಾನುಭವಿಗಳಿಂದ ಒಪ್ಪಿಗೆ ಪತ್ರ ಪಡೆಯಲಾಗುವುದು ಎಂದು ಶಾಸಕ ಮೊಹಿದೀನ್ ಬಾವಾ ಹೇಳಿದರು.

ವಾಜಪೇಯಿ ನಗರ ನಿವೇಶನ ಯೋಜನೆಯಡಿ ಸುರತ್ಕಲ್ ಗ್ರಾಮದ ಸರ್ವೇ ಸಂಖ್ಯೆ 211/4ರಲ್ಲಿ ಲಭ್ಯವಿರುವ 1.95 ಎಕರೆ ಜಮೀನಿನಲ್ಲಿ ನಿವೇಶನ ರಹಿತ 18ಕೊರಗ ಸಮುದಾಯದ ಕುಟುಂಬಗಳಿಗೆ ತಲಾ 30×30 ಚದರ ಅಡಿಯ ನಿವೇಶನ ಮಂಜೂರು ಮಾಡಲಾಗುವುದು.

ಇದೇ ಯೋಜನೆಯಲ್ಲಿ 2016-17ನೇ ಸಾಲಿಗೆ 20 ಮಂದಿಗೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನಿವಾಸ್ ಯೋಜನೆಯಡಿ 16 ಫಲಾನುಭವಿಗಳಿಗೆ ಮಂಜೂರಾತಿ ನೀಡಲಾಗಿದೆ ಎಂದು ಶಾಸಕರು ಹೇಳಿದರು.

ಆಶ್ರಯ ಯೋಜನೆಯಲ್ಲಿ ಮನೆ ನಿರ್ಮಿಸಲು ಸಾಲ ಮರುಪಾವತಿ ಮಾಡಿರುವವರಿಗೆ ಹಾಗೂ ಆಶ್ರಯ ಸಾಲ ಮನ್ನಾ ಯೋಜನೆಯ ಫಲಾನುಭವಿಗಳಿಗೆ ಕೂಡಲೇ ಹಕ್ಕುಪತ್ರಗಳನ್ನು ವಿತರಿಸುವಂತೆ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಚಿಸಿದ ಶಾಸಕರು, ಫಲಾನುಭವಿಗಳಿಗೆ ಅನುಕೂಲವಾಗುವಂತೆ ಈ ನಿಟ್ಟಿನಲ್ಲಿ ಕ್ಷೇತ್ರದ 5 ಕಡೆ ಹಕ್ಕುಪತ್ರಗಳನ್ನು ವಿತರಿಸಲು ಕ್ರಮ ಕೈಗೊಳ್ಳಲು ತಿಳಿಸಿದರು.

ಸಭೆಯಲ್ಲಿ ಮಹಾನಗರಪಾಲಿಕೆ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್, ಆಶ್ರಯ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ್ ಕೋಡಿಕಲ್, ಜಲೀಲ್ ಕೃಷ್ಣಾಪುರ, ಅಧಿಕಾರಿಗಳು ಉಪಸ್ಥಿತರಿದ್ದರು.

Comments are closed.