ಕರಾವಳಿ

ಕುಂದಾಪುರ(ತೆಕ್ಕಟ್ಟೆ): ಕಾರುಗಳೆರಡರ ನಡುವೆ ಭೀಕರ ಅಪಘಾತ; ಓರ್ವ ಸಾವು; ಇಬ್ಬರು ಗಂಭೀರ

Pinterest LinkedIn Tumblr

ಕುಂದಾಪುರ: ವೇಗವಾಗಿ ಚಲಿಸಿ ಬಂದ ವ್ಯಾಗನರ್ ಕಾರೊಂದು ಡಿವೈಡರ್ ಏರಿ ಬಲಬದಿಗೆ ಚಲಿಸಿ ಆ ಕಡೆ ಸಾಗುತ್ತಿದ್ದ ಫಾರ್ಚ್ಯೂನಾರ್ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ ಇಬ್ಬರು ಗಂಭೀರವಾಗಿ ಗಾಯಗೊಂಡ ಭೀಕರ ಘಟನೆ ಕುಂದಾಪುರ ತಾಲೂಕಿನ ತೆಕ್ಕಟ್ಟೆ ಸಮೀಪದ ಕನ್ನುಕೆರೆ ಎಂಬಲ್ಲಿ ಭಾನುವಾರ ತಡರಾತ್ರಿ ನಡೆದಿದೆ.

ವ್ಯಾಗನರ್ ಕಾರಿನ ಹಿಂಬದಿಯಲ್ಲಿ ಕುಳಿತಿದ್ದ ಕೇರಳ ಮೂಲದ ಶಿಬು (33) ಮೃತಪಟ್ಟವರು. ಹಾಗೂ ಅವರ ಜೊತೆ ಕಾರಿನಲ್ಲಿದ್ದ ರಿಜೇಶ್ ಹಾಗೂ ಪ್ರಮೋದ್ ಎನ್ನುವವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಕಾರಿನಲ್ಲಿದ್ದ ಇನ್ನೋರ್ವನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

ಘಟನೆ ವಿವರ: ಕೇರಳ ಮೂಲದ ವ್ಯಾಗನರ್ ಕಾರು ಉಡುಪಿ ಕಡೆಯಿಂದ ವೇಗವಾಗಿ ಕುಂದಾಪುರದತ್ತ ಚಲಿಸಿ ಬರುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿದ ಕಾರು ಕನ್ನುಕೆರೆ ರಾಘವೇಂದ್ರ ಸ್ವಾಮೀ ಮಠದ ದಾರಿಯ ಎದುರು ಡಿವೈಡರ್ ಏರಿ ಬಲ ಬದಿ ರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಉಡುಪಿಯತ್ತ ಸಾಗುತ್ತಿದ್ದ ಫಾರ್ಚ್ಯೂನಾರ್ ಕಾರಿಗೆ ಡಿಕ್ಕಿಯಾಗಿದೆ. ವೇಗವಾಗಿ ಬಂದು ಡಿಕ್ಕಿಯಾದ ಪರಿಣಾಮ ವ್ಯಾಗನಾರ್ ಕಾರಿನ ಬಲ ಪಾರ್ಶ್ವ ಸಂಪೂರ್ಣ ನಜ್ಜುಗುಜ್ಜಾಗಿದ್ದು ಕಾರಿನಲ್ಲಿ ಸಿಲುಕಿಕೊಂಡ ಶಿಬು ಪ್ರಾಣಬಿಟ್ಟಿದ್ದಾರೆ.ಉಳಿದಂತೆ ಇನ್ನಿಬ್ಬರಿಗೆ ಗಂಭೀರ ಗಾಯಗಳಾಗಿದೆ. ಫಾರ್ಚೂನಾರ್ ಕಾರಿನಲ್ಲಿದ್ದವರಿಗೆ ಈ ಸಂದರ್ಭ ಸಣ್ಣಪುಟ್ಟ ಗಾಯಗಳಾಗಿದೆ. ಮಹಾರಾಷ್ಟ್ರ ಮೂಲದ ಪುಣೆಯ ಸುಮಿತ್ ಎನ್ನುವವರಿಗೆ ಸೇರಿದ ಫಾರ್ಚ್ಯೂನಾರ್ ಕಾರಿನಲ್ಲಿ ಅವರ ಕುಟುಂಬಸ್ಥರಿದ್ದು ಮಂಗಳೂರಿಗೆ ತೆರಳುತ್ತಿದ್ದರೆನ್ನಲಾಗಿದೆ.

ಭೀಕರ ಅಪಘಾತ- ಎಲ್ಲೆಲ್ಲೂ ನೆತ್ತರು..
ಮಧ್ಯರಾತ್ರಿಯ ಸುಮಾರಿಗೆ ನಡೆದ ಭೀಕರ ಅಪಘಾತ ಇದಾಗಿದ್ದು ಹೆದ್ದಾರಿ ಆಸುಪಾಸಿನಲ್ಲಿದ್ದವರಿಗೆ ಬಾರೀ ಪ್ರಮಾಣದ ಶಬ್ದ ಕೇಳಿಸಿ ಸಾರ್ವಜನಿಕರು ಇತ್ತ ದೌಡಾಯಿಸಿದ್ದರು. ಇದೇ ವೇಳೆ ವ್ಯಾಗನಾರ್ ಕಾರಿನಲ್ಲಿದ್ದವರು ನೋವಿನಲ್ಲಿ ಚೀರಾಡುತ್ತಿದ್ದುದಲ್ಲದೇ ಓರ್ವ ಸಾವನ್ನಪ್ಪಿದ್ದ. ಅಪಘಾತ ನಡೆದ ಸ್ಥಳದಲ್ಲಿ ಎಲ್ಲಿ ನೋಡಿದರೂ ರಕ್ತ ಕಲೆಗಳು ಗೋಚರಿಸುತ್ತಿದ್ದವು. ಫಾರ್ಚ್ಯೂನಾರ್ ಕಾರಿನ ನಜ್ಜುಗುಜ್ಜಾದ ಭಾಗದಲ್ಲಿ ಎರಡು ಕೈ ಬೆರಳುಗಳುಗಳು ಪತ್ತೆಯಾಗಿದ್ದು ಅಪಘಾತದ ಭೀಕರತೆಗೆ ಸಾಕ್ಷಿಯಾಗಿದೆ.

ಶೀಘ್ರ ಸ್ಪಂಧಿಸಿದ ತೆಕ್ಕಟ್ಟೆ ಫ್ರೆಂಡ್ಸ್….
ಅಪಘಾತ ನಡೆದ ಸುದ್ದಿ ತಿಳಿಯುತ್ತಲೇ ಕೂಡಲೇ ತೆಕ್ಕಟ್ಟೆ ಫ್ರೆಂಡ್ಸ್ ತೆಕ್ಕಟ್ಟೆ ಇದರ ಸದಸ್ಯರು ಸ್ಥಳಕ್ಕೆ ತಮ್ಮ ಆಂಬುಲೆನ್ಸ್ ವಾಹನದಲ್ಲಿ ಆಗಮಿಸಿ ಕಾರಿನಲ್ಲಿ ಸಿಕ್ಕಿಹಾಕಿಕೊಂಡವರನ್ನು ರಕ್ಷಿಸಿ ಶೀಘ್ರ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯುವಲ್ಲಿ ಸಹಕರಿಸುತ್ತಾರೆ. ತೆಕ್ಕಟ್ಟೆ ಫ್ರೆಂಡ್ಸ್ ಸದಸ್ಯರಾದ ಸಂತೋಷ್ ಶೆಟ್ಟಿ, ವಿನೋದ್ ದೇವಾಡಿಗ, ಸಂದೇಶ್ ಆಚಾರ್ಯ, ಸುದೀಪ್ ಶೆಟ್ಟಿ ಮೊದಲಾದವರು ಈ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ನೆರವಾಗುತ್ತಾರೆ.

ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಯೋಗೀಶ್ ಕುಂಭಾಸಿ

Comments are closed.