ಕರ್ನಾಟಕ

ಆದಿವಾಸಿಗಳ ಪರ ಧರಣಿಗೆ ಕೂತ ನಟ ಚೇತನ್

Pinterest LinkedIn Tumblr

15622243_1236229079803165_6802622454912453204_n

ಬೆಂಗಳೂರು: ಸಾಮಾಜಿಕ ನ್ಯಾಯದ ಬಗ್ಗೆ ತಮ್ಮ ಬದ್ಧತೆಯನ್ನು ಸದಾ ಎಚ್ಚರದಲ್ಲಿಟ್ಟುಕೊಂಡಿರುತ್ತಾರೆ ನಟ ಚೇತನ್ ಕುಮಾರ್. ಅವರು ಮಾಲೂರಿನ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಪಾಠ ಕೂಡ ಮಾಡುತ್ತಾರೆ. ಮತ್ತೀಗ ಕೊಡಗಿನ ಅರಣ್ಯಪ್ರದೇಶದಿಂದ ಆದಿವಾಸಿಗಳನ್ನು ಒಕ್ಕಲೆಬ್ಬಿಸಿರುವ ಅರಣ್ಯ ಇಲಾಖೆಯ ನಿರ್ಧಾರದ ವಿರುದ್ಧ ಕೂಡ ಪ್ರತಿಭಟಿಸಿದ್ದಾರೆ.

ಯೇಲ್ ವಿಶ್ವವಿದ್ಯಾಲಯದ ಪದವೀಧರ ಮತ್ತು ಫುಲ್ಬ್ರೈಟ್ ಪಂಡಿತ ಚೇತನ್, ಸರ್ಕಾರ ಆದಿವಾಸಿ ಸಮುದಾಯದ ಜನರನ್ನು ನಡೆಸಿಕೊಂಡಿರುವ ರೀತಿಗೆ ಅಸಮಾಧಾನ ವ್ಯಕ್ತಪಡಿಸುತ್ತಾರೆ “ಅವರ ಜೀವನ ಸ್ಥಿತಿ ದಯನೀಯವಾಗಿದೆ” ಎನ್ನುವುದಲ್ಲದೆ “ಕಾಫಿ ಎಸ್ಟೇಟ್ ಮಾಲೀಕರು ಕನಿಷ್ಠ ದಿನಗೂಲಿಯನ್ನು ನೀಡದೆ ಅವರನ್ನು ಕೆಟ್ಟದಾಗಿ ದುಡಿಸಿಕೊಳ್ಳುತ್ತಿದ್ದಾರೆ” ಎಂದು ಆರೋಪಿಸಡುತ್ತಾರೆ.

ಆದಿವಾಸಿಗಳು ಮೂಲ ನಿವಾಸಿಗಳು ಎಂದು ತಿಳಿಸುವ ಚೇತನ್ “ಅವರ ನಂತರವೇ ನಾವೆಲ್ಲಾ ಬಂದದ್ದು. ಈ ಭೂಮಿ ಅವರ ಹಕ್ಕು ಮತ್ತು ಈಗ ಅವರ ಮೂಲ ಹಕ್ಕುಗಳನ್ನು ನಿರಾಕರಿಸಲಾಗಿದೆ” ಎಂದಿದ್ದಾರೆ.

ಈ ಪ್ರತಿಭಟನೆ ಪ್ರಚಾರಕ್ಕಾಗಿ ಎಂದು ಕೆಲವರು ದೂರಿರುವುದರ ಬಗ್ಗೆ ಪ್ರತಿಕ್ರಿಯಿಸುವ ಚೇತನ್ “ಹೌದು ಇದು ಒಂದು ರೀತಿಯ ಪ್ರಚಾರವೇ. ಆದರೆ ಈ ಪ್ರಚಾರ ಜನಕ್ಕೆ ಸಹಾಯವಾಗುವುದಾದರೆ ಇದು ಸ್ಟಂಟ್ ಆಗುವುದಿಲ್ಲ ಬದಲಿಗೆ ಪ್ರಾಮಾಣಿಕ ಪ್ರಯತ್ನವಾಗುತ್ತದೆ. ನಾನು ಕಳೆದ 11 ವರ್ಷಗಳಿಂದಲೂ ಸಮಾಜಿಕ ಕಳಕಳಿಯ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇನೆ ಮತ್ತು ಅವುಗಳನ್ನು ನನ್ನಲ್ಲೇ ಇಟ್ಟುಕೊಂಡಿದ್ದೇನೆ” ಎನ್ನುತ್ತಾರೆ ಚೇತನ್.

ಹಲವು ಇತರ ಸಾಮಾಜಿಕ ಕಾರ್ಯಕರ್ತರ ಜೊತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡುವುದಾಗಿ ತಿಳಿಸುತ್ತಾರೆ ಚೇತನ್. ಅವರ ಬೇಡಿಕೆ ಕೇವಲ ಭೂಮಿಯಲ್ಲ ಬದಲಿಗೆ ಮಾನವ ಹಕ್ಕುಗಳನ್ನು ಉಲ್ಲಂಘಿಸಿರುವ ಪೊಲೀಸರು, ಸರ್ಕಾರಿ ಪ್ರತಿನಿಧಿಗಳು ಮತ್ತು ಅರಣ್ಯ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವ ಬೇಡಿಕೆ ಕೂಡ ಅವರದ್ದು. “ಯಾವುದೇ ಸೂರಿಲ್ಲದೆ, ಬಯಲಿನಲ್ಲಿ ಅವರು 13 ದಿನಗಳಿಂದ ವಾಸಿಸುತ್ತಿದ್ದಾರೆ” ಎನ್ನುವ ಚೇತನ್ ಅವರ ಹಕ್ಕುಗಳನ್ನು ದೊರಕಿಸಿಕೊಡುವವರೆಗೂ ಹೋರಾಟ ನಡೆಸುವುದಾಗಿ ಹೇಳಿದ್ದಾರೆ. “ನಾನು ಅವರನ್ನು ಭೇಟಿ ಮಾಡಿ ನಂತರ ಹಿಂದಿರುಗಿ ಯಾವುದೊ ಅದ್ದೂರಿ ರೆಸಾರ್ಟ್ ನಲ್ಲಿ ರಾತ್ರಿ ಕಳೆಯುವುದು ಸಲ್ಲ. ಅದು ನನ್ನ ಸಿದ್ದಾಂತಕ್ಕೆ ವಿರೋಧ” ಎನ್ನುತ್ತಾರೆ ನಟ ಚೇತನ್.

(ಕನ್ನಡಪ್ರಭ)

Comments are closed.