ಪ್ರಮುಖ ವರದಿಗಳು

2500 ರೂಪಾಯಿಗೆ ವಿಮಾನಯಾನ; ಜನಸಾಮಾನ್ಯರಿಗೆ ವಿಮಾನ ಸಂಚಾರ ಭಾಗ್ಯ ಒದಗಿಸಲು ಮುಂದಾದ ಕೇಂದ್ರ ಸರ್ಕಾರ

Pinterest LinkedIn Tumblr

flight

ನವದೆಹಲಿ: ಒಂದು ಗಂಟೆ ಅವಧಿಯಲ್ಲಿ ಮುಗಿಯಬಹುದಾದ ವಿಮಾನ ಪ್ರಯಾಣಕ್ಕೆ ಗರಿಷ್ಠ ₹ 2500 ಪ್ರಯಾಣ ದರ ನಿಗದಿ ಮಾಡಿ ಜನಸಾಮಾನ್ಯರಿಗೆ ವಿಮಾನ ಸಂಚಾರ ಭಾಗ್ಯ ಒದಗಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ದೇಶದ ಸಣ್ಣ ಪುಟ್ಟ ನಗರಗಳಿಗೆ ವಿಮಾನಯಾನ ಸಂಪರ್ಕ ಕಲ್ಪಿಸುವ ಸಲುವಾಗಿ ಉಡಾನ್‌ ಯೋಜನೆಯಡಿ ಕೇಂದ್ರ ಸರ್ಕಾರ ಈ ಸಂಚಾರ ಭಾಗ್ಯವನ್ನು ನೀಡಲಾಗಿದೆ.

ಈ ಯೋಜನೆಯಡಿಯಲ್ಲಿ ದೇಶದ ಪ್ರಮುಖ ಮಾರ್ಗಗಳಲ್ಲಿ ಪ್ರಯಾಣಿಸುವ ವಿಮಾನ ಪ್ರಯಾಣಿಕರಿಗೆ ಅಲ್ಪ ಪ್ರಮಾಣದ ತೆರಿಗೆ ಹೇರಲು ಸರ್ಕಾರ ನಿರ್ಧರಿಸಿದೆ. ಹೀಗಾಗಿ ದೇಶೀಯ ಮಾರ್ಗಗಳಲ್ಲಿ ಪ್ರಯಾಣಿಸುವವರು ವಿಮಾನ ಪ್ರಯಾಣಕ್ಕೆ ಒಂದಿಷ್ಟು ಹೆಚ್ಚು ಮೊತ್ತವನ್ನು ಪಾವತಿಸಬೇಕಾಗುತ್ತದೆ. ಆದರೆ ತೆರಿಗೆಯ ಪ್ರಮಾಣ ಎಷ್ಟು ಎಂಬುದು ತೀರ್ಮಾನವಾಗದೇ ಇದ್ದರೂ ತೆರಿಗೆ ಮೊತ್ತ ಸಾಧ್ಯವಾದಷ್ಟೂ ಕಡಿಮೆ ಪ್ರಮಾಣದಲ್ಲಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದಾಗ್ಯೂ ತೆರಿಗೆ ಹೇರುವ ಸರ್ಕಾರದ ನಿರ್ಧಾರಕ್ಕೆ ವಿಮಾನ ಕಂಪನಿಗಳು ಆಕ್ಷೇಪ ವ್ಯಕ್ತಪಡಿಸಿವೆ.

ಏನಿದು ಯೋಜನೆ?: ಉಡಾನ್‌ (ಉಡೇ ದೇಶ್‌ ಕಾ ಆಮ್‌ ನಾಗರಿಕ್‌ – ಜನಸಾಮಾನ್ಯರ ವಿಮಾನ ಹಾರಾಟಕ್ಕಾಗಿ) ಯೋಜನೆಯಡಿ ಕೇಂದ್ರ ಸರ್ಕಾರ, ಬಳಕೆಯಾಗದ ಅಥವಾ ಕಡಿಮೆ ಬಳಕೆಯಾಗುತ್ತಿರುವ ವಿಮಾನ ನಿಲ್ದಾಣಗಳನ್ನು ಗುರುತಿಸಲಿದೆ. ದೇಶದಲ್ಲಿ ಬಳಕೆಯಾಗದ 394 ಮತ್ತು ಕಡಿಮೆ ಬಳಕೆಯಾಗುತ್ತಿರುವ 16 ವಿಮಾನ ನಿಲ್ದಾಣಗಳಿವೆ.

ಈ ಯೋಜನೆಯಲ್ಲಿ ಸಣ್ಣ ನಗರಗಳ ಮಧ್ಯೆ 9 ರಿಂದ 40 ಸೀಟುಗಳಿರುವ ಪುಟ್ಟ ವಿಮಾನಗಳು ಹಾರಾಟ ನಡೆಸಲಿವೆ. ಈ ಸೀಟುಗಳಲ್ಲಿ ಅರ್ಧದಷ್ಟು ಸೀಟುಗಳಿಗೆ ಮಾತ್ರ ಪ್ರಯಾಣ ದರ ಗರಿಷ್ಠ ರು. 2.500 ಆಗಲಿದೆ. ಇನ್ನುಳಿದ ಸೀಟುಗಳಿಗೆ ನಿಗದಿತ ಪ್ರಯಾಣ ದರ ನೀಡಬೇಕಾಗುತ್ತದೆ. ಬಳಕೆಯಾಗದ ಅಥವಾ ಕಡಿಮೆ ಬಳಕೆಯಾಗುತ್ತಿರುವ ವಿಮಾನ ನಿಲ್ದಾಣಗಳು ಈ ಯೋಜನೆಯಡಿ ಬರುತ್ತವೆ. ಹೆಲಿಕಾಪ್ಟರ್ ಸೇವೆಗಳು ಕೂಡಾ ಈ ಯೋಜನೆಯಡಿಯಲ್ಲಿಯೇ ಬರಲಿದೆ.

ಉಡಾನ್ ಪ್ರಯಾಣ ದರ ಲೆಕ್ಕಾಚಾರ ಹೇಗೆ?
ಪ್ರಯಾಣದ ಆರಂಭ ಸ್ಥಾನದಿಂದ ಗಮ್ಯಸ್ಥಾನದ ವರೆಗಿನ ಅಂತರವನ್ನು ಗಣನೆಗೆ ತೆಗೆದುಕೊಂಡು ಪ್ರಯಾಣದರದ ಲೆಕ್ಕಾಚಾರ ಮಾಡಲಾಗುತ್ತದೆ. ಉದಾಹರಣೆಗೆ 476-500 ಕಿಮೀ ಪ್ರಯಾಣಕ್ಕೆ ₹ 2500 ಪ್ರಯಾಣ ದರ ನಿಗದಿಯಾದರೆ 800 ಕಿ.ಮೀ ಮತ್ತು ಅದಕ್ಕಿಂತ ಹೆಚ್ಚು ದೂರದ ಪ್ರಯಾಣಕ್ಕೆ ಗರಿಷ್ಠ ₹ 3,500 ಪ್ರಯಾಣ ನಿಗದಿ ಪಡಿಸಲಾಗುವುದು.

ಉಡಾನ್‌ ಯೋಜನೆಯಡಿ ಮೊದಲ ವಿಮಾನ 2017ರ ಜನವರಿಯಿಂದ ಹಾರಾಟ ಆರಂಭಿಸುವ ನಿರೀಕ್ಷೆ ಇದೆ. ಇಂತಹ ಯೋಜನೆ ವಿಶ್ವದಲ್ಲೇ ಮೊದಲು ಎಂದು ನಾಗರಿಕ ವಿಮಾನಯಾನ ಸಚಿವ ಅಶೋಕ್‌ ಗಜಪತಿ ರಾಜು ಮತ್ತು ಹೇಳಿದ್ದಾರೆ.

Comments are closed.