
ಮುಂಬೈ: ಗಂಡನಿಗಿಂತ ಹೆಚ್ಚು ದುಡಿಯುವ ಹೆಂಡತಿಯರ ಬಗ್ಗೆ ಅಲ್ಲಿ ಇಲ್ಲಿ ಕೇಳಿರುತ್ತೇವೆ. ಇಂಥದ್ದೇ ಅಂತರ ಸೆಲೆಬ್ರಿಟಿಗಳ ಮಧ್ಯೆ ಇದೆ. ದಾಂಪತ್ಯಕ್ಕೆ ಕಾಲಿಡಲಿರುವ ದೀಪಿಕಾ- ರಣವೀರ್‌ರಿಂದ ಹಿಡಿದು ಈಗಾಗಲೇ ಸಂಸಾರದ ದಾರಿಯಲ್ಲಿರುವ ಸಾನಿಯಾ- ಶೋಯೆಬ್ ತನಕವೂ ಈ ಅಂತರ ಕಾಣಿಸುತ್ತದೆ.
ರಣವೀರ್ ಮೀರಿಸಿದ ದೀಪಿಕಾ
ದೀಪಿಕಾ ಪಡುಕೋಣೆ ತಲೆಮೇಲೊಂದು ಗರಿ ಮೂಡಿದೆ. ಅತಿಹೆಚ್ಚು ಸಂಭಾವನೆ ಪಡೆಯುವ ವಿಶ್ವದ 10 ನಟಿಯರಲ್ಲಿ ನಮ್ಮ ಮಸ್ತಾನಿಯೂ ಒಬ್ಬಳೆನ್ನುವುದು ಹೆಮ್ಮೆ. ಇದನ್ನು ಕೇಳಿ ಕಂಗನಾಳಿಗೋ, ಕರೀನಾಗೋ ಹೊಟ್ಟೆ ಚುರುಕ್ ಎಂದಿದ್ದರೆ ಸುಮ್ಮನಾಗಬಹುದಿತ್ತು. ದೀಪಿಕಾಳ ಏಳ್ಗೆ ಇದೀಗ ಮುಜುಗರ ತಂದಿರೋದು ರಣವೀರ್ ಸಿಂಗ್‌ಗಂತೆ!

‘ಫೋರ್ಬ್ಸ್’ ಮುಂದಿಟ್ಟ ಪಟ್ಟಿ ಪ್ರಕಾರ, ದೀಪಿಕಾಳ ವಾರ್ಷಿಕ ಮೌಲ್ಯವೇ ₹ 66 ಕೋಟಿಗೂ ಅಧಿಕ. ರಣವೀರ್ ಸಿಂಗ್‌ನ ವಾರ್ಷಿಕ ದುಡಿಮೆ 60 ಕೋಟಿ ಸಮೀಪಿಸುವುದು ಕಷ್ಟ. ಗಳಿಕೆಯಲ್ಲಿ ಭಾವಿಪತ್ನಿಯದ್ದೇ ಮೇಲುಗೈ ಆಗುವುದರಿಂದ ರಣವೀರ್ ತಮ್ಮ ಕೆರಿಯರ್ ಅನ್ನು ಸುಧಾರಿಸಿಕೊಳ್ಳುವ ಬಗ್ಗೆ ಸೀರಿಯಸ್ಸಾಗಿಯೇ ಯೋಚಿಸುತ್ತಿದ್ದಾರಂತೆ.
ಹಾಗಂತ ರಣವೀರ್ ಸಿಂಗ್ ಸುಮ್ಮನೆ ಕುಳಿತಿಲ್ಲ. ‘ಮೇಕ್ ಮೈ ಟ್ರಿಪ್’, ‘ಸೆಟ್‌ವೆಟ್’ನಂಥ ಜಾಹೀರಾತುಗಳಲ್ಲಿ ಬಿಡುವಿಲ್ಲದೆ ದುಡಿಯುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ದೀಪಿಕಾ ಪಡುಕೋಣೆಯ ಜನಪ್ರಿಯತೆ ಹಾಲಿವುಡ್ ತನಕ ತಲುಪಿದೆ. ಅಮೆರಿಕದ ಮ್ಯಾಗಜಿನ್‌ಗಳ ಮುಖಪುಟಗಳಲ್ಲೂ ಕಾಣಿಸುತ್ತಾ, ಹಿಂದಿಯ ಒಂದೊಂದು ಸಿನಿಮಾಕ್ಕೆ ₹ 12ಕೋಟಿ ಸಂಭಾವನೆ ಪಡೆಯುತ್ತಾ ಮೇಲೇರುತ್ತಲೇ ಇದ್ದಾರೆ. ಪ್ರತಿ ಚಿತ್ರಕ್ಕೆ 10ರಿಂದ 14 ಕೋಟಿ ರುಪಾಯಿ ಸಂಭಾವನೆ ಪಡೆಯುವ ರಣವೀರ್ ವರ್ಷದಲ್ಲಿ ಒಪ್ಪಿಕೊಳ್ಳುವ ಸಿನಿಮಾಗಳೂ ಬಹಳ ಕಡಿಮೆ. ಇವೆಲ್ಲ ಕಾರಣಗಳಿಂದ ಬಾಜೀರಾವ್‌ನ ಸಂಗಾತಿ ಸಿರಿವಂತೆ ಆಗಿದ್ದಿರಬಹುದು.
ಬಿಡಿ, ಇವರಿಗೆ ಇನ್ನೂ ಮದುವೆಯೇ ಆಗಿಲ್ಲ. ಆದರೆ, ಮದುವೆಯಾದ ಕೆಲವು ಜೋಡಿಯಲ್ಲೂ ಗಂಡನಿಗಿಂತ ಹೆಂಡತಿಯೇ ಹೆಚ್ಚು ಸಂಪಾದಿಸೋದನ್ನು ನಾವು ಕಾಣಬಹುದು. ಸಿನಿಮಾ ಅಲ್ಲದೆ ಅದರ ಹೊರತಾಗಿಯೂ ಸೆಲೆಬ್ರಿಟಿಗಳಲ್ಲಿ ಈ ಅಂತರ ಇದ್ದಿದ್ದೇ.
ಸಾನಿಯಾ ಮಿರ್ಜಾ- ಶೋಯೆಬ್ ಮಲ್ಲಿಕ್
ಪಾಕ್ ಕ್ರಿಕೆಟಿಗನ ಕೈಹಿಡಿದ ಸಾನಿಯಾ ಮಿರ್ಜಾಗೆ ತನ್ನ ಗಂಡ ಅಷ್ಟು ಫೇಮಸ್ಸಲ್ಲ ಅಂತ ಇವತ್ತಿಗೂ ಗೊತ್ತು. ಶೋಯೆಬ್‌ನ ದುಡಿಮೆಯೂ ಕಡಿಮೆ ಅನ್ನೋದೂ ತಿಳಿದಿದೆ. ಟೆನಿಸ್ ಡಬಲ್ಸ್‌ನ ಈ ನಂ.1 ರಾಣಿಯ ಒಟ್ಟಾರೆ ಆಸ್ತಿಮೌಲ್ಯ ಅಂದಾಜು ₹ 165 ಕೋಟಿ. ಪ್ರಶಸ್ತಿಗಳಿಂದಲೇ ಈಕೆ ಬಾಚಿರೋದು ₹ 41.80 ಕೋಟಿಯನ್ನು!

ಈಕೆಯ ವಾರ್ಷಿಕ ವರಮಾನವೇ ₹ 9 ಕೋಟಿಯಿದೆ. ಹಲವು ಬ್ರ್ಯಾಂಡ್ ಉತ್ಪನ್ನಗಳಿಗೆ ರಾಯಭಾರಿಯೂ ಆಗಿ, ಖಾಸಗಿ ಕಾರ್ಯಕ್ರಮಗಳಿಗೆ ಒಳ್ಳೆಯ ಗೌರವಧನವನ್ನೇ ಪಡೆಯುತ್ತಿದ್ದಾರೆ ಸಾನಿಯಾ. ಆದರೆ, ಇತ್ತೀಚೆಗೆ ಪಿಸಿಬಿ ಪ್ರಕಟಿಸಿರುವಂತೆ ಶೋಯೆಬ್ ಮಲ್ಲಿಕ್ ವಾರ್ಷಿಕವಾಗಿ ಪಡೆಯುತ್ತಿರೋದು ಕೇವಲ ₹ 2.6 ಕೋಟಿ! ಹೇಳಿಕೊಳ್ಳುವಂಥ ಜಾಹೀರಾತುಗಳೂ ಶೋಯೆಬ್ ಬಳಿ ಬರುತ್ತಿಲ್ಲ. ಒಟ್ಟಾರೆ ಆಸ್ತಿಮೌಲ್ಯ 120 ಕೋಟಿಯ ಆಸುಪಾಸು.

ಅಭಿಷೇಕ್ ಬಚ್ಚನ್- ಐಶ್ವರ್ಯಾ ರೈ
ಬಚ್ಚನ್ ಪುತ್ರನಿಗಿಂತ ಹೆಚ್ಚು ಜನಪ್ರಿಯತೆ ಇರುವ ಐಶ್ವರ್ಯಾ, ಗಂಡನಿಗಿಂತ ಅಧಿಕ ಆಸ್ತಿಮೌಲ್ಯ ಹೊಂದಿದವರು. ಒಂದು ಕಾಲದಲ್ಲಿ ಅಭಿಷೇಕ್ ಬಚ್ಚನ್‌ಗಿಂತ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ನಟಿಯ ಈಗಿನ ಗಳಿಕೆ ಒಂದು ಸಿನಿಮಾಕ್ಕೆ ₹ 3-4 ಕೋಟಿಗೆ ಬಂದಿರಬಹುದು. ಆದರೆ, ಈಕೆಯ ಒಟ್ಟು ಆಸ್ತಿಮೌಲ್ಯವೇ ₹ 233 ಕೋಟಿ. ಇನ್ನು ಅಭಿಷೇಕ್ ₹ 200 ಕೋಟಿಯ ಒಡೆಯ. ಐಶ್ವರ್ಯಾ ಈಗಲೂ ಹಲವು ಸೌಂದರ್ಯ ಉತ್ಪನ್ನಗಳಿಗೆ ರಾಯಭಾರಿ ಆಗಿಯೂ, ವರ್ಷಕ್ಕೆರಡು ಸಿನಿಮಾದಂತೆ ಮರಳಿ ಫಾರ್ಮ್‌ಗೆ ಬರಲೆತ್ನಿಸುತ್ತಿದ್ದಾರೆ. ‘ಧೂಮ್’ನ ಹೊರತಾಗಿ ಅಭಿಷೇಕ್‌ಗೆ ಗುರುತಿಸಿಕೊಳ್ಳಲು ಸಾಧ್ಯವಾಗ್ತಿಲ್ಲ ಎನ್ನುವುದೂ ಸತ್ಯವೇ. ಅಭಿಷೇಕ್ ಪ್ರತಿ ಸಿನಿಮಾಕ್ಕೆ ಅಪ್ಪನಿಗಿಂತ (₹ 18-20 ಕೋಟಿ) ಕಡಿಮೆ ಸಂಭಾವನೆ ಹೊಂದಿದ್ದಾರೆ. ಅಭಿಯ ಸಂಭಾವನೆ ₹ 15 ಕೋಟಿಯ ಒಳಗೆ!

ಬಿಪಾಶಾ ಬಸು- ಕರಣ್‌ಸಿಂಗ್ ಗ್ರೋವರ್
ಇತ್ತೀಚೆಗಷ್ಟೇ ಮದುವೆಯಾದ ಜೋಡಿಯಿದು. ಬಿಪಾಶಾಗೆ ಮುಂಬೈನಲ್ಲಿ 3 ಲಕ್ಷುರಿ ಮನೆ, ಕೋಲ್ಕತ್ತಾದಲ್ಲಿ ಒಂದು ಸುಂದರ ಮನೆಯಿದೆ. ಕೃಷ್ಣಸುಂದರಿ ಕೈಹಿಡಿದಿರುವ ಕರಣ್ ಅಷ್ಟು ಸಿರಿವಂತನೇನಲ್ಲ. ಬಿಪಾಶಾ ಒಟ್ಟಾರೆ ₹ 100 ಕೋಟಿ ಆಸ್ತಿಮೌಲ್ಯ ಹೊಂದಿದ್ದಾರೆ. ಪ್ರತಿ ಸಿನಿಮಾಕ್ಕೆ ₹ 2-3ಕೋಟಿ ಪಡೆಯುತ್ತಾರೆ. ಆದರೆ, ಕರಣ್‌ನ ಒಟ್ಟಾರೆ ಆಸ್ತಿಮೌಲ್ಯ ಕೇವಲ ₹ 13 ಕೋಟಿಯಷ್ಟೇ!
ಸ್ಫುರದ್ರೂಪಿ ಗಾಯಕಿ ಶ್ರೇಯಾ ಘೋಷಲ್ ಹಲವು ಹಿಟ್ ಸಿನಿಮಾಗಳಿಗೆ ಹಾಡಿದವರು. ಒಂದು ಹಾಡಿಗೆ ಇವರು ಪಡೆಯುವುದು 18-20 ಲಕ್ಷ ರುಪಾಯಿ. ಇವರ ಒಟ್ಟಾರೆ ಆಸ್ತಿಮೌಲ್ಯವೇ 20 ಕೋಟಿಯನ್ನೂ ಮೀರುತ್ತದೆ. ಎಲೆಕ್ಟ್ರಾನಿಕ್ ಎಂಜಿನಿಯರ್ ಆಗಿರುವ ಪತಿ ಶೈಲಾದಿತ್ಯ ಮುಖ್ಯೋಪಧ್ಯಾಯ ‘ರಸಿಲಾಂಟ್ ಟೆಕ್’ ಎಂಬ ಕಂಪನಿಯನ್ನು ಆರಂಭಿಸಿದ್ದೂ ಇದಿನ್ನೂ ಗಳಿಕೆಯ ದಾರಿ ಹಿಡಿಯಬೇಕಿದೆ.
ಫರ್ಹಾ ಖಾನ್ ಮತ್ತು ಶಿರೀಷ್ ಕುಂದ್ರಾ ಜೋಡಿಯ ಕತೆಯೂ ಅಷ್ಟೇ. ಒಂದು ಸಿನಿಮಾ ನಿರ್ದೇಶಿಸಲು ಫರ್ಹಾ ಖಾನ್ ಪಡೆಯುವುದು 10-15 ಕೋಟಿ ರುಪಾಯಿ. ಒಂದು ಹಾಡಿಗೆ ಕೊರಿಯೊಗ್ರಾಫಿ ಮಾಡಲು ₹ 20-30ಲಕ್ಷ ಪಡೆಯುತ್ತಾರೆ. ಫರ್ಹಾ ಗಂಡ ಶಿರೀಶ್ ಮೂರೋ ನಾಲ್ಕು ಸಿನಿಮಾ ನಿರ್ದೇಶಿಸಿದ್ದಾರೆ. ಅವೆಲ್ಲವೂ ಬಾಕ್ಸ್ ಆಫೀಸಿನಲ್ಲಿ ತೋಪೆದ್ದು ಹೋಗಿವೆ.
Comments are closed.