ಪ್ರಮುಖ ವರದಿಗಳು

ನೀವು 500 ರೂ. ಕೊಟ್ಟು ಈ ಜೈಲಿಗೆ ಹೋಗಿ…ಇಲ್ಲಿದೆ ನಿಮಗೆ ಭವ್ಯ ಸ್ವಾಗತ, ಒಂದು ದಿನ ವಾಸ್ತವ್ಯ!

Pinterest LinkedIn Tumblr

jail

ತೆಲಂಗಾಣದ ಮೇದಕ್ ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರು ಈಗ ವಸಾಹತುಶಾಹಿ ಕಾಲದ ಜೈಲಿಗೆ ಭೇಟಿ ನೀಡಿ ರೂ. 500 ಶುಲ್ಕ ತೆತ್ತು ಒಂದು ದಿನ ತಂಗುವ ಮೂಲಕ ಜೈಲಿನ ಅನುಭವ ಪಡೆದುಕೊಳ್ಳಬಹುದು.

ಸಂಗರೆಡ್ಡಿಯಲ್ಲಿರುವ 220 ವರ್ಷ ಹಳೇ ಜಿಲ್ಲಾ ಕೇಂದ್ರ ಜೈಲನ್ನು ಈಗ ಮ್ಯೂಸಿಯಂ ಆಗಿ ಬದಲಿಸಲಾಗಿದೆ. ಹೊಸ ಯೋಜನೆಯೊಂದರಲ್ಲಿ ಇಲ್ಲಿ 24 ಗಂಟೆಗಳ ಬಂಧನದ ಅನುಭವವನ್ನು ಪ್ರವಾಸಿಗರಿಗೆ ನೀಡಲಾಗುತ್ತಿದೆ. ಕಂಬಿ ಹಿಂದೆ ಕಳೆಯುವ ಅನುಭವವನ್ನು ಜನರಿಗೆ ಕೊಡಲೆಂದು ಜೈಲು ಇಲಾಖೆ ಈ ಯೋಜನೆಯನ್ನು ಆರಂಭಿಸಿದೆ. ಜೈಲಿನಲ್ಲಿ ತಂಗಿರುವ ಸಂದರ್ಭದಲ್ಲಿ ಅತಿಥಿಗಳಿಗೆ ಖಾದಿಯಿಂದ ತಯಾರಾದ ಜೈಲಿನ ಸಮವಸ್ತ್ರವನ್ನು, ಸ್ಟೀಲಿನ ಊಟದ ತಟ್ಟೆ ಮತ್ತು ಗ್ಲಾಸ್, ಮಗ್ ಮತ್ತು ತೊಳೆಯುವ ಸಾಬೂನು, ಸ್ನಾನದ ಸಾಬೂನು, ಹಾಸಿಗೆ ಮತ್ತು ಇತರ ಸೌಲಭ್ಯಗಳನ್ನು ರಾಜ್ಯದ ಸಾಮಾನ್ಯ ಜೈಲಿನಲ್ಲಿ ಸಿಗುವಂತೆಯೇ ಕೊಡಲಾಗುವುದು. ಇದಕ್ಕೆ ಹೆಚ್ಚುವರಿಯಾಗಿ ಒಂದು ಫ್ಯಾನ್ ಕೂಡ ಕೋಣೆಯಲ್ಲಿರುತ್ತದೆ.

ಜೈಲಿನ ಡೆಪ್ಯುಟಿ ಸುಪರಿಂಟೆಂಡೆಂಟ್ ಲಕ್ಷ್ಮೀ ನರಸಿಂಹ ಪ್ರಕಾರ ಈವರೆಗೆ ಯಾವುದೇ ಪ್ರವಾಸಿಗರೂ ಈ ಸೌಲಭ್ಯ ಬಳಸಿಕೊಂಡಿಲ್ಲ. ಜೈಲಿನಲ್ಲಿ ಪ್ರವಾಸಿಗರಿಗೆ ಸೂಕ್ತ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸಾಧ್ಯವಾಗುವಂತೆ ಈ ಕೊಡುಗೆ ಪಡೆಯಲು ಮೊದಲೇ ಅನುಮತಿ ಪಡೆದಿರಬೇಕು. ಜೈಲಿನಲ್ಲಿ ಕೈದಿ ಅನುಭವ ಪಡೆಯಲು ಹೋದ ಪ್ರವಾಸಿಗರಿಗೆ ಜೈಲಿನಲ್ಲಿ ಸಿಗುವಂತೆಯೇ ಚಹಾ, ಊಟ ಮತ್ತು ಇತರ ತಿಂಡಿಗಳು ಸಿಗಲಿವೆ. ಚಹಾವನ್ನು ಹಳೇ ಜೈಲಿನಲ್ಲೇ ತಯಾರಿಸಲಾಗುವುದು. ಊಟದಲ್ಲಿ ಚಪಾತಿ, ಅನ್ನ, ರಸಂ, ಬಟಾಣಿ, ದಾಲ್, ಸಾಂಬಾರ್ ಮತ್ತು ಮೊಸರು ಇರಲಿದೆ. ಅವುಗಳನ್ನು ಸಂಗರೆಡ್ಡಿ ಪಟ್ಟಣದ ಹೊರವಲಯದಲ್ಲಿರುವ ಖಂಡಿ ಗ್ರಾಮದ ಹೊಸ ಜಿಲ್ಲಾ ಜೈಲಿನಿಂದ ಇಲ್ಲಿಗೆ ತರಲಾಗುವುದು. ಪ್ರವಾಸಿ ಕೈದಿಗಳಿಗೆ ಕೆಲಸದ ವೇಳಾಪಟ್ಟಿಯೇನೂ ಇರುವುದಿಲ್ಲ. ಆದರೆ ಅವರು ತಮ್ಮ ಸಾಲುಮನೆಗಳನ್ನು (ಬಾರಾಕ್) ಸ್ವಚ್ಛ ಮಾಡಬೇಕು. ಜೈಲಿನಲ್ಲಿದ್ದಾಗ ಗಿಡಗಳನ್ನು ನೆಡಬಹುದು.

ಜಿಲ್ಲಾ ಕೇಂದ್ರ ಜೈಲನ್ನು 1796ರಲ್ಲಿ ಹೈದರಾಬಾದ್ ರಾಜ್ಯದ ನಿಜಾಮರ ಆಡಳಿತಾವಧಿಯಲ್ಲಿ ಸಲಾರ್ ಜಂಗ್ 1 ಕಟ್ಟಿಸಿದ್ದ. ಪಾರಂಪರಿಕ ತಾಣವಾದ ಈ ಜೈಲು ಸುಮಾರು ಮೂರು ಎಕರೆ ಪ್ರದೇಶಗಳಲ್ಲಿ ಹರಡಿಕೊಂಡಿದೆ. ಇದರಲ್ಲಿ ಜೈಲು ಕಟ್ಟಡವೇ ಒಂದು ಎಕರೆ ಜಾಗದಲ್ಲಿದೆ. ಪುರುಷ ವಿಭಾಗದಲ್ಲಿ ಒಂಭತ್ತು ಸಾಲುಮನೆಗಳು ಮತ್ತು ಮಹಿಳಾ ವಿಭಾಗದಲ್ಲಿ ಒಂದು ಸಾಲುಮನೆ ಇದೆ. ಪುರಾತನ ಸೌಲಭ್ಯವನ್ನು 216 ವರ್ಷಗಳ ಕಾಲ ಬಳಸಿದ ಮೇಲೆ ಹೊಸ ಜೈಲನ್ನು ಕಟ್ಟಲಾಗಿದ್ದು, 2012ರಲ್ಲಿ ಕೈದಿಗಳನ್ನು ಅಲ್ಲಿಗೆ ಸ್ಥಳಾಂತರಿಸಲಾಗಿದೆ. ಹಳೇ ಜೈಲನ್ನು ನಂತರ ಮ್ಯೂಸಿಯಂ ಆಗಿ ಬದಲಿಸಲಾಗಿದೆ ಮತ್ತು ಇದೇ ವರ್ಷ ಜೂನಿನಲ್ಲಿ ಸಾರ್ವಜನಿಕರಿಗೆ ತೆರೆಯಲಾಗುವುದು. ಮ್ಯೂಸಿಯಂನಲ್ಲಿ ಈ ಜೈಲಿನಲ್ಲಿ ಬಂಧನದಲ್ಲಿದ್ದ ಪ್ರಮುಖ ವ್ಯಕ್ತಿಗಳ ಇತಿಹಾಸವಿರಲಿದೆ ಮತ್ತು ಹಲವಾರು ಪುರಾತನ ವಸ್ತುಗಳು, ಕಲಾಕೃತಿಗಳು ಮತ್ತು ನಿಜಾಮರ ಕಾಲದ ಜೈಲಿನ ಇತಿಹಾಸ ಸೂಚಿಸುವ ವಸ್ತುಗಳನ್ನೂ ಪ್ರದರ್ಶನಕ್ಕೆ ಇಡಲಾಗುವುದು.

ಸದ್ಯಕ್ಕೆ 15-20 ವ್ಯಕ್ತಿಗಳು ನಿತ್ಯವೂ ಜೈಲು ಮ್ಯೂಸಿಯಂಗೆ ಭೇಟಿ ನೀಡುವ ನಿರೀಕ್ಷೆ ಇದೆ. ಪ್ರವಾಸಿಗರ ಸಂಖ್ಯೆಯನ್ನು ಏರಿಸಲು ಇಲಾಖೆಯು ತೆಲಂಗಾಣ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಕಾರ್ಯಪಟ್ಟಿಯಲ್ಲಿ ಮ್ಯೂಸಿಯಂ ಭೇಟಿಯನ್ನೂ ಸೇರಿಸಲು ಯೋಜಿಸುತ್ತಿದೆ. ಅಲ್ಲದೆ ಜೈಲು ಇಲಾಖೆಯ ತಂಡವೊಂದು ಇಲ್ಲಿ ಮಕ್ಕಳ ಉದ್ಯಾನವನ ಮತ್ತು ಆಯುರ್ವೇದಿಕ್ ಗ್ರಾಮವನ್ನು ಆರಂಭಿಸುವ ಸಾಧ್ಯತೆಯನ್ನು ಪರಿಶೀಲಿಸುತ್ತಿದೆ.

Comments are closed.