ಚೆನ್ನೈ: ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಪ್ರಕರಣ ಸಂಬಂಧ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ. ಜೂನ್ 24 ರಂದು ನನಗೆ ಕೊಲೆ ಮಾಡುವ ಉದ್ದೇಶ ಇರಲಿಲ್ಲ, ಬೆದರಿಕೆ ಹಾಕಲು ಹೋಗಿದ್ದೆ, ಆದರೆ ಎಲ್ಲರ ಮುಂದೆ ನನಗೆ ಅವಮಾನ ಮಾಡಿದಳು, ಇದರಿಂದ ಸಿಟ್ಟಿಗೆದ್ದು ಕೊಲೆ ಮಾಡಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ಹೇಳಿದ್ದಾನೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನ್ಯಾಯಾಧೀಶರು ಆರೋಪಿ ರಾಮ್ ಕುಮಾರ್ ನನ್ನು ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. ಮೊದಲ ದಿನದ ವಿಚಾರಣೆ ವೇಳೆ ಆರೋಪಿ ರಾಮ್ ಕುಮಾರ್ ಈ ವಿಚಾರ ಬಾಯಿಬಿಟ್ಟಿದ್ದಾನೆ.
ಮೊದಲ ಬಾರಿ ಸ್ವಾತಿಯನ್ನು ಚೂಲೈಮಡು ರಸ್ತೆಯಲ್ಲಿ ನೋಡಿದ್ದೆ, ಆಕೆ ರಸ್ತೆ ದಾಟುವಾಗ ಆಕೆಯನ್ನು ಹಿಂಬಾಲಿಸಿಕೊಂಡು ಹೋದೆ. ಜೊತೆಗೆ ಪರಿಚಯ ಮಾಡಿಕೊಂಡೆ. ಬಿಇ ಮಾಡಿರುವ ತನಗೆ ನೌಕರಿ ಅವಕಾಶಗಳು ಇದ್ದರೆ ತಿಳಿಸುವಂತೆ ಆಕೆಗೆ ಹೇಳಿದ್ದೆ ಎಂದು ಆರೋಪಿ ರಾಮ್ ಕುಮಾರ್ ಪೊಲೀಸರಿಗೆ ತಿಳಿಸಿದ್ದಾನೆ.
ಆರಂಭಿಕ ಪರಿಚಯದ ನಂತರ ನಾನು ಆಕೆಯ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದೆ. ಆದರೆ ಕೋಪಗೊಂಡ ಆಕೆ ಎಲ್ಲರ ಮುಂದೆ ನನ್ನನ್ನು ಅವಮಾನ ಮಾಡಿದಳು. ಜೂನ್ 24 ರಂದು ಸ್ವಾತಿಯನ್ನು ಹೆದರಿಸಲು ನಾನು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದೆ. ಆದರೆ ಕೋಪೊದ್ರಿಕ್ತನಾಗಿ ತನ್ನ ಬ್ಯಾಗಿ ನಲ್ಲಿದ್ದ ಕುಡುಗೋಲಿನಿಂದ ಆಕೆಯ ಮೇಲೆ ಹಲ್ಲೆ ನಡೆಸಿದ್ದಾಗಿ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿದ್ದಾಗ ಆರೋಪಿ ನೀಡುವ ಹೇಳಿಕೆಯನ್ನು ನ್ಯಾಯಾಲಯ ಹೆಚ್ಚಾಗಿ ಪರಿಗಣಿಸುವುದಿಲ್ಲ. ಆದರೆ ಆರೋಪಿ ಹೇಳಿಕೆಗೂ ಸೂಕ್ತ ಸಾಕ್ಷ್ಯಾಧಾರಗಳಿಗೂ ಹೊಂದಾಣಿಕೆಯಾದರೇ ಮಾತ್ರ ಆರೋಪಿ ಹೇಳಿಕೆಗೆ ಮಾನ್ಯತೆ ನೀಡಲಾಗುತ್ತದೆ.
Comments are closed.