ಪ್ರಮುಖ ವರದಿಗಳು

ಬಿಹಾರ ಬಿಕ್ಕಟ್ಟು ಉಲ್ಬಣ: ಮಾಂಜಿ ಪದಚ್ಯುತಿ, ನಿತೀಶ್‌ ನೂತನ ಸಿಎಂ

Pinterest LinkedIn Tumblr

nitish-kumar-chhapra-650

ಪಟನಾ: ಬಿಹಾರ ಸರಕಾರದ ಚುಕ್ಕಾಣಿಯನ್ನು ಮರಳಿ ಹಿಡಿಯಲು ಮಾಜಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಜ್ಜಾಗಿದ್ದು, ಶನಿವಾರ ನಡೆದ ಜೆಡಿಯು ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಬಂಡಾಯ ಹೂಡಿರುವ ಜಿತನ್ ರಾಮ್ ಮಾಂಜಿ ಅವರನ್ನು ಪಕ್ಷದಿಂದ ವಜಾಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಶಾಸಕಾಂಗ ಸಭೆಗೂ ಮುನ್ನ ಸಂಪುಟ ಸಭೆ ನಡೆಸಿದ್ದ ಮಾಂಜಿ, ವಿಧಾನಸಭೆ ವಿಸರ್ಜನೆ ಮಾಡುವಂತೆ ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿಗೆ ಶಿಫಾರಸು ಮಾಡಿದ್ದಾರೆ. ಆದರೆ ಒಟ್ಟು 29 ಸಚಿವರ ಪೈಕಿ 21 ಸಚಿವರು ಸರಕಾರ ವಿಸರ್ಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಮಾಂಜಿ ಶಿಫಾರಸನ್ನು ಅಂಗೀಕರಿಸದಂತೆ ಕೋರಿ ಇವರು ಪ್ರತ್ಯೇಕವಾಗಿ ರಾಜ್ಯಪಾಲರನ್ನು ಭೇಟಿಯಾಗುವುದಾಗಿ ತಿಳಿಸಿದ್ದಾರೆ. ಹಾಗೆಯೇ, ಮಾಂಜಿ ಜತೆ 7 ಸಚಿವರು ಗುರುತಿಸಿಕೊಂಡಿದ್ದು, ಇವರಲ್ಲೂ ಕೆಲವರು ಮರಳಿ ನಿತೀಶ್ ಬೆಂಬಲಕ್ಕೆ ನಿಂತಿರುವ ವರದಿಗಳಿವೆ. ಹೀಗಾಗಿ ನಿತೀಶ್ ಬೆಂಬಲಕ್ಕಿದ್ದ ಇಬ್ಬರು ಸಚಿವರನ್ನು ಕೈ ಬಿಡಲು ಮಾಂಜಿ ಮಾಡಿರುವ ಶಿಫಾರಸನ್ನು ರಾಜ್ಯಪಾಲ ತ್ರಿಪಾಠಿ ಅಂಗೀಕರಿಸಿದ್ದರೂ, ಸರಕಾರ ವಿಸರ್ಜನೆಗೆ ಮಾಡಿರುವ ಶಿಫಾರಸು ಊರ್ಜಿತವಾಗುವ ಲಕ್ಷಣಗಳಿಲ್ಲ.

ಜೆಡಿಯು ಅಧ್ಯಕ್ಷ ಶರದ್ ಯಾದವ್ ನೇತೃತ್ವದಲ್ಲಿ ನಡೆದ ಜೆಡಿಯು ಶಾಸಕಾಂಗ ಸಭೆಯಲ್ಲಿ 97 ಶಾಸಕರು ಪಾಲ್ಗೊಂಡಿದ್ದರು. ಅಲ್ಲದೇ 41 ವಿಧಾನಪರಿಷತ್ ಸದಸ್ಯರ ಪೈಕಿ 37 ಮಂದಿ ಭಾಗವಹಿಸಿದ್ದರು ಎಂದು ಪಕ್ಷದ ಮೂಲಗಳು ತಿಳಿಸಿವೆ. ಮಾಂಜಿ ಮತ್ತು ಅವರ ಪರ ಇರುವ 7 ಸಚಿವರು, ಕೆಲವು ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಭೆಯಿಂದ ದೂರ ಉಳಿದಿದ್ದರು.

ಈ ಸಭೆಗೂ ಮುನ್ನವೇ ಸಂಪುಟ ಸಭೆ ನಡೆಸಿದ ಮಾಂಜಿ, ಸದ್ಯದ ಬೆಳವಣಿಗೆಗಳ ಬಗ್ಗೆ ಚರ್ಚಿಸಿದರು. ನಂತರ ರಾಜ್ಯಪಾಲ ಕೇಸರಿ ನಾಥ್ ತ್ರಿಪಾಠಿಯನ್ನು ಭೇಟಿ ಮಾಡಿ, ವಿಧಾನಸಭೆ ವಿಸರ್ಜನೆ ಮಾಡುವಂತೆ ಕೋರಿದರು.

ರಾಜ್ಯಪಾಲರನ್ನು ಭೇಟಿ ಮಾಡಿದ ಸಂದರ್ಭದಲ್ಲಿ, ಪಿ ಕೆ ಶಾಹಿ ಮತ್ತು ರಾಜೀವ್ ರಂಜನ್ ಸಿಂಗ್ ಲಲ್ಲನ್‌ರನ್ನು ವಜಾಗೊಳಿಸಬೇಕೆಂದೂ ಮಾಂಜಿ ಶಿಫಾರಸು ಸಲ್ಲಿಸಿದ್ದರು. ಅದಕ್ಕೆ ರಾಜ್ಯಪಾಲರು ಅಸ್ತು ಎಂದಿದ್ದಾರೆ. ಪದಚ್ಯುತಗೊಂಡಿರುವ ಈ ಇಬ್ಬರು ಸಚಿವರು ನಿತೀಶ್‌ರ ಆಪ್ತರೆಂದು ಗುರ್ತಿಸಿಕೊಂಡಿದ್ದರು.

ಬಿಹಾರದಲ್ಲಿ ಕಳೆದ ಲೋಕಸಭೆ ಚುನಾವಣೆಯಲ್ಲಿ 40 ಕ್ಷೇತ್ರಗಳ ಪೈಕಿ 2ರಲ್ಲಷ್ಟೇ ಜೆಡಿಯು ಜಯ ಗಳಿಸಿತ್ತು. ಪಕ್ಷದ ವೈಫಲ್ಯದಿಂದಾಗಿ ಮುಖ್ಯಮಂತ್ರಿ ಸ್ಥಾನ ತೊರೆದಿದ್ದ ನಿತೀಶ್ ಕುಮಾರ್, ತಮ್ಮ ಭಂಟ ಮಾಂಜಿ ಅವರಿಗೆ ಪಟ್ಟ ಕಟ್ಟಿದ್ದರು. ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಉದ್ದೇಶದಿಂದ ಈಗ ಮತ್ತೆ ನಿತೀಶ್‌ರನ್ನೇ ಮುಖ್ಯಮಂತ್ರಿ ಮಾಡುವ ಯತ್ನ ನಡೆದಿದ್ದು, ರಾಜೀನಾಮೆ ನೀಡುವಂತೆ ಮಾಂಜಿಗೆ ಜೆಡಿಯು ಸೂಚಿಸಿತ್ತು. ಆದರೆ ಕುರ್ಚಿ ಬಿಡಲು ಒಪ್ಪದ ಮಾಂಜಿ, ಪಕ್ಷದ ವರಿಷ್ಠರ ವಿರುದ್ಧ ಬಂಡೆದ್ದಿದ್ದು ಬಿಕ್ಕಟ್ಟು ಸೃಷ್ಟಿಯಾಗಿದೆ.

243 ಸದಸ್ಯ ಬಲದ ಬಿಹಾರದಲ್ಲಿ ಜೆಡಿಯು 115, ಬಿಜೆಪಿ 88, ಆರ್‌ಜೆಡಿ 24, ಕಾಂಗ್ರೆಸ್ 5, ಸಿಪಿಐ 1, ಪಕ್ಷೇತರರು 5 ಶಾಸಕರಿದ್ದಾರೆ.

ಕಮಲ ತಂತ್ರಗಾರಿಕೆ: ನಿತೀಶ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ, ”ಮಹಾದಲಿತರಿಗೆ(ಮಾಂಜಿ) ನಿತೀಶ್ ಅನ್ಯಾಯ ಮಾಡುತ್ತಿದ್ದಾರೆ,” ಎಂದು ದೂರಿದೆ. ಅಲ್ಲದೇ, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ರಾಜ್ಯ ನಾಯಕರು, ಪಕ್ಷದ ಅಧ್ಯಕ್ಷ ಅಮಿತ್ ಶಾ ಜತೆ ಸಂಪರ್ಕದಲ್ಲಿದ್ದಾರೆ. ಶಾ ಅವರನ್ನು ದಿಲ್ಲಿಯಲ್ಲಿ ಭೇಟಿಯಾದ ಪಕ್ಷದ ಮುಖಂಡ, ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಮತ್ತು ಇತರೆ ನಾಯಕರು ಸದ್ಯದ ರಾಜಕೀಯ ಬೆಳವಣಿಗೆ ಕುರಿತು ಚರ್ಚಿಸಿದ್ದಾರೆ. ಬಿಹಾರದಲ್ಲಿ ಬಿಜೆಪಿ ನಡೆ ಕುರಿತಾಗಿ ನಡೆದ ಸಭೆಯಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್, ಪಕ್ಷದ ಪ್ರಧಾನ ಕಾರ್ಯದರ್ಶಿ ಭೂಪೇಂದ್ರ ಸಿಂಗ್, ಹಿರಿಯ ನಾಯಕ ನಂದ್ ಕಿಶೋರ್ ಯಾದವ್ ಮತ್ತಿತರರು ಪಾಲ್ಗೊಂಡಿದ್ದರು. ಶನಿವಾರ ಬೆಳಗ್ಗೆ ಶಾ ಜತೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಅನಂತ್ ಕುಮಾರ್ ಅವರು ಬಿಹಾರ ರಾಜಕೀಯ ಕುರಿತು ಚರ್ಚಿಸಿದ್ದರು. ಬದಲಾದ ಪರಿಸ್ಥಿತಿಯಲ್ಲಿ ಮಾಂಜಿ ಅವರು ದಿಲ್ಲಿಯಲ್ಲಿ ಬಿಜೆಪಿ ನಾಯಕರನ್ನು ಭೇಟಿ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ತೊಡೆ ತಟ್ಟಿದ ಮಾಂಜಿ: ಈ ಮೊದಲು ನಿತೀಶ್‌ರ ಬಲಗೈ ಭಂಟನಂತೆಯೇ ಕಾಣಿಸಿಕೊಂಡಿದ್ದ ಮಾಂಜಿ ಈಗ ತೊಡೆ ತಟ್ಟಿ ನಿಂತಿದ್ದಾರೆ. ”ದುಶ್ಯಾಸನನು ದ್ರೌಪದಿಯ ಸೀರೆ ಎಳೆಯುತ್ತಿದ್ದರೆ, ಭೀಷ್ಮ ಪಿತಾಮಹಾ ಮೂಕ ಪ್ರೇಕ್ಷಕನಾಗಿದ್ದ. ನನ್ನಂಥ ಮಹಾ ದಲಿತ ಮುಖ್ಯಮಂತ್ರಿಯನ್ನು ಕೆಳಗಿಳಿಸುತ್ತಿರುವ ಹೊತ್ತಿನಲ್ಲಿ ಭೀಷ್ಮನಂತೆಯೇ ನಿತೀಶ್ ಅವರೂ ಮೂಕ ಪ್ರೇಕ್ಷಕರಾಗಿದ್ದಾರೆ. ಮಹಾಭಾರತಕ್ಕೂ ಸದ್ಯದ ಪರಿಸ್ಥಿತಿಗೂ ಒಂದೇ ವ್ಯತ್ಯಾಸವೆಂದರೆ, ಇಲ್ಲಿ ನಿತೀಶ್ ಅವರೇ ದುಶ್ಯಾಸನರಾಗಿದ್ದಾರೆ. ಆದರೆ ನಾನು ಸುಮ್ಮನೇ ಕೂರುವುದಿಲ್ಲ. ಏನಾಗುತ್ತದೆಯೋ ನೋಡೋಣ,” ಎಂದು ಮಾಂಜಿ ಹೇಳಿದ್ದಾರೆ. —–

ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರು ಬಿಹಾರ ಸರಕಾರದ ಬಂಡಾಯದ ಕತೆಯನ್ನು ಬರೆದಿದ್ದಾರೆ. ಈ ಎಲ್ಲ ಬಿಕ್ಕಟ್ಟಿಗೆ ಅವರೇ ಸೂತ್ರದಾರರು. ಆದರೆ ಅವರ ಆಟ ನಡೆಯದು. ಮತ್ತೆ ನಿತೀಶ್ ಅವರು ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಯಾರ ಕೈಲೂ ಸಾಧ್ಯವಾಗದು. -ಕೆ ಸಿ ತ್ಯಾಗಿ, ಜೆಡಿಯು ಪ್ರಧಾನ ಕಾರ್ಯದರ್ಶಿ

ಸಂಪುಟ ಸಭೆಯಲ್ಲಿ ವಿಧಾನಸಭೆ ವಿಸರ್ಜನೆಗೊಳಿಸುವ ಪ್ರಸ್ತಾವನೆಗೆ ಬರೀ 7 ಸಚಿವರು ಬೆಂಬಲಿಸಿದರು. ನಿತೀಶ್ ಪರ ಗುರ್ತಿಸಿಕೊಂಡಿರುವ 21 ಸಚಿವರು ಇದನ್ನು ಬಲವಾಗಿ ವಿರೋಧಿಸಿದ್ದರು. – ಬ್ರಿಜೇಂದ್ರ ಯಾದವ್, ಮಾಂಜಿ ಪರ ನಿಂತಿರುವ ವಿತ್ತ ಸಚಿವ

Write A Comment